ಪಂಚಮಸಾಲಿ ಪೀಠಕ್ಕೆ ಬೀಗ: ಶಾಲೆಗೆ ರಜೆ, ಮುಖಂಡರ ಎದುರು ಕಣ್ಣೀರಿಟ್ಟ ಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಭಾವುಕರಾಗಿದ್ದಾರೆ. 2ಎ ಮೀಸಲಾತಿಗಾಗಿ ಅವರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಪೀಠದ ಬೀಗ ಒಡೆದ ಘಟನೆಗೆ ಎಫ್‌ಐಆರ್ ದಾಖಲಾಗಿದೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸ್ವಾಮೀಜಿ ಭಕ್ತರೊಂದಿಗೆ ಸಭೆ ನಡೆಸಿ ಮುಂದಿನ ಹಾದಿ ಯೋಜಿಸಿದ್ದಾರೆ.

ಪಂಚಮಸಾಲಿ ಪೀಠಕ್ಕೆ ಬೀಗ: ಶಾಲೆಗೆ ರಜೆ, ಮುಖಂಡರ ಎದುರು ಕಣ್ಣೀರಿಟ್ಟ ಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಭೆ
Updated By: ವಿವೇಕ ಬಿರಾದಾರ

Updated on: Jul 15, 2025 | 5:58 PM

ಬಾಗಲಕೋಟೆ, ಜುಲೈ 15: ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ (Kudalsangam Panchamsali Peeta) ಬೀಗ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪಂಚಮಸಾಲಿ ಸಮುದಾಯದ ಮುಖಂಡರ ಜೊತೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಮಂಗಳವಾರ (ಜು.15) ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡುತ್ತಾ ಬಸವಜಯ ಮೃತ್ಯುಂಜಯ ಸ್ವಾಮೀಜಿ ಭಾವುಕರಾದರು. ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, “ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವವರೆಗೂ ಪೀಠಕ್ಕೆ ಬರಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ. ಅದರಂತೆ ರಾಜ್ಯಾದ್ಯಂತ ಸುತ್ತಿ ಸಮುದಾಯವನ್ನು ಸಂಘಟಿಸಿ. ಮೀಸಲಾತಿಗೆ ಆಗ್ರಹಿಸುವ ಕೆಲಸ‌ ಮಾಡಿದ್ದೇನೆ ಎಂದು ಕಣ್ಣೀರು ಹಾಕಿದರು.

ಪೀಠಕ್ಕೆ ಬೀಗ ಹಾಕಿದ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಹೀಗಾಗಿ, ಇಂದು ಹುನಗುಂದದ ಬಸವ ಮಂಟಪಕ್ಕೆ ಬಂದೆ. ಮುಖಂಡರು ಹೇಗೆ ಹೇಳುತ್ತಾರೆ ಹಾಗೆ ಮುನ್ನಡೆಯುತ್ತೇನೆ. ಭಕ್ತರು ಪೀಠಕ್ಕೆ ಹೋಗಿ ಎಂದರೇ ಪೀಠಕ್ಕೆ ಹೋಗುತ್ತೇನೆ. ಇಲ್ಲದಿದ್ದರೇ ಭಕ್ತರ ಮನೆಯಲ್ಲಿರುತ್ತೇನೆ ಎಂದು ಭಾವುಕರಾದರು. ಸಭೆಯಲ್ಲಿ ಪೀಠಕ್ಕೆ‌ ಬೀಗ ಹಾಕಿದ ಬಗ್ಗೆ, ಎಫ್​ಐಆರ್ ದಾಖಲಾದ ಬಗ್ಗೆ ಚರ್ಚೆ ನಡೆದಿದ್ದು, ಮುಂದೆ ಏನು ಮಾಡಬೇಕೆಂದು ತೀರ್ಮಾನ ತೆಗೆದುಕೊಂಡರು.

ಪೀಠಕ್ಕೆ ಸಿಸಿ ಕ್ಯಾಮೆರಾ ಅಳವಡಿಕೆ

ಕೂಡಲಸಂಗಮ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ, ಶಾಸಕ ವಿಜಯನಂದ್​ ಕಾಶಪ್ಪನವರ ಅವರ ಕಡೆಯುವರು ಕೂಡಲಸಂಗಮ ಪಂಚಮಸಾಲಿ ‌ಪೀಠಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಪೀಠದ ಮುಂದೆ ಪೊಲೀಸರನ್ನು ನಿಯೋಜಿಸಲಾಗಿದೆ.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಐವರು ಭಕ್ತರ ಮೇಲೆ ಎಫ್​ಐಆರ್ ದಾಖಲು ಮಾಡಿದ ಕುರಿತು ಪೀಠದ ವ್ಯವಸ್ಥಾಪಕ ಚಂದ್ರಶೇಖರ್ ಚಿತ್ತರಗಿ ಮಾತನಾಡಿ, “ಜುಲೈ 13ರ ರಾತ್ರಿ ಕೆಲವರು ನನ್ನ ಮನೆಗೆ ಬಂದು ಕೀಲಿ ಕೊಡುವಂತೆ ಬೆದರಿಕೆ ಹಾಕಿದರು. ನಾನು ಕೀಲಿ ಕೊಡಲಿಲ್ಲ. ನಂತರ, ಸೋಮವಾರ (ಜು.14) ಬೆಳಗ್ಗೆ ಮಠಕ್ಕೆ ಬಂದು ನೋಡಿದಾಗ ಪೀಠದ ಮುಖ್ಯ ದ್ವಾರದ ಗೇಟ್ ಮತ್ತು ಕೊಠಡಿಗೆ ಹಾಕಿದ್ದ ಬೀಗ ಒಡೆದು ಕೆಲವರು ಒಳಗೆ ಮಲಗಿದ್ದರು. ಈ ವಿಚಾರವನ್ನು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರಿಗೆ ತಿಳಿಸಿದೆ. ಅವರ ಸೂಚನೆಯಂತೆ ಮತ್ತೆ ಬೀಗ ಹಾಕಿದೆ” ಎಂದು ಹೇಳಿದರು.

ಇದನ್ನೂ ಓದಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಕಾವಿ ಸಾಕಾಗಿದೆ, ಖಾದಿ ಬೇಕಾಗಿದೆ: ವಿಜಯಾನಂದ್ ಕಾಶಪ್ಪನವರ್

“ಬೀಗ ಒಡೆದವರ ವಿರುದ್ಧ ಹುನಗುಂದ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದೇನೆ. ಬೀಗ ಒಡೆದವರು ಸ್ವಾಮೀಜಿಯವರ ಪರ ಇದ್ದಾರೆ ಅಂತ ಗೊತ್ತಿಲ್ಲ. ನನಗೆ ಕೀಲಿ ಕೊಡು ಎಂದು ಜೀವಬೆದರಿಕೆ ಹಾಕಿದರು. ಇದು ಕೂಡ ದೂರು ಕೊಡಲು ಪ್ರಮುಖ ಕಾರಣ‌ವಾಗಿದೆ. ಈಗ ವಿಜಯಾನಂದ ಕಾಶಪ್ಪನವರ ಸೂಚನೆ ಮೇರೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದೇನೆ. ಉಳಿದ ವಿಚಾರ ನನಗೇನು ಗೊತ್ತಿಲ್ಲ” ಎಂದು ಹೇಳಿದರು.

ಶಾಲೆಗೆ ರಜೆ

ಇನ್ನು ಮಠದ ಒಳಗೆ ಇದ್ದ ಪ್ರಾಥಮಿಕ ಶಾಲೆಗೆ ರಜೆ ನೀಡಲಾಗಿದೆ. ಮಕ್ಕಳಿಂದ ತುಂಬಿರಬೇಕಿದ್ದ ಶಾಲೆ ಖಾಲಿ ಹೊಡೆಯುತ್ತಿದೆ. ಪೀಠದ ಅಧೀನದಲ್ಲಿದ್ದ ಶಾಲೆ ಬಿಕೊ ಎನ್ನುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Tue, 15 July 25