AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ ನೊಟೀಸ್ ವಾಪಸಿಗೆ ಸಂಪುಟ ನಿರ್ಣಯ, ರಾಜ್ಯಪಾಲರ ಮುಂದಿನ ನಡೆ ಏನು?

ಸಿದ್ದರಾಮಯ್ಯ ಕರ್ನಾಟಕ ರಾಜ್ಯ ರಾಜಕಾರಣದ ಪವರ್‌ ಫುಲ್ ಲೀಡರ್. ಕಳಂಕರಹಿತ ನಾಯಕ. ಕ್ಲೀನ್ ಹ್ಯಾಂಡ್‌, ಕ್ಲೀನ್ ಇಮೇಜ್‌ ಅಂತಾನೇ ಫೇಮಸ್. ಆದ್ರೆ, ಇದೀಗ ಸಿದ್ದರಾಮಯ್ಯಗೆ ಮುಡಾ ಹಗರಣ ಸಂಕಷ್ಟ ತಂದೊಡ್ಡಿದೆ. ಹಗರಣದ ಆರೋಪ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿದ್ದು, ಇದು ಕಾಂಗ್ರೆಸ್ ಸರ್ಕಾರದ ಬುಡವನ್ನೇ ಅಲುಗಾಡಿಸಿ ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಚಿವ ಸಂಪುಟದಲ್ಲಿ ಮುಡಾ ಪ್ರಾಸಿಕ್ಯೂಷನ್ ನೊಟೀಸ್ ವಾಪಸಿಗೆ ನಿರ್ಣಯ ಅಂಗೀಕರಿಸಿದೆ. ಹಾಗಾದ್ರೆ, ಈ ಸಚಿವ ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಮೀರುವಂತಿಲ್ವಾ? ಸಂಪುಟ ನಿರ್ಣಯದ ಅಂಗೀಕಾರವಾಗಿದ್ದರಿಂದ ರಾಜ್ಯಪಾಲರ ಮುಂದಿನ ನಡೆ ಏನು ಎನ್ನುವ ವಿವರ ಇಲ್ಲಿದೆ.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ ನೊಟೀಸ್ ವಾಪಸಿಗೆ ಸಂಪುಟ ನಿರ್ಣಯ, ರಾಜ್ಯಪಾಲರ ಮುಂದಿನ ನಡೆ ಏನು?
ಸಿದ್ದರಾಮಯ್ಯ
ರಮೇಶ್ ಬಿ. ಜವಳಗೇರಾ
|

Updated on: Aug 01, 2024 | 10:45 PM

Share

ಬೆಂಗಳೂರು, (ಆಗಸ್ಟ್ 01): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದಕೆಲ್ಲಾ ಕಾರಣ ಮುಡಾ ಹಗರಣದ ಆರೋಪದ ಮೇಲೆ ಮುಖ್ಯಮಂತ್ರಿಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿರುವುದು. ಹೌದು….ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಾಹಂ, ರಾಜ್ಯಪಾಲರಿಗೆ ನೀಡಿದ್ದ ಒಂದೇ ಒಂದು ದೂರು, ಸಿಎಂ ಸಿದ್ದರಾಮಯ್ಯ ಬುಡಕ್ಕೆ ಬಂದು ನಿಂತಿದೆ. ದೂರಿನ ಬಳಿಕ ರಾಜ್ಯಪಾಲರು ಹಗರಣದ ಬಗ್ಗೆ ಏಳು ದಿನಗಳ ಒಳಗೆ ಹೆಚ್ಚಿನ ಮಾಹಿತಿ ನೀಡುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶೋಕಸ್ ನೋಟಿಸ್ ನೀಡಿದ್ದಾರೆ. ರಾಜ್ಯಪಾಲರಿಂದ ಈ ನೋಟಿಸ್ ಬರುತ್ತಿದ್ದಂತೆಯೇ ಇತ್ತ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಮುಡಾ ಪ್ರಾಸಿಕ್ಯೂಷನ್ ನೊಟೀಸ್ ವಾಪಸಿಗೆ ನಿರ್ಣಯ ಅಂಗೀಕರಿಸಿದೆ. ಅಲ್ಲದೇ ಡಿಕೆ ಶಿವಕುಮಾರ್ ಸೇರಿದಂತೆ ಇತರೆ ಹಿರಿಯ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಶೋಕಾಸ್ ನೋಟಿಸ್ ವಾಪಸ್ ಪಡೆಯಬೇಕೆಂದು ರಾಜ್ಯಪಾಲರಿಗೆ ಸಲಹೆ ನೀಡಿದ್ದಾರೆ. ಆದ್ರೆ, ಇದೀಗ ಉದ್ಭವಿಸಿರುವ ಪ್ರಶ್ನೆ ರಾಜ್ಯಪಾಲರ ಮುಂದಿನ ನಡೆ ಏನು?  ಸಂಪುಟದ ನಿರ್ಣಯವನ್ನು ಒಪ್ಪಿಕೊಂಡು ನೋಟಿಸ್ ವಾಪಸ್ ಪಡೆದುಕೊಳ್ಳುತ್ತಾರಾ? ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದಿನ ರಾಜ್ಯಪಾಲರ ಮಾರ್ಗವನ್ನೇ ಅನುಸರಿಸುತ್ತಾರಾ ಗೆಹ್ಲೋಟ್?

ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ಕಾನೂನುಬಾಹಿರ ಡಿನೋಟಿಫಿಕೇಷನ್​ಗಳ ಆರೋಪಗಳು ಕೇಳಿಬಂದಿದ್ದಾಗ  ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಸಂಪುಟದ ನಿರ್ಣಯವನ್ನೇ ಲೆಕ್ಕಿಸದೇ ವಿಚಾರಣೆಗೆ ಅನುಮತಿ ನೀಡಿದ್ದರು. 2004ರ ಸುಪ್ರೀಂಕೋರ್ಟ್​ ತೀರ್ಪಿನ ಒಂದು ಅಂಶವನ್ನು ಕೋಟ್​ ಮಾಡಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು. ಇದೀಗ ಇದೇ  ಅದೇ ಮಾದರಿಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು  ಸಂಪುಟ ನಿರ್ಣಯ ಅಂಗೀಕಾರವನ್ನು ಧಿಕ್ಕರಿಸಿ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಬಹುದು.

ಇದನ್ನೂ ಓದಿ: 2010ರಲ್ಲಿ ಯಡಿಯೂರಪ್ಪಗೆ ಆದಂತೆ ಸಿದ್ದರಾಮಯ್ಯಗೆ ಕುತ್ತು ತರುತ್ತಾ ಪ್ರಾಸಿಕ್ಯೂಷನ್? ಅಂದು ಏನಾಗಿತ್ತು ಗೊತ್ತಾ?

ಬಿಎಸ್​​ವೈ ಕೇಸ್​ನಲ್ಲೂ ಸಂಪುಟ ನಿರ್ಣಯ ಧಿಕ್ಕರಿಸಿದ್ದ ರಾಜ್ಯಪಾಲ

ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ಕಾನೂನುಬಾಹಿರ ಡಿನೋಟಿಫಿಕೇಷನ್​ಗಳ ಆರೋಪಗಳು ಬಂದಿದ್ದವು. ಈ ಆರೋಪಗಳ ಬಗ್ಗೆ ಕೋರ್ಟ್​ಗೆ ಖಾಸಗಿ ದೂರು ಸಲ್ಲಿಸಲು ಮುಂದಾಗಿದ್ದ ವಕೀಲ ಸಿರಾಜಿನ್ ಬಾಷಾ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ 2011 ರಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಬಳಿಕ ಬಿಜೆಪಿ ಹೈಕಮಾಂಡ್ ಹಲವರಿಂದ ಕಾನೂನು ಸಲಹೆ ಪಡೆದುಕೊಂಡು ಬಿಎಸ್​ವೈ  ಸರ್ಕಾರದ ಮೂಲಕ ರಾಜ್ಯಪಾಲರಿಗೆ ಉತ್ತರಿಸಿತ್ತು. ಆದರೂ ಸಹ ಅಂದಿನ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು. ಬಳಿಕ ಸಂಪುಟ ಸಭೆ ನಡೆಸಿ ಪ್ರಾಸಿಕ್ಯೂಷನ್ ವಿರುದ್ಧ ನಿರ್ಣಯ ಅಂಗೀಕರಿಸಲಾಗಿತ್ತು. ಆದ್ರೆ, ಸಂಪುಟ ನಿರ್ಣಯನ್ನು ಧಿಕ್ಕರಿಸಿ ಬಿಎಸ್​ವೈ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದರು.

2004 ರಲ್ಲಿ ಇಂತಹದೇ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಪೀಠವೊಂದು ಸ್ಪಷ್ಟವಾದ ತೀರ್ಪು ನೀಡಿದೆ. ರಾಜ್ಯಪಾಲರಾದವರು ಸಾಮಾನ್ಯವಾಗಿ ಸಚಿವರ ಸಲಹೆ, ಅಭಿಪ್ರಾಯವನ್ನು ಪಡೆದು ಕಾರ್ಯನಿರ್ವಹಿಸಬೇಕು ಹಾಗೂ ನಿರ್ಧಾರ ಪ್ರಕಟಿಸಬೇಕೇ ಹೊರತು ಅವರ ವಿವೇಚನೆಯಿಂದ ಅಲ್ಲ. ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ರಾಜ್ಯಪಾಲರು ಸ್ವಂತ ವಿವೇಚನೆಯಿಂದ ತೀರ್ಮಾನ ತೆಗೆದುಕೊಳ್ಳುವುದು ಸಮಂಜಸ ಎನಿಸುತ್ತದೆ ಎಂದು ತೀರ್ಪು ನೀಡಿತ್ತು. ಈ ಹಿಂದೆ ಕರ್ನಾಟಕದ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಇದೇ ತೀರ್ಪನ್ನು ಆಧರಿಸಿ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ಇತಿಹಾಸ.

ಇದನ್ನೂ ಓದಿ: ಮುಡಾ ಪ್ರಾಸಿಕ್ಯೂಷನ್ ನೊಟೀಸ್ ವಾಪಸಿಗೆ ಸಚಿವ ಸಂಪುಟ ನಿರ್ಣಯ, ರಾಜ್ಯಪಾಲ-ಸರ್ಕಾರದ ನಡುವೆ ಸಂಘರ್ಷಕ್ಕೆ ಮುನ್ನುಡಿ

ಸಾಂವಿಧಾನಿಕವಾಗಿ ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟಿರುವ ನಿಯಮಗಳನ್ನು ರಾಜ್ಯಪಾಲರು ಪಾಲಿಸಲೇಬೇಕು. ಅನಿರ್ದಿಷ್ಟ ಕಾಲ ಯಾವುದೇ ನಿರ್ಧಾರ ಕೈಗೊಳ್ಳದೆ ಇರುವ ಆಯ್ಕೆಯನ್ನು ಸಂವಿಧಾನ ನೀಡಿಲ್ಲವಾದ್ದರಿಂದ ಸಂವಿಧಾನದ ಅನ್ವಯ ಮುಖ್ಯಮಂತ್ರಿ ಅಥವಾ ಸಚಿವ ಸಂಪುಟ ಸಲಹೆಗಳನ್ನು ಆಧರಿಸಿಯೇ ರಾಜ್ಯಪಾಲರು ಅಧಿಕಾರವನ್ನು ಚಲಾಯಿಸಬಹುದಾಗಿದೆ.

ಆದ್ರೆ, ಈ ಹಿಂದೆ ಯಡಿಯೂರಪ್ಪ ವಿರುದ್ಧ ವಿಚರಣೆಗೆ ಅನುಮತಿ ವಿರುದ್ಧ ಸಂಪುಟ ಸಭೆ ಒಂದು ಸಾಲಿನ ನಿರ್ಣಯ ಅಂಗೀಕರಿಸಿದ್ದರು ಸಹ ಅದನ್ನು ಲೆಕ್ಕಿಸಿದೇ ಹಂಸರಾಜ್ ಭಾರದ್ವಾಜ್ ಅವರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು. ಇದೀಗ ಅದೇ ಮಾದರಿ ಸಿದ್ದರಾಮಯ್ಯ ಪ್ರಕರಣದಲ್ಲಿ ಆಗಬಹುದು. ಹೀಗಾಗಿ ಥಾವರ್ ಚಂಡ್ ಗೆಹ್ಲೋಟ್ ಅವರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದ್ದು, ಎಲ್ಲರ ಚಿತ್ತ ರಾಜಭವನದತ್ತ ನೆಟ್ಟಿದೆ.

ಒಟ್ಟಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿರೋದು ಕಾಂಗ್ರೆಸ್ ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದು, ಮುಂದಿನ ನಡೆ ಬಗ್ಗೆ ಚಿಂತನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ