SSLC Result: ಇದಪ್ಪ ಛಲ ಅಂದ್ರೆ..63ನೇ ವಯಸ್ಸಿನಲ್ಲಿ SSLC ಪರೀಕ್ಷೆ ಬರೆದು ಪಾಸಾದ ಶಿವಮೊಗ್ಗದ ಮಹಿಳೆ
ಶಿವಮೊಗ್ಗದ 63 ವರ್ಷದ ಪ್ರಮೀಳಾ ನಾಯಕ್ ಅವರು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮದುವೆಯ ಬಳಿಕ ವಿದ್ಯಾಭ್ಯಾಸ ಮೊಟಕುಗೊಂಡಿದ್ದರೂ, ಪ್ರಮೀಳಾ ಅವರು ಛಲಬಿಡದೆ ತಮ್ಮ ದಶಕಗಳ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಇದು ವಯಸ್ಸು ಕಲಿಕೆಗೆ ಅಡ್ಡಿಯಾಗಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಪ್ರಮೀಳಾ ಅವರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶಿವಮೊಗ್ಗ, ಮೇ 02: ವಿದ್ಯೆ ಕಲಿಯಲು ವಯಸ್ಸಿನ ಮಿತಿ ಇಲ್ಲ ಎನ್ನುತ್ತಾರೆ. ಅದರಂತೆ ತೀರ್ಥಹಳ್ಳಿ (Tirthahalli) ಪಟ್ಟಣದ ನಿವಾಸಿ 63 ವರ್ಷದ ಪ್ರಮೀಳಾ ನಾಯಕ್ ಎಂಬುವರು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ಬರೆದು ಉತ್ತೀರ್ಣರಾಗುವ ಮೂಲಕ ದಶಕಗಳ ಕನಸು, ನನಸಾಗಿಸಿಕೊಂಡಿದ್ದಾರೆ . ಪ್ರಮೀಳಾ ನಾಯಕ್ ಅವರ ಸಾಧನೆಗೆ ಕುಟುಂಬಸ್ಥರು ಮತ್ತು ಸ್ನೇಹಿತರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಮೀಳಾ ನಾಯಕ್ ಅವರ ಪತಿ ನಿವೃತ್ತ ಸಿಂಡಿಕೇಟ್ ಉದ್ಯೋಗಿಯಾಗಿದ್ದಾರೆ. ಪ್ರಮೀಳಾ ನಾಯಕ್ ಅವರು ಮದುವೆಯಾದ ಬಳಿಕ ವಿದ್ಯಾಭ್ಯಾಸವನ್ನು ಕಾರಣಾಂತರಗಳಿಂದ ಮೊಟಕುಗೊಳಿಸಿದರು. ನಂತರ ಸಂಸಾರದ ಜಂಜಾಟದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳ್ಳಲಿಲ್ಲ. ಏನಾದರೂ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕು ಎನ್ನುವ ಹಂಬಲ ಪ್ರಮೀಳಾ ನಾಯಕ್ ಅವರಲ್ಲಿತ್ತು.
ಆದೆರೆ, ಸುಖ ಸಂಸಾರಕ್ಕೆ ಸಾಕ್ಷಿ ಎಂಬಂತೆ ದಂಪತಿಗೆ ಗಂಡು ಮಗು ಜನಿಸಿತು. ಮಗುವಿನ ಲಾಲನೆ ಪಾಲನೆಯಲ್ಲೇ ದಿನಗಳು ಉರುಳಿ ಹೋದವು. ಇರುವ ಒಬ್ಬ ಮಗನ ಉತ್ತಮ ಶಿಕ್ಷಣಕ್ಕಾಗಿ ತಮ್ಮ ಎಲ್ಲ ಆಸೆ ಆಕಾಂಕ್ಷಿಗಳನ್ನು ಬಲಿಕೊಟ್ಟು, ವಿದ್ಯಾವಂತನಾಗಿ ಮಾಡಿದ್ದಾರೆ. ಈಗ, ಪುತ್ರ ಸಿಂಗಪುರ್ನಲ್ಲಿ ಖಾಸಗಿ ಕಂಪನಿಯಲ್ಲಿ ಸಿಇಓ ಆಗಿದ್ದಾರೆ.
ತನ್ನ ತಾಯಿಯ (ಪ್ರಮೀಳಾ ನಾಯಕ್) ಅವರ ಕನಸು ನನಸಾಗಿಸಲು ಮಗ ಮುಂದರು. ಪ್ರಮಿಳಾ ನಾಯ್ಕ್ ಅವರು, ಪುತ್ರನ ಸಹಾಯದಿಂದ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದರು. ಶುಕ್ರವಾರ (ಮೇ.02) ಫಲಿತಾಂಶ ಪ್ರಕರಟವಾಗಿದ್ದು, ಪ್ರಮೀಳಾ ಅವರು ಪಾಸಾಗಿದ್ದಾರೆ. ಪ್ರಮೀಳಾ ಅವರ ದಶಕಗಳ ಕನಸು, ನನಸಾಗಿದೆ.
ಇದನ್ನೂ ಓದಿ: SSLC ಫಲಿತಾಂಶ: 6ಕ್ಕೆ 6 ವಿಷಯಗಳಲ್ಲಿ ಫೇಲ್ ಆಗಿದ್ರೂ ಪುತ್ರನಿಗೆ ಕೇಕ್ ತಿನ್ನಿಸಿದ ಪೋಷಕರು!
ತಾವು ಪಾಸಾದ ಸುದ್ದಿ ತಿಳಿದ ಪ್ರಮಿಳಾ ನಾಯಕ್ ಅವರ ಸಂತಸಗೊಂಡಿದ್ದಾರೆ. ವಿದೇಶದಲ್ಲಿರುವ ಮಗ ಮತ್ತು ಸೊಸೆ ಕರೆ ಮಾಡಿ ಪ್ರಮೀಳಾ ನಾಯಕ್ ಅವರಿಗೆ ಶುಭ ಕೋರಿದ್ದಾರೆ. ಪ್ರಮೀಳಾ ನಾಯಕ್ ಅವರ ಪತಿ, ಪತ್ನಿಯ ಸಾಧನೆ ಕಂಡು ಹೆಮ್ಮೆ ಪಟ್ಟಿದ್ದಾರೆ. ವಿದ್ಯೆಯ ಹಸಿವಿಗೆ ಯಾವುದೇ ವಯಸ್ಸಿನ ಇತಿಮಿತಿ ಇಲ್ಲ. ದೃಢ ಮನಸ್ಸು ಇದ್ದರೆ ಮನುಷ್ಯ ಏನುಬೇಕಾದರೂ ಸಾಧನೆ ಮಾಡಬಹುದು ಎನ್ನಲು ಪ್ರಮೀಳಾ ನಾಯಕ್ ಉತ್ತಮ ಉದಾಹರಣೆಯಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:15 pm, Fri, 2 May 25