ಬಳ್ಳಾರಿ: ಜಿಂದಾಲ್ ಕಾರ್ಖಾನೆಯಲ್ಲಿನ ನೀರಿನ ಹೊಂಡಕ್ಕೆ ಬಿದ್ದು 3 ಸಾವು
ಪ್ರತ್ಯೇಕ ಘಟನೆ: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಬಳಿ ಇರುವ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿನ ನೀರಿನ ಹೊಂಡಕ್ಕೆ ಬಿದ್ದು ಮೂವರು ಮೃತಪಟ್ಟಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮೇಕೆ ಮೇಯಿಸಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದ ವ್ಯಕ್ತಿ ಹೈಟೆನ್ಷನ್ ವೈರ್ ತಾಗಿ ಮೃತಪಟ್ಟಿದ್ದಾರೆ.
ಬಳ್ಳಾರಿ, ಮೇ 10: ಸಂಡೂರು (Sandur) ತಾಲೂಕಿನ ತೋರಣಗಲ್ಲು ಬಳಿ ಇರುವ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿನ (Jindal Steel Factory) ನೀರಿನ ಹೊಂಡದಲ್ಲಿ ಬಿದ್ದು ಮೂವರು ಮೃತಪಟ್ಟಿದ್ದಾರೆ. ಭುವನಹಳ್ಳಿ ಮೂಲದ ಜೆಡೆಪ್ಪ, ಬೆಂಗಳೂರು ಮೂಲದ ಸುಶಾಂತ, ಚೆನೈ ಮೂಲದ ಮಹಾದೇವನ್ ಮೃತ ದುರ್ದೈವಿಗಳು. ನೀರಿನ ಹೊಂಡಕ್ಕೆ ಜೋಡಿಸಲಾಗಿದ್ದ ಪೈಪ್ನಲ್ಲಿ ಸಮಸ್ಯೆ ಕಂಡು ಬಂದಿತ್ತು. ಪೈಪ್ ರಿಪೇರಿ ಮಾಡಲು ಮೂವರು ಹೋಗಿದ್ದಾರೆ. ಪೈಪ್ನಲ್ಲಿ ಬರುತ್ತಿದ್ದ ನೀರನ್ನು ನಿಲ್ಲಿಸದೆ ಹಾಗೆ ದುರಸ್ತಿ ಕಾರ್ಯ ಮಾಡುವಾಗ, ನೀರಿನ ರಭಸಕ್ಕೆ ಚನ್ನೈ ಮೂಲದ ಮಹಾದೇವನ್ ನೀರಿನ ಹೊಂಡದಲ್ಲಿ ಬಿದ್ದಿದ್ದಾನೆ. ಈತನನ್ನು ರಕ್ಷಿಸಲು ಹೋಗಿ ಇನ್ನಿಬ್ಬರೂ ಕೂಡ ಮೃತಪಟ್ಟಿದ್ದಾರೆ. ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಸಾವು
ಕೊಪ್ಪಳ: ಹೈಟೆನ್ಷನ್ ವಿದ್ಯುತ್ ತಂತಿ ತಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ. ಈರಪ್ಪ ಕುರಿ (55) ಮೃತದುರ್ದೈವಿ. ಈರಪ್ಪ ಕುರಿ ಗುರುವಾರ (ಮೇ 09) ಮೇಕೆ ಮೇಯಿಸಲು ಹೋಗಿದ್ದರು. ಮೇಕೆಗಳಿಗೆ ತಪ್ಪಲು ಹಾಕಲು ಮರದ ಟೊಂಗೆ ಕತ್ತರಿಸಲು ಈರಪ್ಪ ಮುಂದಾಗಿದ್ದರು. ಹೈಟೆನ್ಷನ್ ವೈಯರ್ ಮರಕ್ಕೆ ತಾಗಿದ್ದರಿಂದ ಈರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾತ್ರಿಯಾದರೂ ಈರಪ್ಪ ಮನೆಗೆ ಬಾರದ ಹಿನ್ನೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಮರದ ಬಳಿ ಈರಪ್ಪನ ಶವ ಪತ್ತೆಯಾಗಿದೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬಿಸಿಲಿನ ಶಾಖಕ್ಕೆ ಕುಸಿದು ಬಿದ್ದು ಉಡುಪಿಯಲ್ಲಿ ವ್ಯಕ್ತಿ ಮೃತ್ಯು; ಪುತ್ತೂರಿನಲ್ಲಿ ಉತ್ತರ ಪ್ರದೇಶ ಮೂಲದ ಮಹಿಳೆ, ಮಗು ನಾಪತ್ತೆ
ವಿಂಡ್ ಪವರ್ ಕಂಪನಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಹೈಟೆನ್ಷನ್ ವೈಯರ್ ಇದ್ದರೂ ಗ್ರಾಮಸ್ಥರಿಗೆ ಯಾವುದೇ ಸೂಚನೆ ನೀಡಿಲ್ಲ. ಅಲ್ಲದೆ ಮರಕ್ಕೆ ವೈರ್ ತಾಗಿದ್ದರೂ ಗಮನಹರಿಸಿಲ್ಲ. ಮೃತ ವ್ಯಕ್ತಿಯ ಕುಟುಂಬಕ್ಕೆ ವಿಂಡ್ ಪವರ್ ಕಂಪನಿ ಪರಿಹಾರ ನೀಡಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 am, Fri, 10 May 24