ಬೆಂಗಳೂರು ನಗರ ವಿವಿ ಇನ್ಮುಂದೆ ಡಾ. ಮನಮೋಹನ್ ಸಿಂಗ್ ವಿವಿ: ಮರುನಾಮಕರಣಕ್ಕೆ ಕರ್ನಾಟಕ ವಿಧಾನಸಭೆ ಅನುಮೋದನೆ
ಬೆಂಗಳೂರು ನಗರ ವಿವಿಗೆ ಮಾಜಿ ಪ್ರಧಾನಿ ದಿ. ಡಾ ಮನಮೋಹನ್ ಸಿಂಗ್ ಹೆಸರಿಡುವುದಾಗಿ ಬಜೆಟ್ನಲ್ಲಿ ಘೋಷಿಸಿದ್ದ ಸಿದ್ದರಾಮಯ್ಯ ಸರ್ಕಾರ ಇದೀಗ ಮರುನಾಮಕರಣ ವಿಚಾರ ಒಳಗೊಂಡ ಮಸೂದೆಗೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದೆ. ಪ್ರತಿಪಕ್ಷ ಬಿಜೆಪಿ ಮಾತ್ರ, ಅಸ್ತಿತ್ವದಲ್ಲಿರುವ ವಿವಿಗೆ ಮನಮೋಹನ್ ಸಿಂಗ್ ಹೆಸರಿಡುವ ಬದಲು ಅವರ ಹೆಸರಿನಲ್ಲಿ ಹೊಸ ವಿವಿ ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.

ಬೆಂಗಳೂರು, ಆಗಸ್ಟ್ 20: ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ (Bengaluru University) ಮಾಜಿ ಪ್ರಧಾನಿ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ದಿವಂಗತ ಡಾ. ಮನಮೋಹನ್ ಸಿಂಗ್ (Dr. Manmohan Singh) ಅವರ ಹೆಸರನ್ನು ಇಡುವ ವಿಚಾರವನ್ನೊಳಗೊಂಡ ಮಸೂದೆಯನ್ನು ಕರ್ನಾಟಕ ವಿಧಾನಸಭೆ (Karnataka Assembly) ಮಂಗಳವಾರ ಅಂಗೀಕರಿಸಿದೆ. ‘ಕರ್ನಾಟಕ ರಾಜ್ಯ ವಿಶ್ವವಿದದ್ಯಾಲಯಗಳ ತಿದ್ದುಪಡಿ ವಿಧೇಯಕ’ಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ. ಆಧುನಿಕ ಭಾರತದ ಆರ್ಥಿಕ ನೀತಿಗಳ ಹರಿಕಾರರೆಂದೇ ಗುರುತಿಸಿಕೊಂಡಿದ್ದ ಮನಮೋಹನ್ ಸಿಂಗ್ 2024ರ ಡಿಸೆಂಬರ್ನಲ್ಲಿ ನಿಧನರಾಗಿದ್ದರು. ಬೆಂಗಳೂರು ನಗರ ಯೂನಿವರ್ಸಿಟಿಗೆ ಮನಮೋಹನ್ ಸಿಂಗ್ ಯೂನಿವರ್ಸಿಟಿ ಎಂದು ಮರುನಾಮಕರಣ ಮಾಡುವ ಬಗ್ಗೆ ಕಳೆದ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಇದೀಗ ಆ ನಿಟ್ಟಿನಲ್ಲಿ ಮಸೂದೆಗೆ ಅನುಮೋದನೆ ಪಡೆಯಲಾಗಿದೆ.
ಆದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ಈಗಿರುವ ವಿಶ್ವವಿದ್ಯಾಲಯಕ್ಕೆ ಗೌರವಾರ್ಥವಾಗಿ ಇಡುವ ಬದಲು ಹೊಸ ವಿಶ್ವವಿದ್ಯಾಲಯ ಆರಂಭಿಸಿ ಹೆಸರಿಸಬೇಕು ಎಂದು ವಿರೋಧ ಪಕ್ಷ ಬಿಜೆಪಿ ಸೂಚಿಸಿತ್ತು. ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಅವರ ಹೆಸರಿಡುವುದು ಅವರಿಗೆ ನೀಡುವ ಗೌರವವಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಪಾದಿಸಿದರು.
ಏತನ್ಮಧ್ಯೆ, ‘ನಡೆದಾಡುವ ದೇವರು’ ಎಂದೇ ಖ್ಯಾತರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ತುಮಕೂರು ವಿಶ್ವವಿದ್ಯಾಲಯಕ್ಕೂ ಇಡಬೇಕಿತ್ತು ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಡಾ. ಮನಮೋಹನ್ ಸಿಂಗ್ ಯೂನಿವರ್ಸಿಟಿ ಎಂದು ಮರುನಾಮಕರಣ
2004 ರಿಂದ 2014 ರ ವರೆಗೆ ಎರಡು ಅವಧಿಗೆ ಒಟ್ಟು ಹತ್ತು ವರ್ಷ ಕಾಲ ಭಾರತದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, 1991ರಲ್ಲಿ ಕೇಂದ್ರದ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆಗ ಅವರು ಜಾರಿಗೆ ತಂದ ಉದಾರೀಕರಣ ಆರ್ಥಿಕ ನೀತಿ ದೇಶದ ಆರ್ಥಿಕತೆಗೆ ಬಹುದೊಡ್ಡ ಉತ್ತೇಜನ ನೀಡಿತ್ತು. ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದ ಹರಿಕಾರರಾಗಿ ಸಿಂಗ್ ಅವರನ್ನು ಇತಿಹಾಸ ಗುರುತಿಸಿದೆ.








