ಹಿಮಾಲಯ ಪರ್ವತ ದಾಟಿ ಕಬಿನಿಗೆ ಬರುತ್ತವೆ ಈ ಹೆಬ್ಬಾತುಗಳು; ಆಹಾರಕ್ಕಾಗಿ 8 ಸಾವಿರ ಕಿ.ಮೀ ಸಂಚಾರ

ಹಿಮಾಲಯ ಪರ್ವತ ದಾಟಿ ಕಬಿನಿಗೆ ಬರುತ್ತವೆ ಈ ಹೆಬ್ಬಾತುಗಳು; ಆಹಾರಕ್ಕಾಗಿ 8 ಸಾವಿರ ಕಿ.ಮೀ ಸಂಚಾರ
ಮೈಸೂರಿನ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಬಾರ್ ಹೆಡ್ ಗೂಸ್ ಪಕ್ಷಿಗಳ ವಿಹಾರ

ಮೈಸೂರಿನ ಕಬಿನಿ ಹಿನ್ನೀರು, ಹದಿನಾರು ಕೆರೆ ಹಾಗೂ ಗದಗ ಜಿಲ್ಲೆಯ ಮಾಗಡಿ ಕೆರೆಯಲ್ಲಿ ಇವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ‌. ಇವುಗಳು ವಲಸೆ ಬರುವಾಗಲು ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರುತ್ತವೆ.

Rajesh Duggumane

| Edited By: Ayesha Banu

Dec 10, 2020 | 7:35 AM

ಮೈಸೂರು: ಪ್ರತಿ ವರ್ಷ ಆಹಾರಕ್ಕಾಗಿ ದೂರದ ಮಂಗೋಲಿಯಾದಿಂದ ದಕ್ಷಿಣ ಭಾರತಕ್ಕೆ ಬಾರ್ ಹೆಡೆಡ್ ಗೂಸ್ (ಹೆಬ್ಬಾತು) ಹಕ್ಕಿಗಳು ವಲಸೆ ಬರುತ್ತವೆ. ಈ ವರ್ಷ ಕೂಡ ಮೈಸೂರಿನ ಹೆಚ್.ಡಿ.ಕೋಟೆಯ ಕಬಿನಿಯ ಹಿನ್ನೀರಿನಲ್ಲಿ ಹೆಬ್ಬಾತುವಿನ ತಂಡವೊಂದು ಬೀಡು ಬಿಟ್ಟಿದ್ದು, ಪಕ್ಷಿಗಳ ಕಲರವ ಜೋರಾಗಿದೆ.

ಈ ಪಕ್ಷಿಗಳು ನವೆಂಬರ್ ಕೊನೆಯ ವಾರದಲ್ಲಿ ಅಥವಾ ಡಿಸೆಂಬರ್​​ನಲ್ಲಿ ವಲಸೆ ಬಂದು‌ ಮೂರು ತಿಂಗಳ ಕಾಲ ಇಲ್ಲೇ ಇರುತ್ತವೆ. ನಂತರ ಫೆಬ್ರವರಿ ಅಥವ ಮಾರ್ಚ್ ತಿಂಗಳಿನಲ್ಲಿ ಮರಳಿ ತೆರಳುತ್ತವೆ. ಇವು ಹಿಮಾಲಯ ಪರ್ವತ ದಾಟಿಕೊಂಡು ದಕ್ಷಿಣ ಭಾರತದ ಕಡೆ ವಲಸೆ ಬರುತ್ತವೆ ಅನ್ನೋದು ವಿಶೇಷ.

ಮೈಸೂರಿನ ಕಬಿನಿ ಹಿನ್ನೀರು, ಹದಿನಾರು ಕೆರೆ ಹಾಗೂ ಗದಗ ಜಿಲ್ಲೆಯ ಮಾಗಡಿ ಕೆರೆಯಲ್ಲಿ ಇವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ‌. ಇವುಗಳು ವಲಸೆ ಬರುವಾಗಲು ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರುತ್ತವೆ. ಪ್ರಯಾಣದಲ್ಲಿ ಸಿಗುವ ಮರಳುಗಾಡು, ಸಮುದ್ರ, ಎತ್ತರದ ಬೆಟ್ಟ ಗುಡ್ಡ ಪರ್ವತಗಳನ್ನ ದಾಟಿ ಇವು ಬರಬೇಕಾಗುತ್ತದೆ.

ವಲಸೆಗೆ ಕಾರಣವೇನು? ಬಾರ್ ಹೆಡೆಡ್ ಗೂಸ್​​ಗಳು ಮೈಸೂರಿಗೆ ಬರೋಕೆ ಮುಖ್ಯ ಕಾರಣ ಆಹಾರ. ಇದಕ್ಕಾಗಿ ಇವು ಸುಮಾರು ಎಂಟು ಸಾವಿರ ಕಿ.ಮೀ ದೂರ ಬರುತ್ತವೆ. 18 ಸಾವಿರ ಅಡಿಗಳ ಎತ್ತರದಲ್ಲಿರುವ ಹಿಮಾಲಯ ಪರ್ವತವನ್ನು ಹಾರಿ ಭಾರತ ತಲುಪುತ್ತವೆ. ಇದರಿಂದ ಇವುಗಳನ್ನು ಪರ್ವತ ಹಕ್ಕಿಗಳು ಎಂದು ಕರೆಯುವುದುಂಟು. ಮಂಗೋಲಿಯಾ ಈ ಸಂದರ್ಭದಲ್ಲಿ ಹಿಮದಿಂದ ಆವೃತ್ತವಾಗಿರುತ್ತದೆ. ಹೀಗಾಗಿ ಅವುಗಳಿಗೆ ಆಹಾರದ ಕೊರತೆ ಉಂಟಾಗುತ್ತವೆ. ಹೀಗಾಗಿ ಇವುಗಳು ಆಹಾರಕ್ಕಾಗಿ ಸುರಕ್ಷಿತ ಸ್ಥಳವನ್ನು ಹುಡುಕಿಕೊಂಡು ದಕ್ಷಿಣ ಭಾರತದ ಕಡೆ ವಲಸೆ ಬರುತ್ತವೆ.

ಸುರಕ್ಷತೆ ಬಗ್ಗೆ ಗಮನ ಹರಿಸುವ ಹಕ್ಕಿಗಳು ನಿಶಾಚಾರಿ ಹಕ್ಕಿಗಳಾಗಿರುವ ಹೆಬ್ಬಾತುಗಳು ರಾತ್ರಿಯ ವೇಳೆ ಆಹಾರಕ್ಕಾಗಿ ಹುಡುಕಾಟ ನಡೆಸುತ್ತವೆ. ಹಗಲಿನ ವೇಳೆ ಬೇಟೆಗಾರರು ಹಾಗೂ ಇತರೆ ಪ್ರಾಣಿಗಳ ಅಪಾಯದಿಂದ ತಪ್ಪಿಸಿಕೊಳ್ಳಲು ನೀರಿನ ಮಧ್ಯದಲ್ಲಿ ತೇಲುತ್ತಿರುತ್ತವೆ. ಅಪಾಯ ಉಂಟಾದ ಸ್ಥಳಕ್ಕೆ ಮರಳಿ ಬರುವುದು ತುಂಬಾನೇ ಅಪರೂಪ. ಒಂದು ವೇಳೆ ಅಪಾಯ ಆಗದಿದ್ದರೆ,  ಆ ಸ್ಥಳಗಳ ಕಡೆ ಮತ್ತೆ ವಲಸೆ ಬರುತ್ತವೆ.

ಅಧ್ಯಾಯನಕ್ಕಾಗಿ ಕೊರಳು ಪಟ್ಟಿ ಪಕ್ಷಿಗಳ ಸಂಶೋಧನಾ ದೃಷ್ಟಿಯಿಂದ ವಿಜ್ಞಾನಿಗಳು ಈ ಬಾರ್ ಹೆಡೆಡ್ ಗೂಸ್ ಪಕ್ಷಿಯ ಕತ್ತಿನ ಭಾಗಕ್ಕೆ ಅಥವ ಕಾಲಿಗೆ ಪಟ್ಟಿಯನ್ನು ಹಾಕಿ ಕಳುಹಿಸುತ್ತಾರೆ. ಗುಂಪಾಗಿ ವಲಸೆ ಹೋಗುವ ಕಾರಣ ಗುಂಪಿನ ಒಂದೆರಡು ಪಕ್ಷಿಗಳಿಗೆ ಕೊರಳ ಪಟ್ಟಿಯಲ್ಲಿ ಸಂಖ್ಯೆಯನ್ನು ನಮೂದಿಸಿ ಹಾಕಲಾಗುತ್ತದೆ. ಇದರಿಂದ ಈ ಹಕ್ಕಿಗಳು ಎಲ್ಲಿಗೆ ವಲಸೆ ಹೋಗಿದ್ದವು, ಎಷ್ಟು ದೂರು ಕ್ರಮಿಸಿದವು ಎನ್ನುವ ಮಾಹಿತಿಯನ್ನು ಸಂಗ್ರಹಿಸಲು ಸಹಕಾರಿಯಾಗುತ್ತದೆ. ಇನ್ನು ಕೊರಳಿಗೆ ಹಾಕುವ ಪಟ್ಟಿಗಳು ಮೃದುವಾಗಿರುವುದರಿಂದ ಪಕ್ಷಿಗಳ ಪ್ರಾಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ.

ಮೈಸೂರಿನ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಬಾರ್ ಹೆಡ್ ಗೂಸ್ ಪಕ್ಷಿಗಳ ವಿಹಾರ

ವಿದ್ಯಾಕಾಶಿಯಲ್ಲಿ ಹಕ್ಕಿಗಳ ಮಾರಣಹೋಮ: ಔಷಧಕ್ಕೆಂದು ಸದ್ದಿಲ್ಲದೆ ಮಾಯವಾಗ್ತಿದೆ ಪಕ್ಷಿ ಸಂಕುಲ

Follow us on

Related Stories

Most Read Stories

Click on your DTH Provider to Add TV9 Kannada