ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿಯ ಸಾವು
ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಬಾಣಂತಿಯ ಸಾವು ಸಂಭವಿಸಿದೆ. ಕುರುಗೋಡು ತಾಲೂಕಿನ ಮಹಾದೇವಿ ಎಂಬುವರು ಸಿಸೇರಿಯನ್ ನಂತರ ಮೃತಪಟ್ಟಿದ್ದಾರೆ. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದು ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸಾವಿನ ನಂತರ ಮತ್ತೊಂದು ದುರಂತ. ಈ ಘಟನೆ ರಾಜ್ಯಾದ್ಯಂತ ಆತಂಕ ಹುಟ್ಟುಹಾಕಿದೆ.

ಬಳ್ಳಾರಿ, ಫೆಬ್ರವರಿ 01: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ (BIMS) ಸಂಭವಿಸಿದ ಬಾಣಂತಿಯರ ಸಾವು ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಮಾಸುವ ಮುನ್ನವೇ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿಯ (Maternal) ಸಾವಾಗಿದೆ. ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ನಿವಾಸಿ ಮಹಾದೇವಿ (21) ಮೃತ ಬಾಣಂತಿ ಎಂದು ಗುರುತಿಸಲಾಗಿದೆ. ಮಹಾದೇವಿ ಅವರಿಗೆ ಜನವರಿ 25ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು.
ಸಿಸೇರಿಯನ್ ಬಳಿಕ ಬಾಣಂತಿ ಮಹಾದೇವಿ ಆರೋಗ್ಯವಾಗಿದ್ದರು. ಸಿಸೇರಿಯನ್ ಆದ ಐದು ದಿನಗಳ ಬಳಿಕ ಮಹಾದೇವಿ ಅವರಿಗೆ ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಕುಟುಂಬಸ್ಥರ ಬಳಿ ಹೇಳಿದ್ದಾರೆ. ಆದರೆ, ಶುಕ್ರವಾರ ರಾತ್ರಿ ತೀವ್ರ ಅಸ್ವಸ್ಥವಾಗಿ ಬಾಣಂತಿ ಮಹಾದೇವಿ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮಹಾದೇವಿ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಬಿಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬಿಮ್ಸ್ನಲ್ಲಿ ಐವರು ಬಾಣಂತಿಯರ ಸಾವು
ಕಳೆದ ವರ್ಷ ಬಿಮ್ಸ್ ಆಸ್ಪತ್ರೆಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ, ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. 2024ರ ನವೆಂಬರ್ 9 ರಂದು ಜಿಲ್ಲಾ ಆಸ್ಪತ್ರೆಯಲ್ಲಿ 14 ಬಾಣಂತಿಯರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಈ ಪೈಕಿ ಒಂಬತ್ತು ಬಾಣಂತಿಯರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡುಬಂದಿತ್ತು. ತಕ್ಷಣ ಏನಾಯಿತು ಅಂತ ಗಮನಿಸುವಷ್ಟರಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದರು. ನಂದಿನಿ ಹಾಗೂ ಲಲಿತಮ್ಮ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ಕೊನೆಯುಸಿರು ಎಳೆದಿದ್ದರು.
ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಲ್ಲಿ 8 ತಿಂಗಳಲ್ಲಿ 23 ಬಾಣಂತಿಯರ ಸಾವು: ಹೆಚ್ಚಿದ ಆತಂಕ
ಬಳಿಕ ಉಳಿದ ಏಳು ಬಾಣಂತಿಯರನ್ನು ಬಿಮ್ಸ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿತ್ತು. ಏಳು ಬಾಣಂತಿಯರಲ್ಲಿ ಬಾಣಂತಿ ರೋಜಮ್ಮ ಬಿಮ್ಸ್ನಲ್ಲಿ ನವೆಂಬರ್ 13 ರಂದು ಮೃತಪಟ್ಟಿದ್ದರು. ಅಲ್ಲಿಂದ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸರ್ಕಾರ ತನಿಖಾ ತಂಡವನ್ನ ಕಳುಹಿಸಿ ಬಾಣಂತಿಯರ ಸರಣಿ ಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಬಾಣಂತಿಯರ ಸಾವಿಗೆ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕಾರಣ ಎಂದು ತನಿಖಾ ತಂಡ ಮಾಹಿತಿ ನೀಡಿತ್ತು. ಇದಾದ ಬಳಿಕ ನವೆಂಬರ್ 25 ರಂದು ಬಾಣಂತಿ ಮುಸ್ಕಾನ್, ಡಿಸೆಂಬರ್ 5 ರಂದು ಬಾಣಂತಿ ಸುಮಯಾ ಮೃತಪಟ್ಟಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:50 am, Sat, 1 February 25