ಬಾಗಲಕೋಟೆ: ಹಳೆ ಪಿಂಚಣಿಗಾಗಿ ಹೋರಾಡುತ್ತಿದ್ದ ನಿವೃತ್ತ ಶಿಕ್ಷಕ; ಸರಕಾರ ಸ್ಪಂದಿಸದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆ
ಹಳೆ ಪಿಂಚಣಿಗಾಗಿ 141 ದಿನದಿಂದ ಹೋರಾಡಿದ ಜಿಲ್ಲೆಯ ಬಾದಾಮಿಯ ಪಟ್ಟದ ಕಲ್ಲು ಗ್ರಾಮದ ನಿವೃತ್ತ ಶಿಕ್ಷಕ ಜೀವ ಕಳೆದುಕೊಂಡಿದ್ದಾರೆ. ಕಣ್ಣು ಕಾಣದ, ಕಿವಿ ಕೇಳಿಸದ ಸರಕಾರದ ನಡೆಯಿಂದ ಮನನೊಂದು ಜೀವವನ್ನೇ ತ್ಯಾಗ ಮಾಡಿದ್ದು, ಇದರಿಂದ ಅವರ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಬಾಗಲಕೋಟೆ: ಹಳೆ ಪಿಂಚಣಿಗಾಗಿ ಹೋರಾಡಿ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಶಿಕ್ಷಕನ ಶವ ಇಟ್ಟು ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು. ಸರಕಾರದ ವಿರುದ್ಧ ಘೋಷಣೆ ಹಾಕಿ ಆಕ್ರೋಶ, ಅಂದ ಹಾಗೆ ಈ ದೃಶ್ಯ ಕಂಡು ಬಂದಿದ್ದು ಜಿಲ್ಲೆಯ ಬಾದಾಮಿ ಹಾಗೂ ಪಟ್ಟದಕಲ್ಲು ಗ್ರಾಮದಲ್ಲಿ. ಈ ಎಲ್ಲ ದೃಶ್ಯ ನೋಡಿದರೆ ಹೋರಾಟಗಾರರ ಜೀವಕ್ಕೆ ಸರಕಾರ ಎಷ್ಟು ಬೆಲೆ ನೀಡುತ್ತದೆ ಎಂಬುದು ಅರ್ಥವಾಗುತ್ತದೆ. ಈ ನಿವೃತ್ತ ಶಿಕ್ಷಕನ ಹೆಸರು ಸಿದ್ದಯ್ಯ ಹಿರೆಮಠ, 66 ವರ್ಷದ ಈ ನಿವೃತ್ತ ಶಿಕ್ಷಕನ ಸಾವಿಗೆ ಸರಕಾರದ ನಿರ್ಲಕ್ಷ್ಯವೇ ಕಾರಣ. ಕಳೆದ 141 ದಿನಗಳ ಕಾಲ ಅನುದಾನಿತ ಶಾಲೆ ಶಿಕ್ಷಕರ ಹಳೆ ಪಿಂಚಣಿಗಾಗಿ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ ಹೋರಾಟಗಾರರಿಗೆ ಸರಕಾರ ಸ್ಪಂದನೆ ನೀಡದ ಹಿನ್ನೆಲೆ ಮನನೊಂದು ಬೆಂಗಳೂರಲ್ಲಿ ಪ್ರತಿಭಟನೆ ವೇಳೆ ವಿಷ ಸೇವಿಸಿದ್ದರು. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಿದ್ದಯ್ಯ ಹಿರೇಮಠ ಫೆ.24 ರಂದು ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು ಸರಕಾರವೇ ಇದಕ್ಕೆ ಹೊಣೆ, ಸರಕಾರ ನನ್ನ ಗಂಡನ ಜೀವ ಬಲಿ ಪಡೆಯಿತು ಎಂದು ಪತ್ನಿ ಅಳಲು ತೋಡಿಕೊಂಡಿದ್ದಾರೆ.
ಸಿದ್ದಯ್ಯ ಹಿರೆಮಠ ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು ಗ್ರಾಮದ ವೀರಶೈವ ಪ್ರಗತಿಶೀಲ ಸಂಘದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. 1990 ರಿಂದ ಈ ಶಾಲೆಯಲ್ಲಿ 20 ವರ್ಷಗಳ ಕಾಲ ಕೇವಲ 200 ರಿಂದ 500 ರೂ ಸಂಬಳದಿಂದ ಕೆಲಸ ಮಾಡಿದ್ದರು. 2021 ರಲ್ಲಿ ಶಾಲೆ ಅನುದಾನಕ್ಕೆ ಒಳಪಟ್ಟಾಗ ಸಂಬಳ ಹೆಚ್ಚಾಗಿತ್ತು. ಆದರೆ ಅನುದಾನಕ್ಕೆ ಒಳಪಟ್ಟ ಕೇವಲ 7 ವರ್ಷದಲ್ಲಿ ನಿವೃತ್ತಿಯಾಗಿದ್ದರು. ಅಷ್ಟರಲ್ಲಿ 2006 ರ ಪಿಂಚಣಿ ಪರಿಷ್ಕೃತ ಕಾಯ್ದೆ ಕಾರಣ ಇವರಿಗೆ ಒಂದು ರೂಪಾಯಿ ಕೂಡ ಪಿಂಚಣಿ ಬರುತ್ತಿರಲಿಲ್ಲ.
ಇದನ್ನೂ ಓದಿ:ಪ್ರತಿಭಟನೆಗೆ ಫ್ರೀಡಂ ಪಾರ್ಕ್ಗೆ ಬಂದಿದ್ದ ಶಿಕ್ಷಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ, ಮೃತ ದೇಹ ರಾಯಚೂರಿಗೆ ರವಾನೆ
ಇದರಿಂದ ಕುಟುಂಬ ನಿರ್ವಹಣೆಗೆ ಬಾರಿ ಕಷ್ಟವಾಗುತ್ತಿತ್ತು. ಹೊಲ ಇಲ್ಲ ಸ್ವಂತ ಮನೆಯಿಲ್ಲ, ಐದು ಜನ ಮಕ್ಕಳು. ಹೇಗೋ ಕಷ್ಟಪಟ್ಟು ನಾಲ್ಕು ಜನ ಹೆಣ್ಣು ಮಕ್ಕಳ ಮದುವೆ ಮಾಡಿದ್ದಾರೆ. ಮಗನಿಗೆ ಮದುವೆಯಿಲ್ಲ. ಪಿಂಚಣಿ ಸೌಲಭ್ಯ ಸಿಕ್ಕರೆ ಕುಟುಂಬಕ್ಕೆ ಅನುಕೂಲವಾಗುತ್ತದೆ ಎಂದು ಹೋರಾಟಕ್ಕೆ ಇಳಿದವರು ಇದೀಗ ಜೀವ ಕಳೆದುಕೊಂಡಿದ್ದಾರೆ. ಶವ ಬೆಂಗಳೂರಿನಿಂದ ಬಾದಾಮಿಗೆ ಬಂದಾಗ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಪಿಎಲ್ಡಿ ಬ್ಯಾಂಕ್ ಮುಂದೆ ಶವ ಇರಿಸಿ ಪ್ರತಿಭಟನೆ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲಿಂದ ಪಟ್ಟದಕಲ್ಲು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ‘ಸರಕಾರ ಅವರ ಜೀವ ಬಲಿ ಪಡೆದಿದೆ, ಮುಂದಾದರೂ ಅವರ ತ್ಯಾಗಕ್ಕೆ ಗೌರವಾರ್ಥವಾಗಿ ಅನುದಾನಿತ ಶಿಕ್ಷಕರ ಪಿಂಚಣಿ ಬೇಡಿಕೆ ಈಡೇರಿಸಲಿ, ಅವರ ಕುಟುಂಬಕ್ಕೆ ಅವರ ಇಡೀ ಶಿಕ್ಷಕ ಸೇವೆಯನ್ನು ಪರಿಗಣಿಸಿ ಪಿಂಚಣಿ ನೀಡಬೇಕು ಎಂದು ಹೋರಾಟಗಾರರು ಆಗ್ರಹ ಮಾಡಿದರು.
ಇದನ್ನೂ ಓದಿ:Vijaypura: ಅಧಿಕಾರಿಗಳ ಕಿರುಕುಳ ತಾಳಲಾರದೆ ಶಿಕ್ಷಕ ಆತ್ಮಹತ್ಯೆ: ಬಿಇಓ, ಸಿಆರ್ಪಿ, ಮುಖ್ಯ ಶಿಕ್ಷಕ ಅಮಾನತು
ಇನ್ನು ಈ ಪ್ರಕರಣ ಬಗ್ಗೆ ಪೇಸ್ ಬುಕ್‌ನಲ್ಲಿ ಸಿದ್ದರಾಮಯ್ಯ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರೆ, ಕಂದಾಯ ಸಚಿವ ಆರ್ ಅಶೋಕ, ಇದು ನನ್ನ ವ್ಯಾಪ್ತಿಗೆ ಬರೋದಿಲ್ಲ. ಆದರೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಮಾತಾಡ್ತಿನಿ ಎಂದರು. ಒಟ್ಟಾರೆ ಸರಕಾರ ಸ್ಪಂದಿಸದ ಹಿನ್ನೆಲೆ ಒಬ್ಬ ಬಡ ನಿವೃತ್ತ ಶಿಕ್ಷಕ ಜೀವ ಕಳೆದುಕೊಂಡಿದ್ದಾರೆ. ಸರಕಾರ ಮುಂದಾದರೂ ಅನುದಾನಿತ ಶಾಲಾ ಶಿಕ್ಷಕರ ಹೋರಾಟಕ್ಕೆ ಸ್ಪಂದಿಸುತ್ತಾ ಕಾದು ನೋಡಬೇಕು.
ವರದಿ: ರವಿಮೂಕಿ ಟಿವಿ9 ಬಾಗಲಕೋಟೆ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:40 am, Mon, 27 February 23