
ಬಾಗಲಕೋಟೆ, ನವೆಂಬರ್ 19: ನಗರದಲ್ಲಿ 65 ವರ್ಷದ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆಯಾದ ಸ್ಥಿತಿಯಲ್ಲಿ ಎರಡು ಟ್ರಂಕ್‌ನಲ್ಲಿ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿ, ದೇಹವನ್ನು ಮೂರು ಭಾಗಗಳಾಗಿ ತುಂಡರಿಸಿ ಟ್ರಂಕ್‌ಗಳಲ್ಲಿ ತುಂಬಿ ಬಾವಿಗೆ ಎಸೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವನೂರು ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಮಾರ್ಚ್ 12ರಿಂದ ಅಶೋಕ ಅಂಗಡಿ ನಾಪತ್ತೆಯಾಗಿದ್ದರು. ಮಾರ್ಚ್ 14ರಂದು ಕಾಣೆಯಾದ ಬಗ್ಗೆ ಹುನಗುಂದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಇದೀಗ ಕೊಲೆಯಾದ ಸ್ಥಿತಿಯಲ್ಲಿ ಅಶೋಕ ಶವ ಪತ್ತೆ ಆಗಿದೆ. ಹಾಗಾದರೆ ಮಾರ್ಚ್ 12ರಂದೇ ಕೊಲೆ ನಡೆದಿದೆ.
ಇದನ್ನೂ ಓದಿ: 7 ಜನರ ಹತ್ಯೆ ಕೇಸ್: ತಂದೆ-ಮಗಳಿಗೆ ಖಾಕಿ ಗ್ರಿಲ್; ಕೃತ್ಯದ ಪ್ರತಿಯೊಂದು ದೃಶ್ಯವೂ ರಿಕ್ರಿಯೇಟ್
ಆರೋಪಿಗಳು ಅಶೋಕ ಅಂಗಡಿಯವರಿಂದ ಸುಮಾರು ಒಂದೂವರೆ ಲಕ್ಷ ರೂ ಸಾಲ ಪಡೆದಿದ್ದರು. ಸಾಲದ ಹಣ ಮರಳಿ ನೀಡುವಂತೆ ಕೇಳಿದ್ದಲ್ಲದೆ, ಆಸ್ಪತ್ರೆ ಮತ್ತು ಮನೆ ಬಾಡಿಗೆ ಪಾವತಿಸುವಂತೆ ಒತ್ತಾಯಿಸಿದ್ದಕ್ಕೆ ಆಕ್ರೋಶಗೊಂಡು ಕೊಲೆ ಮಾಡಿದ್ದಾರೆ. ಆರ್‌ಎಂಪಿ ವೈದ್ಯ ಸುದೀಪ್ (24), ಆತನ ಸಹೋದರ ಸಂದೀಪ್ (25), ರಮೇಶ್, ಸಂಗನಗೌಡ ಹಾಗೂ ಇತರರು ಸೇರಿ ಅಶೋಕ ಅಂಗಡಿಯನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಮೂರು ಭಾಗಗಳಾಗಿ ತುಂಡರಿಸಿದ್ದಾರೆ. ತಲೆ ಮತ್ತು ಕಾಲುಗಳನ್ನು ಒಂದು ಟ್ರಂಕ್‌ನಲ್ಲಿ, ಕೈ ಹಾಗೂ ದೇಹದ ಇತರ ಭಾಗಗಳನ್ನು ಮತ್ತೊಂದು ಟ್ರಂಕ್‌ನಲ್ಲಿ ತುಂಬಿದ್ದಾರೆ. ನಂತರ ಟ್ರಂಕ್ಗೆ ಕಲ್ಲು ಕಟ್ಟಿ ವಿಜಯಪುರ ನಗರದ ಬಾವಿಯೊಂದಕ್ಕೆ ಎಸೆದಿದ್ದಾರೆ.
ಅಶೋಕ ಅಂಗಡಿಯವರ ಕಾಂಪ್ಲೆಕ್ಸ್‌ನಲ್ಲಿ ಸುದೀಪ್ ಮತ್ತು ಸಂದೀಪ್ ಬಾಡಿಗೆಗೆ ಮನೆ ಪಡೆದು ಆಸ್ಪತ್ರೆ ಹಾಗೂ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಇತ್ತೀಚೆಗೆ ಅವರು ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದರು. ಕೊಲೆ ಮಾಡಿದ ಬಳಿಕ ಆರೋಪಿಗಳು ಅಶೋಕ ಅಂಗಡಿಯವರ ಕುಟುಂಬಸ್ಥರೊಂದಿಗೆ ಸೇರಿಕೊಂಡು ಅವರಿಗಾಗಿ ಹುಡುಕಾಟ ನಡೆಸುವ ನಾಟಕವಾಡಿದ್ದರು. ಅಷ್ಟೇ ಅಲ್ಲದೆ, ತಮಗೆ ಆಶ್ರಯ ನೀಡಿದ್ದ ಅಶೋಕ ಅಂಗಡಿಯವರ ಮನೆಯಲ್ಲಿಯೇ ದೀಪಾವಳಿ ಆಚರಿಸಿ, ಊಟವನ್ನೂ ಮಾಡಿದ್ದರು.
ಅಶೋಕ ಅಂಗಡಿಯವರ ಮೊಬೈಲ್‌ನಿಂದ ಕೇವಲ 150 ರೂ ವರ್ಗಾವಣೆಯಾಗಿರುವ ಸುಳಿವು ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ನೀಡಿದೆ. ಇತ್ತ ಪೊಲೀಸರಿಗೆ ಸಹೋದರರ ಮೇಲೆ ಅನುಮಾನ ಮೂಡಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್, ಸಂದೀಪ್, ರಮೇಶ್ ಮತ್ತು ಸಂಗನಗೌಡರನ್ನು ಪೊಲೀಸರು ಬಂಧಿಸಿದ್ದಾರೆ. ಸಾಲದ ಹಣ ಮರಳಿ ಕೇಳಿದ್ದಕ್ಕೆ ನಡೆದ ಈ ಬರ್ಬರ ಕೊಲೆ ಪ್ರಕರಣ ಹೂವನೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಬೆಚ್ಚಿಬೀಳಿಸಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.