
ಬಾಗಲಕೋಟೆ, (ಮೇ 02): 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ (SSLC Result) ಹೊರಬಿದ್ದಿದೆ. ಇಂದು (ಮೇ 02) ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu bangarappa) ಅವರು ಸುದ್ದಿಗೋಷ್ಠಿ ನಡೆಸಿ 10ನೇ ತರಗತಿ ರಿಸಲ್ಟ್ ಪ್ರಕಟಿಸಿದ್ದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಪ್ರಥಮ ಸ್ಥಾನ ಬಂದಿದ್ದರೆ, ಕಲಬುರಗಿ (Kalaburagi) ಕೊನೆ ಸ್ಥಾನದಲ್ಲಿದೆ. ಇನ್ನು ಫಸ್ಟ್ ರ್ಯಾಂಕ್ ಬಂದವರು ಕುಣಿದು ಕುಪ್ಪಳಿಸಿದ್ದು, ಕುಟುಂಬಸ್ಥರು ಸ್ನೇಹಿತರಿಗೆ ಸಿಹಿ ತಿನ್ನಿಸಿ ಫುಲ್ ಎಂಜಾಯ್ ಮಾಡಿದ್ದಾರೆ. ಆದ್ರೆ, ಬಾಗಲಕೋಟೆಯ ನವನಗರದ ವಿದ್ಯಾರ್ಥಿಯೋರ್ವ ಆರಕ್ಕೆ ಆರು ವಿಷಯದಲ್ಲೂ ಫೇಲ್ ಆಗಿದ್ದರೂ ಸಹ ಪೋಷಕರು ಬೈಯದೇ ಕೇಕ್ ತನ್ನಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಪರೀಕ್ಷೆಯಲ್ಲಿ ಫೇಲ್ ಆದರೂ ಆತ್ಮಸ್ಥೈರ್ಯ ಕುಗ್ಗಬಾರದು ಎಂಬ ಕಾರಣಕ್ಕೆ ತಂದೆ, ತಾಯಿ ಸಹೋದರ, ಸಹೋದರಿ, ಅಜ್ಜಿ ಹಾಗೂ ಕುಟುಂಬವರು ಕೇಕ್ ತಿನ್ನಿಸಿದ್ದಾರೆ.
ಬಾಗಲಕೋಟೆಯ ಬಸವೇಶ್ವರ ಹೈಸ್ಕೂಲ್‌ನಲ್ಲಿ ಆಂಗ್ಲ ಮಾಧ್ಯಮದ ಅಭಿಷೇಕ್ ಯಲ್ಲಪ್ಪ ಚೊಳಚಗುಡ್ಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 200 ಅಂಕ ಪಡೆದು ಫೇಲ್ ಆಗಿದ್ದಾನೆ. ಈ ಮೂಲಕ 6ಕ್ಕೆ ಆರು ವಿಷಯದಲ್ಲೂ ಅನುರ್ತೀಣನಾಗಿದ್ದಾನೆ. ಆದರೂ ಪೋಷಕರು ಒಂದಿಷ್ಟು ಆತನಿಗೆ ಬೈಯದೇ ಕೇಕ್ ತಿನ್ನಿಸಿ ಯಾವುದೇ ಕಾರಣಕ್ಕೂ ನೊಂದು ಕೊಳ್ಳುವುದು ಬೇಡ ಎಂದು ಧೈರ್ಯ ತುಂಬಿದ್ದಾರೆ.
ಬಾಗಲಕೋಟೆ ನವನಗರದಲ್ಲಿರುವ ನಿವಾಸದಲ್ಲಿ ಅಭಿಷೇಕ್ ಬೇಸರದಲ್ಲಿದ್ದ. ಬೇಸರದಲ್ಲಿದ್ದ ಅಭಿಷೇಕ್‌ಗೆ ಆತ್ಮಸ್ಥೈರ್ಯ ತುಂಬಲು ಅಚ್ಚರಿ ಎಂಬಂತೆ ಪೋಷಕರು ಕೇಕ್ ತಿನ್ನಿಸಿ ಸಿಹಿ ಮುತ್ತು ನೀಡಿ ಸಮಾಧಾನ ಮಾಡಿದ್ದಾರೆ. ಪರೀಕ್ಷೆ ಒಂದೇ ಜೀವನವಲ್ಲ. ಮರಳಿ ಪ್ರಯತ್ನ ಮಾಡು ಎಂದು ಹೆಗಲ ಮೇಲೆ ಕೈ ಇಟ್ಟು ತಂದೆ ಧೈರ್ಯ ಹೇಳಿದ್ದಾರೆ.
ಇನ್ನು ಅಭಿಷೇಕ್ 15 ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ಹೋಗಿದ್ದರಿಂದ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಇದರಿಂದಾಗಿ ಉತ್ತರ ನೆನಪಿಟ್ಟುಕೊಂಡು ಬರೆಯಲು ಅಭಿಷೇಕ್‌ಗೆ ಸಾಧ್ಯವಾಗಿಲ್ಲ. ಹೀಗಾಗಿ ಅಭಿಷೇಕ್ ಫೇಲ್ ಆಗಲು ಇದು ಪ್ರಮುಖ ಕಾರಣವಾಗಿದೆ.
ಇನ್ನು ತಂದೆ ತಾಯಿ ಕೇಕ್ ತಿನ್ನಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ್, ಫೇಲ್ ಆಗಿದ್ದರಿಂದ ಬಹಳ ಬೇಸರವಾಗಿತ್ತು. ತಂದೆ, ತಾಯಿ ಎಲ್ಲರೂ ಈಗ ಧೈರ್ಯ ತುಂಬಿದ್ದಾರೆ. ಫೇಲ್ ಆದರೂ ಧೈರ್ಯ ತುಂಬಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ನಾನು ಪರೀಕ್ಷೆಯಲ್ಲಿ ಫೇಲ್ ಆಗಿರಬಹುದು, ಜೀವನದಲ್ಲಿ ಫೇಲ್ ಆಗಲ್ಲ. ಮತ್ತೆ ಪ್ರಯತ್ನ ಮಾಡಿ ಪಾಸ್ ಆಗುತ್ತೇನೆ. ಪರೀಕ್ಷೆಯಲ್ಲಿ ಫೇಲ್ ಆದರೂ ಜೀವನದಲ್ಲಿ ಸಾಧಿಸಿ ತೋರಿಸುತ್ತೇನೆ ಎಂದಿದ್ದಾನೆ.
Published On - 9:16 pm, Fri, 2 May 25