AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ಕಲ್ಲು ತೂರಾಟ: ಹಿಂದೂ ಯುವಕರ ಬಂಧನಕ್ಕೆ ಹೋಗಿದ್ದ ಪೊಲೀಸರನ್ನ ಅಡ್ಡಗಟ್ಟಿದ ಮಹಿಳೆಯರು

ಬಾಗಲಕೋಟೆ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಯುವಕರ ಬಂಧನಕ್ಕೆ ಬಂದ ಪೊಲೀಸರ ಕ್ರಮಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಯುವಕನ ಬಂಧನಕ್ಕೆ ಮುಂದಾದಾಗ ಸಾರ್ವಜನಿಕರು ತಡೆದಿದ್ದಾರೆ. ಕಲ್ಲು ತೂರಾಟದ ನಿಜವಾದ ಆರೋಪಿಗಳನ್ನು ಬಿಟ್ಟು ಅಮಾಯಕರನ್ನು ಗುರಿ ಮಾಡುತ್ತಿದ್ದಾರೆಂದು ಮಹಿಳೆಯರು ಸೇರಿದಂತೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ವೀರಣ್ಣ ಚರಂತಿಮಠ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಬಾಗಲಕೋಟೆ ಕಲ್ಲು ತೂರಾಟ: ಹಿಂದೂ ಯುವಕರ ಬಂಧನಕ್ಕೆ ಹೋಗಿದ್ದ ಪೊಲೀಸರನ್ನ ಅಡ್ಡಗಟ್ಟಿದ ಮಹಿಳೆಯರು
ಕಲ್ಲುತೂರಾಟ ಕೇಸ್Image Credit source: tv9 kannada
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Feb 27, 2026 | 10:45 PM

Share

ಬಾಗಲಕೋಟೆ, ಫೆಬ್ರವರಿ 27: ಶಿವಾಜಿ‌ ಜಯಂತಿ (Shivaji Jayanti Procession) ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣ (Stone Pelting) ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಹಿಂದೂ ಕಾರ್ಯಕರ್ತನ ಬಂಧನಕ್ಕೆ ಪೊಲೀಸರು ತೆರಳಿದ್ದ ತಳ್ಳಾಟ ನೂಕಾಟ ನಡೆದಿದೆ. ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಘಟನೆ ನಡೆದಿದೆ. ಮುತ್ತು ಮಾಗಿ ಎಂಬ ಯುವಕನನ್ನ ಕರೆದೊಯ್ಯಲು ಯತ್ನಿಸಿದ ವೇಳೆ ಪೊಲೀಸರಿಗೆ ಅಡ್ಡ ನಿಂತು ಬಂಧಿಸದಂತೆ ಜನರು ತಡೆದಿದ್ದಾರೆ. ಅಮಾಯಕರನ್ನ ಬಂಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಹಿಳೆಯರು ಪೊಲೀಸರ‌ನ್ನ ತರಾಟೆಗೆ ತೆಗೆದುಕೊಂಡಿದ್ದು, ಹೈಡ್ರಾಮಾವೇ ನಡೆದಿದೆ.

ಪೊಲೀಸರನ್ನು ಅಡ್ಡಗಟ್ಟಿದ ಮಹಿಳೆಯರು

ಶಿವಾಜಿ ಮಹಾರಾಜರ ಜಯಂತಿ ದಿನ ಮೆರವಣಿಗೆ ವೇಳೆ ನಡೆದ ಕಲ್ಲು, ಚಪ್ಪಲಿ ತೂರಾಟ ಪ್ರಕರಣ ನಗರದಲ್ಲಿ ಕಿಚ್ಚು ಹಚ್ಚಿಸಿದೆ. ಘಟನೆ ನಡೆದು 7 ದಿನವಾದರೂ ಕಾವು ಆರಿಲ್ಲ. ನಿನ್ನೆ ಡಿಸಿ ಕಚೇರಿ ಎದುರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡಿದ್ದರು. ಇನ್ನು ಹಿಂದೂ ಕಾರ್ಯಕರ್ತರ ಬಂಧನಕ್ಕೆ ಬಾಗಲಕೋಟೆ ಪೊಲೀಸರು ಯತ್ನಿಸಿದ್ದು, ಈ ವೇಳೆ ಕಿಲ್ಲಾ ಓಣಿಯ ಮಹಿಳೆಯರು ಹಾಗೂ ಜನರು ಪೊಲೀಸರನ್ನು ಅಡ್ಡಗಟ್ಟಿದ್ದಾರೆ.

ಉದ್ರಿಕ್ತ ಜನರನ್ನ ಸಮಾಧಾನ ಮಾಡಿದ: ಮಾಜಿ ಶಾಸಕ ವೀರಣ್ಣ ಚರಂತಿಮಠ

ಇನ್ನು ಸ್ಥಳಕ್ಕೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ಉದ್ರಿಕ್ತಗೊಂಡ ಜನರನ್ನು ಸಮಾಧಾನಪಡಿಸಿದರು. ಸ್ಥಳಕ್ಕೆ ಎಸ್​ಪಿ ಬರಬೇಕು, ಪೊಲೀಸರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಹಿಳೆಯರು ಹಾಗೂ ಹಿಂದೂ ಕಾರ್ಯಕರ್ತರು ಆಗ್ರಹಿಸಿದರು. ಜನರ ಮಧ್ಯೆ ನಿಂತು ಎಸ್​ಪಿ ಸಿದ್ದಾರ್ಥ್ ಗೋಯೆಲ್​ಗೆ ಕರೆ ಮಾಡಿದ ವೀರಣ್ಣ ಚರಂತಿಮಠ, ಎಲ್ಲವೂ ಶಾಂತ ರೀತಿಯಿಂದ ಮುಗಿಯುತ್ತಿದೆ. ನೀವು ಬಂಧಿಸುವ ನೆಪದಲ್ಲಿ ಬಡ ಕಾಯಿಸಬೇಡಿ. ನಾನು ಇವರನ್ನು ಸಂತೈಸುತ್ತೇನೆ, ಸಮಾಧಾನ ಮಾಡುತ್ತೇನೆ. ನಿಮ್ಮ ಪೊಲೀಸರು ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಪ್ರಕರಣ: ಫೆ. 26 ರಂದು ಬೃಹತ್ ಹೋರಾಟಕ್ಕೆ ಹಿಂದೂ ಸಂಘಟನೆಗಳ ಕರೆ

ಸ್ಥಳದಲ್ಲಿ ಉಪಸ್ಥಿತರಿದ್ದ ಡಿಎಸ್​​ಪಿ ಪ್ರಶಾಂತ ಮುನ್ನೊಳ್ಳಿ ಜೊತೆಗೆ ಮಾತನಾಡಿದ ವೀರಣ್ಣ ಚರಂತಿಮಠ, ಎಲ್ಲವೂ ಶಾಂತವಿದ್ದಾಗ ಪೊಲೀಸರನ್ನು ಏಕೆ ಕಳಿಸಿದರು. ಆ ಹುಡುಗನ ತಂದೆ-ತಾಯಿ ಇದಾರೆ, ಮಹಿಳೆಯರ ಬಟ್ಟೆ ಹರೆದು ಹಾಕಿದ್ದಾರೆ. ನೀವು ಈ ರೀತಿ ಮಾಡುತ್ತಾ ಹೋದರೆ ಉರಿಯುವ ಬೆಂಕಿಗೆ ತುಪ್ಪ ಹಾಕಿದ ಹಾಗೆ ಆಗುತ್ತದೆ. ಇದರಿಂದ ಏನೂ ಶಾಂತ ಆಗುವುದಿಲ್ಲ. ಏನು ಸಾಧನೆ ಮಾಡುವುದಕ್ಕೂ ಆಗುವುದಿಲ್ಲ. ಮೊದಲು ಅವರ ಹುಡುಗನನ್ನು ಅವರ ಮನೆಗೆ ಕಳುಹಿಸಿ. ನಾಳೆ ನಾನು ಎಸ್​​ಪಿ ಆಫೀಸ್​ಗೆ ಹೋಗಿ ಮಾತನಾಡುತ್ತೇನೆ. ಈ ರೀತಿ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ದಯಮಾಡಿ ತಾವು ಈಗ ತಮ್ಮ ತಮ್ಮ ಮನೆಗಳಿಗೆ ಹೋಗಿ ಎಂದು ಜನರಿಗೆ ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us