ಬಳ್ಳಾರಿ, ಆ.02: ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧಿಸಿದ ಹಿನ್ನಲೆ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ(Siruguppa) ಪಟ್ಟಣದಲ್ಲಿ ನಡೆದಿದೆ. ರಾಜು (23) ಹಾಗೂ ಪವಿತ್ರಾ(20) ಮೃತ ದುರ್ಧೈವಿಗಳು. ಮೃತರಿಬ್ಬರೂ ಸಿರಗುಪ್ಪ ಪಟ್ಟಣದ ನಿವಾಸಿಗಳಾಗಿದ್ದು, ಅನ್ಯ ಜಾತಿಯವರಾಗಿದ್ದಕ್ಕೆ ಎರಡೂ ಮನೆಯಲ್ಲಿ ಮದುವೆಗೆ ವಿರೋಧ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ತಡ ರಾತ್ರಿ ಮನೆ ಬಿಟ್ಟು ಹೊರ ಬಂದಿದ್ದ ರಾಜು ಹಾಗೂ ಪವಿತ್ರಾ, ಪೋಷಕರ ವಿರೋಧಕ್ಕೆ ಮನನೊಂದು ಬೆಳಗಿನ ಜಾವ ಜಮೀನೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಸಿರಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಬಳಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ವಿದ್ಯಾರ್ಥಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ತಮಟಂಪಲ್ಲಿ ಗ್ರಾಮದ ಭಾರ್ಗವ್ ರೆಡ್ಡಿ(18) ಮೃತ ರ್ದುದೈವಿ. ಮೃತ ವಿದ್ಯಾರ್ಥಿ ಚಿಂತಾಮಣಿ ಖಾಸಗಿ ಕಾಲೇಜು ವಿದ್ಯಾರ್ಥಿಯಾಗಿದ್ದು, ಬೆಳಿಗ್ಗೆ ಕಾಲೇಜಿಗೆ ತೆರಳುವಾಗ ದುರಂತ ಸಂಭವಿಸಿದೆ. ಈ ಘಟನೆ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಮಗನ ಮೃತ ದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ:ಬೆಂಗಳೂರು: ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ಆರೋಪ; ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು
ಬಾಗಲಕೋಟೆ: ಇಳಕಲ್ ಹೊರವಲಯದಲ್ಲಿ ಲಾರಿ ಹರಿದು 33 ಕುರಿಗಳು ಸಾವನ್ನಪ್ಪಿವೆ. ಸುರಪುರ ತಾಲೂಕಿನ ಕೊಡಕೇಲ್ ಗ್ರಾಮದ ಕುರಿಗಾಹಿ ರಾಯಪ್ಪಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಇಳಕಲ್ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ