ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ; ಹೆಣ್ಣು ಎಂದು ಗರ್ಭಪಾತ, ಆದ್ರೆ ಅದು ಗಂಡು ಮಗುವಾಗಿತ್ತು

ಇತ್ತೀಚೆಗೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಗರ್ಭಪಾತದಿಂದ ಮಹಾರಾಷ್ಟ್ರ ಮಹಿಳೆ ಸಾವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮಹಾಲಿಂಗಪುರದಲ್ಲಿ ಮತ್ತೊಂದು ಗರ್ಭಪಾತ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ವೈದ್ಯರ ವಿರುದ್ದ ದೂರು ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ.

ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ; ಹೆಣ್ಣು ಎಂದು ಗರ್ಭಪಾತ, ಆದ್ರೆ ಅದು ಗಂಡು ಮಗುವಾಗಿತ್ತು
ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 06, 2024 | 4:27 PM

ಬಾಗಲಕೋಟೆ, ಸೆ.06: ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ  ಮಹಾಲಿಂಗಪುರ(Mahalingpur) ಪಟ್ಟಣದಲ್ಲಿ ಮತ್ತೊಂದು ಗರ್ಭಪಾತ ಪ್ರಕರಣ ಬೆಳಕಿಗೆ ಬಂದಿದೆ. ಹೆಣ್ಣು ಎಂದು ಗರ್ಭಪಾತ ಮಾಡುವ ವೇಳೆ ಗಂಡು ಮಗು ಎಂದು ಗೊತ್ತಾಗಿದೆ. ಈ ಹಿನ್ನೆಲೆ ಕೇಸ್‌ ಬಹಿರಂಗವಾಗಿದೆ. ಪಟ್ಟಣದ ಪಾಟೀಲ್​ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಡಾ. ರಾಜೇಂದ್ರ ಪಾಟೀಲ್ ವಿರುದ್ಧ ದೂರು ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಡೆಲಿವರಿ ಥಿಯೇಟರ್, ಸ್ಕ್ಯಾನಿಂಗ್ ಸೆಂಟರ್ ಸೀಜ್​

ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆ ಡಿಹೆಚ್​ಒ ಸುವರ್ಣ ಕುಲಕರ್ಣಿ ಹಾಗೂ ಮುಧೋಳ ಟಿಹೆಚ್​ಒ ಮಲಘಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣ ಡೆಲಿವರಿ ಥಿಯೇಟರ್, ಸ್ಕ್ಯಾನಿಂಗ್ ಸೆಂಟರ್, ಎಮ್​ಆರ್​ಡಿ ರೂಮ್ ಸೀಜ್ ಮಾಡಿದ್ದಾರೆ. ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಗ್ರಾಮದ ‌ಸರಸ್ವತಿ ಹಳ್ಳೂರ (24) ಎಂಬ ಮಹಿಳೆಯ 14 ವಾರಗಳ ಭ್ರೂಣದ ಗರ್ಭಪಾತ ಮಾಡಲಾಗಿದೆ.

ಇದನ್ನೂ ಓದಿ:ಮಹಾಲಿಂಗಪುರದಲ್ಲಿ ಭ್ರೂಣಹತ್ಯೆ, ಮಹಿಳೆ ಸಾವು ಕೇಸ್​: ಏಳು ಜನರ ವಿರುದ್ಧ ಎಫ್​​ಐಆರ್ ದಾಖಲು

ಇತ್ತೀಚೆಗೆ ಮಹಾಲಿಂಗಪುರದಲ್ಲಿ ಗರ್ಭಪಾತದಿಂದ ಮಹಾರಾಷ್ಟ್ರ ಮಹಿಳೆ ಸೋನಾಲಿ ಕದಮ್ ಎಂಬಾಕೆಯ ಸಾವಾಗಿತ್ತು. ಈ ಹಿನ್ನಲೆ ಮಹಾರಾಷ್ಟ್ರದ ದೂದಗಾವ್​ನ ಸಂಜಯ ಗೌಳಿ, ಸಂಗೀತಾ ಸಂಜಯ ಗೌಳಿ, ವಿಜಯ ಸಂಜಯ ಗೌಳಿ, ಮಿರಜ್ ತಾಲೂಕಿನ ಕುಪ್ಪವಾಡ ಗ್ರಾಮದ ಡಾ.ಮಾರುತಿ ಬಾಬಸೋ ಖಿರಾತ್, ಸಾಂಗ್ಲಿ ತಾಲೂಕಿನ ಅಥಣಿ ನಗರದ ಡಾ.ಕೊತ್ವಾಲೆ, ಮಹಾಲಿಂಗಪುರದ ಕವಿತಾ ಚನ್ನಪ್ಪ ಬದನ್ನವರ ಮತ್ತು ಮಿರಜ್ ತಾಲೂಕಿನ ಜೈಸಿಂಗಪುರದ ಒಬ್ಬ ವೈದ್ಯ ಸೇರಿ ಏಳು ಜನರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿತ್ತು. ಇದೊಂದು ವ್ಯವಸ್ಥಿತ ಜಾಲ ಇರುವ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದ ಪೊಲೀಸರು ತನಿಖೆ‌ ಮುಂದುವರೆಸಿದ್ದಾರೆ. ಇದೀಗ ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ