ಗ್ರಾಮ ಪಂಚಾಯತಿಗಳಿಂದಲೇ 47 ಕೋಟಿ ರೂ. ಬಿಲ್ ಬಾಕಿ; ಹೆಸ್ಕಾಮ್ ಬಿಲ್ ಕಟ್ಟದ ಹಿನ್ನೆಲೆ ಬೀದಿ ದೀಪದ ವಿದ್ಯುತ್ ಕಟ್
ಬಾಗಲಕೋಟೆ ಜಿಲ್ಲೆಯಲ್ಲಿ 198 ಗ್ರಾಪಂಗಳಿಂದ ಬರೊಬ್ಬರಿ 17 ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಇದೆ. ಇದರಿಂದ ಹೆಸ್ಕಾಮ್ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯತಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕಾರ್ಯಕ್ಕೆ ಮುಂದಾಗಿದೆ.
ಬಾಗಲಕೋಟೆ: ಗ್ರಾಮ ಪಂಚಾಯತಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ, ಅಭಿವೃದ್ಧಿಗಾಗಿ ಹುಟ್ಟು ಹಾಕಿದ ಸ್ಥಳೀಯ ಸಂಸ್ಥೆ. ಗ್ರಾಮದಲ್ಲಿ ರಸ್ತೆ, ವಿದ್ಯುತ್, ನೀರು ಎಲ್ಲವನ್ನೂ ಕಲ್ಪಿಸಬೇಕಾಗಿರುವುದು ಗ್ರಾಪಂ ಜವಾಬ್ದಾರಿ ಹಾಗೂ ಕರ್ತವ್ಯ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಪಂಗಳೇ ಗ್ರಾಮಗಳನ್ನು ಅಂದಕಾರದಲ್ಲಿ ಮುಳುಗಿಸಿವೆ. ಗ್ರಾಮ ಪಂಚಾಯತಿ ಬೇಜವಾಬ್ದಾರಿತನದಿಂದ 35ಕ್ಕೂ ಹೆಚ್ಚು ಹಳ್ಳಿಗಳು ಕತ್ತಲಮಯವಾಗಿವೆ. ಪರಿಣಾಮ ರಾತ್ರಿ ಬೀದಿಯಲ್ಲಿ ಜನರು ಭಯದಲ್ಲಿ ಸಂಚರಿಸಬೇಕಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ 35 ಕ್ಕೂಅಧಿಕ ಗ್ರಾಪಂ ಹಾಗೂ ಆ ವ್ಯಾಪ್ತಿಯ ನೂರಕ್ಕೂ ಅಧಿಕ ಹಳ್ಳಿಯಲ್ಲಿ ಕತ್ತಲು ಆವರಿಸಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಪಂನ ಬೇಜವಾಬ್ದಾರಿತನದಿಂದ ಹಳ್ಳಿ ಜನರು ರಾತ್ರಿಯಾದರೆ ಕತ್ತಲಲ್ಲಿ ಕನವರಿಸಬೇಕಾಗಿದೆ. ಯಾಕೆಂದರೆ ಬಾಗಲಕೋಟೆ ಜಿಲ್ಲೆಯಲ್ಲಿ 198 ಗ್ರಾಪಂಗಳಿಂದ ಬರೊಬ್ಬರಿ 47 ಕೋಟಿ ರೂಪಾಯಿ ಕರೆಂಟ್ ಬಿಲ್ ಬಾಕಿ ಇದೆ. ಇದರಿಂದ ಹೆಸ್ಕಾಮ್ ಬಾಕಿ ಉಳಿಸಿಕೊಂಡ ಗ್ರಾಪಂಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕಾರ್ಯಕ್ಕೆ ಮುಂದಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ 35 ಕ್ಕೂ ಅಧಿಕ ಗ್ರಾಪಂ ಕಚೇರಿ ಹಾಗೂ ಆ ಗ್ರಾಪಂ ವ್ಯಾಪ್ತಿಯಲ್ಲಿನ ನೂರಕ್ಕೂ ಹೆಚ್ಚು ಹಳ್ಳಿಗಳ ಬೀದಿ ದೀಪಗಳ ವಿದ್ಯುತ್ ಕಡಿತ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು ರಾತ್ರಿ ಕತ್ತಲಲ್ಲಿ ಕನವರಿಸಬೇಕಾಗಿದೆ. ಬೀದಿಯಲ್ಲಿ ಭಯದಲ್ಲಿ ಸಂಚರಿಸಬೇಕಾಗಿದೆ. ರಸ್ತೆಯಲ್ಲಿ ಹುಳು ಹುಪ್ಪಡಿಗಳು ಓಡಾಡುತ್ತವೆ. ಕತ್ತಲಲ್ಲಿ ಯಾರಿಗಾದರೂ ಏನಾದರೂ ತೊಂದರೆ ಆದರೆ ಯಾರು ಜವಾಬ್ದಾರಿ, ಕೂಡಲೆ ವಿದ್ಯುತ್ ಬಿಲ್ ಬಾಕಿ ಪಾವತಿಸಿ ಕತ್ತಲಿಂದ ಮುಕ್ತಿ ನೀಡಿ ಎಂದು ವೀರಾಪುರ ಗ್ರಾಮಸ್ಥರಾದ ಗುರುನಾಥ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಮುನಾಳ, ಗದ್ದನಕೇರಿ, ಸೀಗಿಕೇರಿ, ನೀರಲಕೇರಿ ಗ್ರಾಪಂಗಳು, ಹುನಗುಂದ ತಾಲ್ಲೂಕು, ಇಳಕಲ್ ತಾಲ್ಲೂಕಿನ ಗ್ರಾಪಂ ಸೇರಿ ಒಟ್ಟು 35 ಕ್ಕೂ ಅಧಿಕ ಗ್ರಾಪಂ ವ್ಯಾಪ್ತಿಯ ಬೀದಿ ದೀಪಗಳ ವಿದ್ಯುತ್ ಕಡಿತ ಮಾಡಲಾಗಿದೆ. ಆದರೆ ಕುಡಿಯುವ ನೀರು ಸರಬರಾಜು ಮಾಡೋದಕ್ಕೆ ಬೇಕಾದ ವಿದ್ಯುತ್ ಕಡಿತ ಮಾಡಿಲ್ಲ ಎನ್ನೋದು ಸ್ವಲ್ಪ ಸಮಾಧಾನಕರ ಸಂಗತಿ. ಬಾಗಲಕೋಟೆ ಜಿಲ್ಲೆಯಲ್ಲಿ 198 ಗ್ರಾಮ ಪಂಚಾಯತಿಯಿಂದ ಪ್ರತಿ ತಿಂಗಳು ಮೂರು ಕೋಟಿ ಬಿಲ್ ಬರಬೇಕು. ಆದರೆ ಸರಿಯಾಗಿ ಬಿಲ್ ತುಂಬದ ಕಾರಣ 2016-17 ನೇ ಸಾಲಿನಿಂದ ಇದುವರೆಗೂ ಹೆಸ್ಕಾಮ್ ಬಾಗಲಕೋಟೆ ವೃತ್ತದಲ್ಲಿ 24 ಕೋಟಿ 79 ಲಕ್ಷದ 81 ಸಾವಿರ, ಜಮಖಂಡಿ ವೃತ್ತದಿಂದ 5 ಕೋಟಿ 5 ಲಕ್ಷದ 62 ಸಾವಿರ, ಮುಧೋಳ ವೃತ್ತದಿಂದ 17 ಕೋಟಿ 19 ಲಕ್ಷದ 67 ಸಾವಿರ, ಒಟ್ಟು 47 ಕೋಟಿ 5 ಲಕ್ಷದ 12 ಸಾವಿರ ಬಾಕಿ ಉಳಿದಿದೆ.
ಹೆಸ್ಕಾಮ್ ಎಮ್ಡಿ ಆದೇಶದ ಪ್ರಕಾರ ಬಾಕಿ ಉಳಿಸಿಕೊಂಡ ಹಿನ್ನೆಲೆ ಸಂಪರ್ಕ ಕಡಿತ ಮಾಡುತ್ತಿದ್ದೇವೆ. ಇದು ಅನಿವಾರ್ಯ, ಯಾವ ಪಂಚಾಯಿತಿಯಿಂದ ಬಾಕಿ ಪಾವತಿಸಲಾಗುತ್ತದೆ ಪುನಃ ಸಂಪರ್ಕ ಕಲ್ಪಿಸುತ್ತೇವೆ. ಬಾಕಿ ನೀಡದವರೆಗೂ ವಿದ್ಯುತ್ ಸಂಪರ್ಕ ಕಡಿತ ಕಾರ್ಯ ಮುಂದುವರೆಯುತ್ತದೆ ಎಂದು ಹೆಸ್ಕಾಮ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೆಸ್ಕಾಮ್ ಅಧಿಕಾರಿಗಳ ಜೊತೆಯೂ ಮಾತಾಡಲಾಗಿದೆ. ಇನ್ನೆರಡು ದಿನದಲ್ಲಿ ಸಮಸ್ಯೆ ಸರಿಯಾಗುವ ವಿಶ್ವಾಸ ಇದೆ. ಗ್ರಾಪಂ ಅನುದಾನದಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತೇವೆ ಎಂದು ಗ್ರಾಪಂ ಪಿಡಿಒ ವಿನಾಯಕ ಹೇಳಿದ್ದಾರೆ.
ಒಟ್ಟಿನಲ್ಲಿ ಗ್ರಾಮದ ಶ್ರೇಯೋಭೀವೃದ್ದಿಗೆ ಇರಬೇಕಿದ್ದ ಗ್ರಾಪಂಗಳಿಂದಲೇ ಗ್ರಾಮಕ್ಕೆ ಕತ್ತಲು ಆವರಿಸುತ್ತಿದೆ. ಆದಷ್ಟು ಬೇಗ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಹೆಸ್ಕಾಮ್ ಅಧಿಕಾರಿಗಳು ಚರ್ಚೆ ಮಾಡಿ ಈ ಸಮಸ್ಯೆ ಬಗೆಹರಿಸಬೇಕಾಗಿದೆ.
ವರದಿ: ರವಿ ಮೂಕಿ
ಇದನ್ನೂ ಓದಿ: Rain : ಮಳೆ ಬಂತು ಮಳೆ : ‘ಚೋಳರಾಜ್ಯದ ಬೀದಿಯಲ್ಲಿ, ಸುರಿವ ಮಳೆಯಲ್ಲಿ ಸರಿದು ಹೋದರು ಕನ್ನಗಿ ಕೋವಲರು’
Published On - 9:43 am, Tue, 26 October 21