ಬಡ ಚಾಲಕನ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು: ಪತ್ನಿಗೆ ಬ್ರೈನ್ ಟ್ಯೂಮರ್, ದುಡ್ಡಿಲ್ಲದೆ ಪರದಾಡುತ್ತಿರುವವರ ಮೇಲೆ ಪ್ರಹಾರ
ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಹೆಸರಿನಲ್ಲಿ ಬಡವರ ಕಾರ್ಡ್ ರದ್ದು ಮಾಡಿ ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಮಾಡುತ್ತಿದೆಯೇ ಎಂಬ ಅನುಮಾನ ಉಂಟಾಗಿದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ, ಬಳ್ಳಾರಿಯಲ್ಲಿ ಸಾಮಾನ್ಯ ಚಾಲಕನ ಕುಟುಂಬದ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಿದ್ದು. ಈಗ ಆ ಕುಟುಂಬ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದೆ.
ಬಳ್ಳಾರಿ, ನವೆಂಬರ್ 20: ಬಿಪಿಎಲ್ ಕಾರ್ಡ್ಗಳನ್ನು ಪರಿಷ್ಕರಣೆ ಮಾಡುವ ನೆಪದಲ್ಲಿ ರಾಜ್ಯ ಸರ್ಕಾರ ಲಕ್ಷಾಂತರ ಮಂದಿ ಬಡವರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಮಾಡುತ್ತಿದೆ. ಅದರಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಸರಿಸುಮಾರು 2026 ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಆಗಿ ಕನ್ವರ್ಟ್ ಮಾಡಲಾಗಿದೆ. ಅದರಲ್ಲಿ ಆದಾಯ ತೆರಿಗೆ ಪಾವತಿ ಮಾಡುವ 1,772 ಕುಟುಂಬಗಳ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳನ್ನಾಗಿ ಮಾಡಲಾಗಿದೆ. ಉಳಿದಂತೆ 1.20 ಲಕ್ಷ ರೂ. ಆದಾಯವಿರುವ 186 ಕುಟುಂಬಗಳ ಬಿಪಿಎಲ್ ಕಾರ್ಡ್ಗಳನ್ನು, 71 ಸರ್ಕಾರಿ ನೌಕರರ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಬದಲಾವಣೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಎಪಿಎಲ್ ಕಾರ್ಡ್ಗೆ ಅರ್ಹರಾಗಿದ್ದು, ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿದ್ದವರಿಗೆ ಕಳೆದ ಎರಡು ವರ್ಷಗಳಲ್ಲಿ 20 ಲಕ್ಷ ರೂ. ದಂಡ ವಿಧಿಸಲಾಗಿದೆ.
ಆದರೆ, ಬಿಪಿಎಲ್ ಕಾರ್ಡ್ಗಳಿಗೆ ಅರ್ಹರಾಗಿದ್ದರೂ ಅಂಥ ಕುಟುಂಬದ ಕಾರ್ಡ್ಗಳನ್ನು ಎಪಿಎಲ್ ಆಗಿ ಬದಲಾಯಿಸಿದನ ಹಲವು ಉದಾಹರಣೆಗಳು ಕಂಡು ಬಂದಿವೆ.
ಒಬ್ಬ ಸಾಮಾನ್ಯ, ಚಾಲಕ ವೃತ್ತಿ ಮಾಡುವ ವ್ಯಕ್ತಿಯ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಿ ಎಪಿಎಲ್ ಆಗಿ ಕನ್ವರ್ಟ್ ಮಾಡಲಾಗಿದೆ. ಹೀಗಾಗಿ ಇದೀಗ ಆ ಕುಟುಂಬ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಬಳ್ಳಾರಿ ನಗರದ ಟೀಚರ್ಸ್ ಕಾಲೋನಿಯಲ್ಲಿರುವ ವರಲಕ್ಷ್ಮೀ ಎಂಬುವವರ ಬಿಪಿಎಲ್ ಕಾರ್ಡ್ ಅನ್ನು ಸರ್ಕಾರ ರದ್ದು ಮಾಡಿದೆ. ಆದಾಯ ತೆರಿಗೆ ಪಾವತಿ ಮಾಡುತ್ತಿರಿ ಎಂದು ಆರೋಪಿಸಿ ಕಾರ್ಡ್ ರದ್ದು ಮಾಡಲಾಗಿದೆ.
ಮೂರು ಹೊತ್ತು ಊಟಕ್ಕೂ ಗತಿಯಿಲ್ಲ: ಚಾಲಕನ ಅಳಲು
ಮೂರು ಹೊತ್ತು ಊಟ ಮಾಡಲಿಕ್ಕೂ ನಮ್ಮ ಬಳಿ ಹಣ ಇಲ್ಲ. ನಾವೆಲ್ಲಿಂದ ತೆರಿಗೆ ಪಾವತಿ ಮಾಡಬೇಕು ಎಂದು ಚಾಲಕ ವೆಂಕಟೇಶ ಅಲವತ್ತುಕೊಂಡಿದ್ದಾರೆ. ಪತ್ನಿ ವರಲಕ್ಷ್ಮೀಗೆ ಬ್ರೈನ್ ಟ್ಯೂಮರ್ ಆಗಿದೆ. ಆಕೆಗೆ ಚಿಕಿತ್ಸೆ ಕೊಡಿಸಲು ಆಗದ ಪರಿಸ್ಥಿತಿ ಇದೆ. ಪತ್ನಿಗೆ ಅನಾರೋಗ್ಯ ಕಾರಣ ನಾನು ಚಾಲಕ ವೃತ್ತಿಯನ್ನು ಬಿಟ್ಟಿದ್ದೇನೆ. ಬಿಪಿಎಲ್ ಕಾರ್ಡ್ನಿಂದ ಬರುವ ರೇಷನ್ ನಂಬಿ ಬದುಕುವ ಪರಿಸ್ಥಿತಿ ಇದೆ. ತೆರಿಗೆ ಪಾವತಿದಾರ ಎಂದು ಆರೋಪಿಸಿ ಬಿಪಿಎಲ್ ಕಾರ್ಡ್ ರದ್ದು ಮಾಡಿ, ಎಪಿಎಲ್ ಮಾಡಿದ್ದಾರೆ. ನಮಗೆ ಅನ್ಯಾಯ ಮಾಡಬೇಡಿ, ಅನುಕೂಲ ಇದ್ದವರಿಗೇ ಕಾರ್ಡ್ ಕೊಡುತ್ತೀರಿ, ಬಡವರ ಅನ್ನ ಕಸಿದುಕೊಳ್ಳಬೇಡಿ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ 10 ಸಾವಿರ ಬಿಪಿಎಲ್ ಕಾರ್ಡ್ಗಳು ರದ್ದು: ಸರ್ಕಾರಿ ಸೌಕರ್ಯಗಳಿಗೂ ಬ್ರೇಕ್?
ಒಟ್ಟಿನಲ್ಲಿ ಸರ್ಕಾರ ಹಲವು ಕಾರಣಗಳನ್ನು ನೀಡಿ ಅನೇಕ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಕನ್ವರ್ಟ್ ಮಾಡಿದೆ. ಅರ್ಹ ಕುಟುಂಬಗಳ ಬಿಪಿಎಲ್ ಕಾರ್ಡ್ಗಳನ್ನು ಕೂಡ ರದ್ದು ಮಾಡಿದ್ದು ಸಮಸ್ಯೆ ಸೃಷ್ಟಿಸಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಜತೆಗೆ, ತಪ್ಪುಗಳನ್ನು ಸರಿಪಡಿಸಿಕೊಂಡು, ಯಾರು ಅರ್ಹರೋ ಅವರಿಗೆ ಬಿಪಿಎಲ್ ಕಾರ್ಡ್ಗಳನ್ನು ಮರಳಿ ಕೊಡಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ