ಇರಾನ್-ಇಸ್ರೇಲ್ ಸಮರಕ್ಕೆ ಬಳ್ಳಾರಿ ಜೀನ್ಸ್ ಉದ್ಯಮ ತತ್ತರ: ರಫ್ತು ಸ್ಥಗಿತ, ಉತ್ಪಾದನೆ ಕುಸಿತ

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಬಳ್ಳಾರಿ ಜೀನ್ಸ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೊಲ್ಲಿ ರಾಷ್ಟ್ರಗಳಿಂದ ರಾಸಾಯನಿಕ ಪೂರೈಕೆ ಸ್ಥಗಿತಗೊಂಡಿದ್ದು, ಉತ್ಪಾದನೆ ಕುಸಿದಿದೆ. ರಫ್ತು ಸ್ಥಗಿತಗೊಂಡ ಪರಿಣಾಮ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ರಂಜಾನ್ ಸೀಸನ್‌ನಲ್ಲಿ ಭಾರೀ ಬೇಡಿಕೆ ಇದ್ದರೂ, ಉತ್ಪಾದನೆ ಕುಸಿತದಿಂದ ಪೂರೈಕೆ ಕಷ್ಟವಾಗಿದೆ.

ಇರಾನ್-ಇಸ್ರೇಲ್ ಸಮರಕ್ಕೆ ಬಳ್ಳಾರಿ ಜೀನ್ಸ್ ಉದ್ಯಮ ತತ್ತರ: ರಫ್ತು ಸ್ಥಗಿತ, ಉತ್ಪಾದನೆ ಕುಸಿತ
ಬಳ್ಳಾರಿ ಜೀನ್ಸ್ ಉದ್ಯಮ
Image Credit source: tv9
Edited By:

Updated on: Mar 17, 2026 | 9:18 AM

ಬಳ್ಳಾರಿ, ಮಾರ್ಚ್ 17: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ (Iran Israel War) ಪರಿಣಾಮ ಜಾಗತಿಕವಾಗಿ ಮಾತ್ರವಲ್ಲದೆ, ಸ್ಥಳೀಯವಾಗಿಯೂ ತಟ್ಟತೊಡಗಿದೆ. ಬಳ್ಳಾರಿಯ ಹೆಮ್ಮೆಯ ಜೀನ್ಸ್ ಉದ್ಯಮಕ್ಕೆ (Ballari Jeans Industry) ಈ ಯುದ್ಧ ಈಗ ಭಾರಿ ಹೊಡೆತ ನೀಡಿದೆ. ಕೊಲ್ಲಿ ರಾಷ್ಟ್ರಗಳಿಂದ ಬರುತ್ತಿದ್ದ ಕೆಮಿಕಲ್ ಸರಬರಾಜು ಸ್ಥಗಿತಗೊಂಡಿರುವುದು ಉದ್ಯಮಿಗಳನ್ನು ಹೈರಾಣಾಗಿಸಿದೆ. ಇದರಿಂದಾಗಿ ಉತ್ಪಾದನೆ ಕುಸಿತವಾಗಿದೆ. ಮತ್ತೊಂದೆಡೆ, ರಫ್ತು ಕೂಡ ಸ್ಥಗಿತಗೊಂಡಿದೆ. ಇದು ಜೀನ್ಸ್ ಉದ್ಯಮಿಗಳನ್ನು, ಕಾರ್ಮಿಕರನ್ನು ಸಂಕಷ್ಟಕ್ಕೆ ಈಡುಮಾಡಿದೆ.

ಜೀನ್ಸ್ ಉದ್ಯಮಕ್ಕೆ ಕೆಮಿಕಲ್ ಬಿಸಿ

ಜೀನ್ಸ್ ಪ್ಯಾಂಟ್‌ಗಳಿಗೆ ಬಣ್ಣ ನೀಡಲು ಬಳಸುವ ರಾಸಾಯನಿಕಗಳು ಹೆಚ್ಚಾಗಿ ಗಲ್ಫ್ ರಾಷ್ಟ್ರಗಳಿಂದ ಹಡಗುಗಳ ಮೂಲಕ ಸರಬರಾಜಾಗುತ್ತಿದ್ದವು. ಆದರೆ ಯುದ್ಧದ ಹಿನ್ನೆಲೆಯಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಂಡಿದ್ದು, ಕೆಮಿಕಲ್ ಪೂರೈಕೆ ಸಂಪೂರ್ಣ ನಿಂತುಹೋಗಿದೆ. ಜೀನ್ಸ್ ಲೇಪನಕ್ಕೆ ಮುಖ್ಯವಾಗಿ ಬೇಕಾದ ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಟ್ಸ್ ಹಾಗೂ ಪೊಟ್ಯಾಸಿಯಮ್ ಪರ್ಮಾಂಗನೇಟ್ ರಾಸಾಯನಿಕಗಳ ಕೊರತೆ ಉಂಟಾಗಿದೆ.

ಮೂರ್ನಾಲ್ಕು ಪಟ್ಟು ಹೆಚ್ಚಾದ ಕೆಮಿಕಲ್ ದರ

ಹಿಂದೆ ಕೆಜಿಗೆ ಕೇವಲ 40 ರೂಪಾಯಿಗೆ ಸಿಗುತ್ತಿದ್ದ ಕೆಮಿಕಲ್ ದರ ಈಗ 150 ರೂಪಾಯಿ ಗಡಿ ದಾಟಿದೆ. ಸ್ಥಳೀಯವಾಗಿ ಸ್ಟಾಕ್ ಇರುವ ಕೆಮಿಕಲ್‌ಗಳನ್ನು ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಉದ್ಯಮಿಗಳನ್ನು ಸಂಕಷ್ಟಕ್ಕೆ ದೂಡಿದೆ.

ರಂಜಾನ್, ಯುಗಾದಿ ಹಬ್ಬದ ಸೀಸನ್‌ನಲ್ಲೇ ಏಟು

ಸಾಮಾನ್ಯವಾಗಿ ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಬಳ್ಳಾರಿ ಜೀನ್ಸ್ ಬಟ್ಟೆಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇರುತ್ತದೆ. ಈ ಬಾರಿ ಸುಮಾರು 20 ಲಕ್ಷ ಜೀನ್ಸ್ ಪ್ಯಾಂಟ್‌ಗಳು ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗಬೇಕಿತ್ತು. ಆದರೆ ಬಣ್ಣದ ಕೊರತೆಯಿಂದಾಗಿ ಉತ್ಪಾದನೆಯು ಶೇ 50ರಷ್ಟು ಕುಸಿತ ಕಂಡಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ಧಕ್ಕೆಯಾಗಿದೆ.

ಇದನ್ನೂ ಓದಿ: ಬಂದ್ ಆಗುವ ಆತಂಕದಲ್ಲಿ ಬಳ್ಳಾರಿ ಜೀನ್ಸ್ ಉದ್ಯಮ: ಬೀದಿಗೆ ಬೀಳಲಿದೆ ಎರಡು ಲಕ್ಷ ಜನರ ಬದುಕು

ಕಾರ್ಮಿಕರ ಕೊರತೆ ನಡುವೆ ಬೆಲೆ ಏರಿಕೆ ಮರ್ಮಾಘಾತ

ಬಳ್ಳಾರಿಯ ಜೀನ್ಸ್ ಉದ್ಯಮವು ಈಗಾಗಲೇ ಕಾರ್ಮಿಕರ ಕೊರತೆಯಿಂದ ಹೈರಾಣಾಗಿತ್ತು. ಈಗ ಅಂತರಾಷ್ಟ್ರೀಯ ಸಂಘರ್ಷದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿರುವ ಜೀನ್ಸ್ ಫ್ಯಾಕ್ಟರಿಗಳು ಮುಚ್ಚುವ ಭೀತಿ ಎದುರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us