ಬಳ್ಳಾರಿಯಲ್ಲಿ 7 ಕೋಟಿ ರೂ ವೆಚ್ಚದಲ್ಲಿ ವಾಚ್ ಟವರ್ ನಿರ್ಮಾಣ: ಅಧಿಕಾರಕ್ಕೆ ಬಂದ್ರೆ ಒಡೆಯುತ್ತೇವೆ ಎಂದ ಶ್ರೀರಾಮುಲು
ಬಳ್ಳಾರಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಗಡಿಯಾರ ಗೋಪುರದ ಉದ್ಘಾಟನೆ ಸಮೀಪಿಸುತ್ತಿದ್ದಂತೆ, ಮಾಜಿ ಸಚಿವ ಶ್ರೀರಾಮುಲು ಅದನ್ನು ಒಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಭರತ್ ರೆಡ್ಡಿ, ಬಿಜೆಪಿಗರದು ಕೆಡಿಸುವ ಕೆಲಸ ಎಂದು ವಾಗ್ದಾಳಿ ಮಾಡಿದ್ದಾರೆ.

ಬಳ್ಳಾರಿ, ಜುಲೈ 31: ಅದು 7 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ವಾಚ್ ಟವರ್ ಕ್ಲಾಕ್. ಕಾಮಗಾರಿ ಪೂರ್ಣಗೊಂಡು ಇನ್ನೇನು ಉದ್ಘಾಟನೆ ಹಂತಕ್ಕೆ ತಲುಪಿದೆ. ಆದರೆ ಮಾಜಿ ಸಚಿವ ಶ್ರೀರಾಮುಲು (Sriramulu), ನಾವು ಮರಳಿ ಅಧಿಕಾರಕ್ಕೆ ಬಂದರೆ ಆ ಟವರ್ ಅನ್ನು ಒಡೆಯುತ್ತೇವೆ ಎಂಬ ಮಾತನ್ನಾಡುತ್ತಿದ್ದಾರೆ. ಇದಕ್ಕೆ ಟಕ್ಕರ್ ಎನ್ನುವಂತೆ ಹಾಲಿ ಶಾಸಕ ಭರತ್ ರೆಡ್ಡಿ (Bharath Reddy), ಬಿಜೆಪಿಗರದು ಬರೀ ಕೆಡಿಸುವ ಕೆಲಸ. ಕಾಂಗ್ರೆಸ್ ಪಕ್ಷದ್ದು ಅಭಿವೃದ್ಧಿ ಕೆಲಸ ಎಂದು ಕುಟುಕಿದ್ದಾರೆ.
ಗಣಿನಾಡು ಬಳ್ಳಾರಿ ನಗರದಲ್ಲಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಏಕೆಂದರೆ ಏಳು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ವಾಚ್ ಟವರ್ನ್ನು ಒಡೆಯುವ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಮಾತನಾಡುತ್ತಿದ್ದರೆ, ಇತ್ತ ಆ ವಾಚ್ ಟವರ್ ಒಡೆಯುವುದಕ್ಕೆ ನಾವು ಬಿಡಲ್ಲ ಅಂತಾ ಶಾಸಕ ಭರತ್ ರೆಡ್ಡಿ ಟಕ್ಕರ್ ಕೊಡುತ್ತಿದ್ದಾರೆ.
ಶ್ರೀರಾಮುಲುಗೆ ತಿರುಗೇಟು ನೀಡಿದ ಭರತ್ ರೆಡ್ಡಿ
ಜನರ ಹಣದಲ್ಲಿ ಈ ವಾಚ್ ಟವರ್ ನಿರ್ಮಾಣ ಮಾಡಲಾಗಿದೆ. ಯಾವುದೇ ರಾಜಕೀಯ ಉದ್ದೇಶಕ್ಕೆ ಒಡೆದು ಹಾಕುತ್ತೇವೆ ಅಂದರೆ ಸರಿ ಅಲ್ಲ. ಅದರಲ್ಲಿ ಏನಾದರೂ ಲೋಪದೋಷಗಳಿದ್ದರೆ ತಿಳಿಸುವ ಪ್ರಯತ್ನ ಮಾಡಬೇಕು, ಅದನ್ನ ಬಿಟ್ಟು ಒಡೆದು ಹಾಕುತ್ತೇವೆ ಎನ್ನುವುದು ಸರಿಯಲ್ಲ ಅಂತ ಭರತ್ ರೆಡ್ಡಿ ಶ್ರೀರಾಮುಲುಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಮತ್ತೆ ಒಂದಾದ ಜೋಡೆತ್ತು: 40 ವರ್ಷಗಳ ಸ್ನೇಹ ಮುಂದುವರಿಕೆ!
ಬಳ್ಳಾರಿ ನಗರದ ರಾಯಲ್ ವೃತ್ತ ಅಂತಲೇ ಫೇಮಸ್ ಆಗಿರುವ ಸರ್ಕಲ್ನಲ್ಲಿ 108 ಅಡಿ ಎತ್ತರದ ವಾಚ್ ಟವರ್ ನಿರ್ಮಾಣ ಮಾಡಲಾಗಿದೆ. ಮೇಲೆ ನಾಲ್ಕು ಮುಖದ ಸಿಂಹದ ಲಾಂಛನ ಇಡಲಾಗಿದೆ. ಶ್ರೀರಾಮುಲು ಮಾತ್ರ ಇದು ಲಿಬಿಲಾನ್ ಮಾದರಿಯನ್ನ ನಿರ್ಮಾಣ ಮಾಡಬೇಕಿತ್ತು. ಆದರೆ ಶೇಪ್‌ಲೆಸ್ ಆಗಿ ನಿರ್ಮಾಣ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದಾಗ ಪುನಃ ಒಡೆದು ಲಿಬಿಲಾನ್ ಮಾದರಿಯಲ್ಲಿ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ.
ಇನ್ನು 2023 ರಲ್ಲಿ ಬಳ್ಳಾರಿ ಉಸ್ತುವಾರಿ ಸಚಿವರಿದ್ದಾಗ ಶ್ರೀರಾಮುಲು ಮೊದಲಿದ್ದ ಕ್ಲಾಕ್ ಟವರ್‌ನ್ನ ಒಡೆದು ಹಾಕಿ, ಹೊಸ ಮಾದರಿಲ್ಲಿ ವಾಚ್ ಟವರ್ ನಿರ್ಮಾಣ ಮಾಡಲು ನಿರ್ಧರಿಸಿ ಅದರ ಬ್ಲೂಪ್ರಿಂಟ್ ಕೂಡ ಸಿದ್ಧ ಮಾಡಿಸಿದ್ದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇತ್ತ ಬಳ್ಳಾರಿ ನಗರದ ಶಾಸಕ ನಾರಾ ಭರತ್ ರೆಡ್ಡಿ ಆಯ್ಕೆಯಾದರು. ನಂತರ ಅದಕ್ಕೆ ಅನುದಾನ ತಂದು ಆ ಟವರ್ ಕಾಮಗಾರಿಯನ್ನ ಪೂರ್ಣಗೊಳಿಸಿದ್ದಾರೆ.
ಬ್ಲೂಪ್ರಿಂಟ್ನಲ್ಲಿ ವ್ಯತ್ಯಾಸ
ಶ್ರೀರಾಮುಲು ನಿರ್ಮಾಣ ಮಾಡಬೇಕು ಅಂದುಕೊಂಡಿದ್ದ ವಾಚ್ ಟವರ್ ಬ್ಲೂಪ್ರಿಂಟ್ಗೂ ಮತ್ತು ಈಗ ನಿರ್ಮಾಣವಾಗಿರುವ ಟವರ್‌ಗೂ ಬಹಳ ವ್ಯತ್ಯಾಸವಿದೆ. ಹೀಗಾಗಿ ಅದು ಶೇಪ್‌ಲೆಸ್ ಅಂತಾ ಶ್ರೀರಾಮುಲು ಎಂದಿದ್ದಾರೆ.
ಇದು ಭಾರತ, ನಮ್ಮ ದೇಶದಲ್ಲಿ ನಮ್ಮ ಮಾದರಿ ಇದ್ದರೆ ಸಾಕು. ಬೇರೆ ದೇಶದ ವಾಚ್ ಟವರ್ ನಮಗೆ ಬೇಕಿಲ್ಲ ಎಂದು ಭರತ್ ರೆಡ್ಡಿ ಹೇಳಿದ್ದಾರೆ. ನಾಲ್ಕು ಮುಖದ ಸಿಂಹದ ಲಾಂಛನ ಟವರ್ ಮೇಲಿದೆ. ಅದನ್ನ ಇಳಿಸಲು ಬಿಡಲ್ಲ ಎಂದಿದ್ದಾರೆ. ಜನರ ತೆರಿಗೆ ಹಣದಲ್ಲಿ ಟವರ್ ನಿರ್ಮಾಣ ಮಾಡಿದ್ದೇವೆ. ಜನ ಪರ ಕಾಳಜಿ ಶ್ರೀರಾಮುಲುಗೆ ಎಷ್ಟಿದೆ ಅಂತಾ ಇದರಲ್ಲಿ ಗೊತ್ತಾಗುತ್ತೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಸ್ಥಾನ ನಿಟ್ಟುಕೊಡಲ್ಲ, ಹಾಗಾಗಿ ಶಿವಕುಮಾರ್ ಸಿಎಂ ಆಗಲ್ಲ: ಬಿ ಶ್ರೀರಾಮುಲು
ಒಟ್ಟಿನಲ್ಲಿ ಗಣಿನಾಡು ಬಳ್ಳಾರಿ ನಗರದಲ್ಲಿ ಕಾಮಗಾರಿ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ನಡೆಯುತ್ತಿರುವುದು ದುರಂತ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೇ ಒಬ್ಬರಿಗೊಬ್ಬರು ಸಲಹೆ ಗಳನ್ನ ನೀಡುತ್ತಾ ಬಳ್ಳಾರಿ ಅಭಿವೃದ್ಧಿಗೆ ಕೈ ಜೋಡಿಸು ಕೆಲಸವಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:03 pm, Thu, 31 July 25



