ಗಿಫ್ಟ್‌ಗೆ ಆಸೆ ಬಿದ್ದು ಕಮ್ಮಿ ವಯಸ್ಸಿಗೆ ಮದುವೆಗೆ ಯತ್ನ: 25 ಜೋಡಿಗಳ ಮದುವೆ ತಡೆದ ಅಧಿಕಾರಿಗಳು
ಬಾಗೇಪಲ್ಲಿಯ ಗಡಿದಂ ಕ್ಷೇತ್ರದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ, 25ಕ್ಕೂ ಹೆಚ್ಚು ಅಪ್ರಾಪ್ತ ಜೋಡಿಗಳ ಮದುವೆಗೆ ಅಧಿಕಾರಿಗಳು ತಡೆ ನೀಡಿದ್ದಾರೆ. ವಧು-ವರರಿಗೆ ಚಿನ್ನ, ನಗದು ಬಹುಮಾನ, ಸೀಮೆಹಸು ಸೇರಿ ಭರ್ಜರಿ ಕೊಡುಗೆಗಳಿದ್ದವು. ಕಳೆದ 23 ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ವಯಸ್ಸಿನ ದಾಖಲೆ ಇಲ್ಲದವರನ್ನು ತಡೆದ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

ಚಿಕ್ಕಬಳ್ಳಾಪುರ, ಆ.25: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪ್ರಸಿದ್ಧ ಗಡಿದಂ ಧಾರ್ಮಿಕ ಕ್ಷೇತ್ರದಲ್ಲಿ ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಲು ಸೂಕ್ತ ವಯಸ್ಸಿನ ದಾಖಲೆ ಇಲ್ಲದ 25ಕ್ಕೂ ಹೆಚ್ಚು ಜೋಡಿಗಳ ಮದುವೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ತಡೆಹಿಡಿದಿದ್ದಾರೆ.
ಬಾಗೇಪಲ್ಲಿ ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ ಅವರ ನೇತೃತ್ವದಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಆಯೋಜಿಸಲಾಗಿದೆ. ಈ ಮದುವೆಯಲ್ಲಿ ನೀಡಲಾಗುವ ಭರ್ಜರಿ ಕೊಡುಗೆಗಳಿಗೆ ಆಕರ್ಷಿತರಾಗಿ ಹಲವು ಅಪ್ರಾಪ್ತ ಹಾಗೂ ಸೂಕ್ತ ವಯಸ್ಸಿನ ದಾಖಲೆಗಳಿಲ್ಲದ ಜೋಡಿಗಳು ಸಪ್ತಪದಿ ತುಳಿಯಲು ದುಂಬಾಲು ಬಿದ್ದಿದ್ದವು.
ನಾಳೆ (ಆ.26) ನಡೆಯಲಿರುವ ಸಾಮೂಹಿಕ ವಿವಾಹಕ್ಕಾಗಿ ಒಟ್ಟು 115 ಜೋಡಿಗಳು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದವು. ಪರಿಶೀಲನೆ ನಡೆಸಿದ ಅಧಿಕಾರಿಗಳು, ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ ಭರ್ತಿಯಾಗದ ಮತ್ತು ಸೂಕ್ತ ವಯಸ್ಸಿನ ದಾಖಲೆಗಳನ್ನು ಸಲ್ಲಿಸದ 25 ಜೋಡಿಗಳಿಗೆ ಮದುವೆಗೆ ಅನುಮತಿ ನೀಡದೆ ನಿರಾಕರಿಸಿದ್ದಾರೆ.
ಮದುವೆಯಾಗುವ ಪ್ರತಿಯೊಬ್ಬ ವಧುವಿಗೆ ಚಿನ್ನದ ತಾಳಿ, ಕಾಲುಂಗುರ ನೀಡಲಾಗುತ್ತದೆ. ವರನಿಗೆ 50,000 ನಗದು ಬಹುಮಾನ ನೀಡಲಾಗುವುದು.ವಧು-ವರ ಹಾಗೂ ಅವರ ಪೋಷಕರಿಗೆ ರೇಷ್ಮೆ ಬಟ್ಟೆಗಳನ್ನು ನೀಡಿ ಅತ್ಯಂತ ವೈಭವದಿಂದ ಮದುವೆ ಮಾಡಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಮದುವೆಯಾದ ಬಳಿಕ ನವದಂಪತಿಗಳು ಸ್ವಾವಲಂಬಿ ಜೀವನ ನಡೆಸಿ ಸಂಸಾರ ಸಾಗಿಸಲು ಉಡುಗೊರೆಯಾಗಿ ಸೀಮೆಹಸುವನ್ನು ನೀಡಲಾಗುತ್ತಿರುವುದು ಈ ವಿವಾಹದ ವಿಶೇಷತೆಯಾಗಿದೆ.
ಇದನ್ನೂ ಓದಿ; 295 ದಿನಗಳ ಹೋರಾಟದ ನಡುವೆ ಬಲ್ಡೋಟಾ ಪರ ಭೂಸಂತ್ರಸ್ತರ ರ‍್ಯಾಲಿ: “ಕಾರ್ಖಾನೆ ಮಾಡಿ, ಇಲ್ಲವೇ ಸರ್ಕಾರಿ ಕೆಲಸ ಕೊಡಿ”
ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಕಳೆದ 23 ವರ್ಷಗಳಿಂದ ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದ್ದಾರೆ. ಈವರೆಗೆ ಸುಮಾರು 8,500 ಜೋಡಿಗಳು ಇಲ್ಲಿ ಸಪ್ತಪದಿ ತುಳಿದಿದ್ದು, ದಂಪತಿಗಳ ಜೀವನೋಪಾಯಕ್ಕಾಗಿ 5,000ಕ್ಕೂ ಹೆಚ್ಚು ಸೀಮೆಹಸುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಪ್ರಸ್ತುತ ಕಮ್ಮಿ ವಯಸ್ಸಿನಲ್ಲಿ ಮದುವೆಗೆ ಮುಂದಾಗಿದ್ದ ಜೋಡಿಗಳನ್ನು ತಡೆದು, ಜಾಗೃತಿ ಮೂಡಿಸಿರುವ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




