ಬಳ್ಳಾರಿ: ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತ, ರೈತರು ಕಂಗಾಲು
ರೈತರಿಗೆ ಒಂದಲ್ಲ ಒಂದು ರೀತಿಯ ಸಂಕಷ್ಟ ತಪ್ಪಿದ್ದಲ್ಲ. ಈ ವರ್ಷ ಅತಿಯಾದ ಮಳೆಯಿಂದ ಹಾನಿಯಾಗಿ ಅಳಿದುಳಿದಿದ್ದ ಬೆಳೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದು, ಈಗ ಫಲ ಕೈಗೆ ಸಿಕ್ಕಿದಾಗ ಬೆಲೆ ಇಲ್ಲದಾಗಿದೆ. ಎಕರೆಗೆ ಎರಡು ಲಕ್ಷ ರೂ.ನಂತೆ ಖರ್ಚು ಮಾಡಿ ಬೆಳೆದ ಮೆಣಸಿನಕಾಯಿ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಬಳ್ಳಾರಿಯ ರೈತರು ಕಂಗಾಲಾಗಿದ್ದಾರೆ.

ಬಳ್ಳಾರಿ, ಜನವರಿ 28: ಗಣಿನಾಡು ಬಳ್ಳಾರಿಯಲ್ಲಿ ಬಹುತೇಕ ರೈತರು ಮೆಣಸಿನಕಾಯಿ ಬೆಳೆಯನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಈ ವರ್ಷವಂತೂ ಸುಮಾರು 40,000 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನೇ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಸಾಲ ಸೋಲ ಮಾಡಿ ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಸಂಪೂರ್ಣ ಪಾತಾಳಕ್ಕೆ ಕುಸಿದಿದೆ.
2022- 23 ರಲ್ಲಿ 50 ರಿಂದ 60 ಸಾವಿರ ರೂ. ವರಗೆ ಒಂದು ಕ್ವಿಂಟಲ್ ಮೆಣಸಿನಕಾಯಿ ಬೆಳೆ ಮಾರಾಟವಾಗಿತ್ತು. ಆದರೆ ಈ ವರ್ಷ ಸಂಪೂರ್ಣ ಕುಸಿತ ಕಂಡಿದೆ. ಒಂದು ಕ್ವಿಂಟಲ್ ಮೆಣಸಿನಕಾಯಿಗೆ 8 ರಿಂದ 10 ಸಾವಿರ ರೂ. ಮಾತ್ರ ದೊರೆಯುತ್ತಿದೆ. ಹೀಗಾಗಿ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ. ಒಂದು ಎಕರೆ ಮೆಣಸಿನಕಾಯಿ ಬೆಳೆಗೆ ಸುಮಾರು 2 ಲಕ್ಷ ರೂ. ವರಗೆ ಖರ್ಚು ಮಾಡಿದ ರೈತ ಲಾಭಾವೂ ಇಲ್ಲದೆ, ಅಸಲೂ ದೊರೆಯದೆ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಿ ಮೆಣಸಿನಕಾಯಿ ಖರೀದಿ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಒಂದು ಎಕರೆ ಮೆಣಸಿನಕಾಯಿ ಬೆಳೆಯಬೇಕಿದ್ದರೆ ಬೀಜ, ರಸಗೊಬ್ಬರ, ಕಿಟನಾಶಕ, ಕೂಲಿ ಆಳು, ಕಳೆನಾಶಕ, ಕಟಾವು, ಸಾರಿಗೆ ವೆಚ್ಚ ಇವೆಲ್ಲ ಸೇರಿ ಹತ್ತಾರು ಸಾವಿರ ರೂ. ಖರ್ಚಾಗುತ್ತದೆ. ಕನಿಷ್ಠ ಅಂದರೂ ಒಂದು ಕ್ವಿಂಟಲ್ ಮೆಣಸಿನಕಾಯಿ ಬೆಳೆಗೆ 40 ರಿಂದ 50 ಸಾವಿರ ರೂ. ವರಗೆ ಮಾರಾಟವಾದರೆ ಹೇಗೋ ಅಸಲು ಹೊಂದಿಸಿಕೊಳ್ಳಬುದೇನೋ. ಆದರೆ, ಈಗ ಎಂಟು ಸಾವಿರ ರೂಪಾಯಿಗೂ ಕೇಳುವವರು ಇಲ್ಲವಾಗಿದ್ದಾರೆ. ಹೀಗಾಗಿ ಅನ್ನದಾತ ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದಿದೆ.
ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಆಗಬೇಕು. ಇಲ್ಲಿಂದಲೇ ಮಾರಾಟ ಆಗಬೇಕು ಎಂದು ರೈತರು ಹಲವು ವರ್ಷಗಳಿಂದ ಬೇಡಿಕೆ ಮುಂದಿಡುತ್ತಾ ಬಂದಿದ್ದಾರೆ. ಸರ್ಕಾರ ಮಾತ್ರ ಈ ವರಗೆ ಮನಸ್ಸು ಮಾಡಿಲ್ಲ. ಹೀಗಾಗಿ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ತಿಂಗಳು 30 ರಂದು ಬಳ್ಳಾರಿಯಲ್ಲಿ ರೈತರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ವೈದ್ಯನ ಕಿಡ್ನ್ಯಾಪ್ ಮಾಡಿ 300 ರೂ ಬಸ್ ಚಾರ್ಜ್ ಕೊಟ್ಟು ವಾಪಸ್ ಕಳಿಸಿದ ಖದೀಮರು
ಒಟ್ಟಿನಲ್ಲಿ ಗಣಿನಾಡು ಬಳ್ಳಾರಿಯಲ್ಲಿ ಮೆಣಸಿನಕಾಯಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ಮೆಣಸಿನಕಾಯಿ ಖರೀದಿ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:45 am, Tue, 28 January 25