ಬಿಜೆಪಿಯಲ್ಲಿ ಕಾರ್ಯಕರ್ತರ ಮಟ್ಟದಲ್ಲೂ ಅಸಮಾಧಾನ: ಚಿಗುರಿದ ಕೇಸರಿ ಸಮಿತಿ, ಯತ್ನಾಳ್ ಬೆಂಬಲ
ಬಾಗಲಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರು "ಕೇಸರಿ ಸಮಿತಿ"ಯನ್ನು ರಚಿಸಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸೂಕ್ತ ಸ್ಥಾನಮಾನವಿಲ್ಲದಿರುವುದು ಇದಕ್ಕೆ ಕಾರಣ. ದಾವಣಗೆರೆ, ತುಮಕೂರು, ಮೈಸೂರಿನಲ್ಲಿ ಬೃಹತ್ ಸಭೆಗಳನ್ನು ಏರ್ಪಡಿಸುವ ಯೋಜನೆ ಇದೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪ್ರಮೋದ್ ಮುತಾಲಿಕ್ ಅವರು ಈ ಸಮಿತಿಗೆ ಬೆಂಬಲ ನೀಡಿದ್ದಾರೆ.

ಬಾಗಲಕೋಟೆ, ಆಗಸ್ಟ್ 03: ಬಿಜೆಪಿ (BJP) ಪಕ್ಷದಲ್ಲಿ ಈಗ ಆಂತರಿಕ ಸಮರ ಜೋರಾಗಿದೆ. ಕೆಲವು ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಬೆನ್ನಲ್ಲೇ ಇದೀಗ ಕಾರ್ಯಕರ್ತರೂ ಕೂಡ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದ ಕಾರ್ಯಕರ್ತರು ಕೇಸರಿ ಸಮಿತಿ ಎಂಬ ಹೆಸರಿನಲ್ಲಿ ಬಾಗಲಕೋಟೆಯ (Bagalakot) ಮಾರವಾಡಿ ಗಲ್ಲಿಯಲ್ಲಿರುವ ಮಾಹೇಶ್ವರಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದರು. ಈ ಮೂಲಕ ರಾಜ್ಯ ಬಿಜೆಪಿ ವಿರುದ್ಧ ಮತ್ತೊಂದು ಅತೃಪ್ತ ಟೀಮ್ ಹುಟ್ಟಿಕೊಂಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾದರು. ಮುಂದಿನ ದಿನಗಳಲ್ಲಿ ದಾವಣಗೆರೆ, ತುಮಕೂರು, ಮೈಸೂರಿನಲ್ಲಿ ಬೃಹತ್ ಸಭೆ ಮಾಡಲು ನಿರ್ಧರಿಸಲಾಯಿತು. ಕ್ಷತ್ರಿಯ, ಒಬಿಸಿ, ಹಿಂದೂ ಕಾರ್ಯಕರ್ತರಿಗೆ ಸ್ಥಾನಮಾನ ನೀಡಬೇಕು. ಸ್ಥಾನಮಾನ ನೀಡದಿದ್ದರೇ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಸಭೆ ಬಳಿಕ ಕಾರ್ಯಕರ್ತರು ಪಕ್ಷಕ್ಕೆ ಎಚ್ಚರಿಕೆ ನೀಡಿದರು.
ಈ ಅಸಮಾಧಾನಿತರು ಒಂದು ತಿಂಗಳ ಹಿಂದೆಯೇ ದೇಶದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವರಾದ ಪ್ರಲ್ಹಾದ್ ಜೋಷಿ ಸೇರಿದಂತೆ ಪ್ರಮುಖರಿಗೆ ಪತ್ರ ಬರೆದಿದ್ದಾರೆ. ಆದರೆ ಆ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಇದರಿಂದ ಮತ್ತಷ್ಟು ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ: ಮೊಯ್ಲಿ ಕಾರ್ಯಕ್ರಮದಲ್ಲಿ ಜಗಳಬಂದಿ
ಈ ನಡುವೆ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಹ ಕೇಸರಿ ಸಮಿತಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಕೇಸರಿ ಸಮಿತಿ ಜೊತೆ ಮಾತಾಡಿದ್ದು ತನು, ಮನ, ಧನದಿಂದ ಬೆಂಬಲ ನೀಡೋದಾಗಿ ಹೇಳಿದ್ದಾರೆ. ಹಿಂದುತ್ವದ ವಿಷಯವಾಗಿ ಯತ್ನಾಳ ಅವರಿಗೆ ತಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂದು ಶ್ರೀರಾಮಸೇನೆಯ ಪ್ರಮೋದ ಮುತಾಲಿಕ್ ಸಹ ಹೇಳಿದ್ದಾರೆ.




