ಜೂನ್ 1ರಿಂದ ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೇ ನ್ಯಾಯಾಲಯದಲ್ಲಿ ದಾವೆ ಹೂಡಲು ಮುಂದಾದ ವಕೀಲ
ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ಗ್ಯಾರಂಟಿ ಭರವಸೆ ನೀಡಿದ್ರು, ರಾಜ್ಯದ ಜನರು ಸಹ ಕೈ ನಾಯಕರು ನೀಡಿದ ಗ್ಯಾರಂಟಿ ನಂಬಿಕೊಂಡು ಭರ್ಜರಿಯಾಗಿ ಬಹುಮತ ನೀಡಿದ್ದಾರೆ. ಆದ್ರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸುತ್ತಿದೆ. ಇದೇ ವಿಚಾರವಾಗಿ ನ್ಯಾಯವಾದಿಯೊಬ್ಬರು ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ವಕೀಲರು ಗ್ಯಾರಂಟಿ ಯೋಜನೆ ವಿಚಾರವಾಗಿ ಕೇಸ್ ಹಾಕ್ತಿರೋದ್ಯಾಕೆ. ಆ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಬಳ್ಳಾರಿ: ಮಹಿಳೆಯರಿಗೆ ಬಸ್ ಟಿಕೆಟ್, ಬಡ ಕುಟುಂಬಕ್ಕೆ 10 ಕೆಜಿ ಅಕ್ಕಿ, 200 ಯೂನಿಟ್ ವಿದ್ಯುತ್ ಉಚಿತ, 3 ಸಾವಿರ ರೂಪಾಯಿ ಯುವ ನಿಧಿ. ಹೀಗೆ ಕಾಂಗ್ರೆಸ್(Congress) ನಾಯಕರು ಗ್ಯಾರಂಟಿ ಗ್ಯಾರಂಟಿ ಎಂದು ಅಬ್ಬರದ ಪ್ರಚಾರ ಮಾಡಿದ್ರು. ಆದ್ರೆ, ಇದೇ ಗ್ಯಾರಂಟಿ ವಿಚಾರ ಇದೀಗ ಸಾಕಷ್ಟು ಸದ್ದು ಮಾಡ್ತಿದೆ. ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಲು ಸರ್ಕಾರ ವಿಳಂಬ ಮಾಡ್ತಿರೋದಕ್ಕೆ ಮತದಾರರು, ವಿಪಕ್ಷ ನಾಯಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೈ ನಾಯಕರು ನೀಡಿದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷದವರು ಮತದಾರರಿಗೆ ಕರೆ ನೀಡಿದ ಬೆನ್ನಲ್ಲೆ ಇದೀಗ ನ್ಯಾಯವಾದಿಯೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಲು ಸಜ್ಜಾಗಿದ್ದಾರೆ. ಬಳ್ಳಾರಿಯ ಹಿರಿಯ ನ್ಯಾಯವಾದಿ(Lawyer)ಹೆಚ್ ಚಂದ್ರಶೇಖರ ರೆಡ್ಡಿ ಎನ್ನುವವರು ಸರ್ಕಾರದ ವಿರುದ್ದ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಕೈ ನಾಯಕರು ಮತದಾರರಿಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಬೇಕು. ಇಲ್ಲದಿದ್ದರೇ ಕೇಸ್ ಹಾಕುವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜೂನ್ 1ರಿಂದ ಬಸ್ ಟಿಕೆಟ್, ಉಚಿತ ವಿದ್ಯುತ್ ಎಂದು ಕೈ ನಾಯಕರು ಚುನಾವಣೆ ವೇಳೆ ಭರವಸೆ ನೀಡಿದ್ರು. ಆದ್ರೆ, ಜೂನ್ ಆರಂಭಕ್ಕೆ ಇನ್ನೇರಡು ದಿನಗಳು ಬಾಕಿಯುಳಿದ್ರು ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಮತದಾರರನ್ನ ನಂಬಿಸಿ ಮತ ಪಡೆದಿರುವ ಕಾಂಗ್ರೆಸ ಪಕ್ಷ. ಮತ್ತು ಗ್ಯಾರಂಟಿ ಕಾರ್ಡ್ ಮೇಲೆ ಸಹಿ ಹಾಕಿರುವ ಸಿದ್ದರಾಮಯ್ಯ. ಡಿಸಿಎಂ ಡಿಕೆಶಿವಕುಮಾರ್ ಕೂಡಲೇ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಬೇಕು. ಇಲ್ಲದಿದ್ದರೇ ಎಲ್ಲ ತಾಲೂಕುಗಳ ನ್ಯಾಯಾಲಯದಲ್ಲೂ ಸರ್ಕಾರ ಮತ್ತು ಸಿಎಂ. ಡಿಸಿಎಂ ವಿರುದ್ದ ಕೇಸ್ ದಾಖಲಿಸುವುದಾಗಿ ನ್ಯಾಯವಾದಿ ಚಂದ್ರಶೇಖರರೆಡ್ಡಿ ಗುಡುಗಿದ್ದಾರೆ.
ಗ್ಯಾರಂಟಿ ಯೋಜನೆ ವಿಚಾರವಾಗಿ ಮತದಾರರಿಗೆ ವಿಪಕ್ಷದವರು ಒಂದೆಡೆ ಬಿಲ್ ಕಟ್ಟಬೇಡಿ. ಬಸ್ ಟಿಕೆಟ್ ತಗೆದುಕೊಳ್ಳಬೇಡಿ ಎಂದು ಪ್ರಚೋದನೆ ಮಾಡ್ತಿದ್ದಾರೆ. ಇನ್ನೊಂದೆಡೆ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡೋ ಬಗ್ಗೆ ಸಭೆಗಳ ಮೇಲೆ ಸಭೆ ಮಾಡ್ತಿದ್ದಾರೆ. ಈ ಮಧ್ಯೆ ನ್ಯಾಯವಾದಿಯೊಬ್ಬರು ಗ್ಯಾರಂಟಿ ವಿಚಾರವಾಗೇ ಕೇಸ್ ದಾಖಲಿಸಲು ಮುಂದಾಗಿರುವುದು ವಿಶೇಷವಾಗಿದೆ. ಹೀಗಾಗಿ ಸರ್ಕಾರ ಗ್ಯಾರಂಟಿ ಯೋಜನೆ ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 am, Tue, 30 May 23