‘ಬಸವ ಮಂಟಪ’ ಕೃತಿ ವಿವಾದ: ಕರ್ನಾಟಕಕ್ಕೆ ದೊಡ್ಡ ಅಗೌರವ, ಮುಟ್ಟುಗೋಲಿಗೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದ ಸಿಎಂ ಡಿಕೆಶಿ

‘ಬಸವ ಮಂಟಪ’ ಕೃತಿ ವಿವಾದ ಕರ್ನಾಟಕಕ್ಕೆ ದೊಡ್ಡ ಅಗೌರವ ಉಂಟುಮಾಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬಸವಣ್ಣನವರ ಆದರ್ಶಗಳನ್ನು ಸರ್ಕಾರ ಗೌರವಿಸುತ್ತಿದ್ದು, ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ವಿಚಾರಗಳು ಸಮಾಜದಲ್ಲಿ ವೈಷಮ್ಯ ಮೂಡಿಸುತ್ತಿವೆ ಎಂದು ಆಕ್ಷೇಪಿಸಿದ್ದಾರೆ. ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಒಕ್ಕೊರಲ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಈ ಸಂಬಂಧ ನಿರ್ದೇಶನ ನೀಡಿರುವುದಾಗಿಯೂ ತಿಳಿಸಿದ್ದಾರೆ.

‘ಬಸವ ಮಂಟಪ’ ಕೃತಿ ವಿವಾದ: ಕರ್ನಾಟಕಕ್ಕೆ ದೊಡ್ಡ ಅಗೌರವ, ಮುಟ್ಟುಗೋಲಿಗೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದ ಸಿಎಂ ಡಿಕೆಶಿ
ಲೇಖಕ ರವಿ ಹಂಜ್ ಹಾಗೂ ಸಿಎಂ ಡಿಕೆ ಶಿವಕುಮಾರ್
Edited By:

Updated on: Nov 20, 2026 | 1:02 PM

ಬೆಂಗಳೂರು, ನವೆಂಬರ್ 20: ‘ಬಸವ ಮಂಟಪ’ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಈ ಪ್ರಕರಣ ಕರ್ನಾಟಕಕ್ಕೆ ದೊಡ್ಡ ಅಗೌರವ ಉಂಟುಮಾಡಿದೆ ಎಂದು ಹೇಳಿದ್ದಾರೆ. ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಗೌರವಿಸುತ್ತಿದ್ದು, ಅವರ ವಿಚಾರಧಾರೆಗಳನ್ನು ದೇಶದಾದ್ಯಂತ ಪಸರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ವಿಚಾರಗಳು ಸಮಾಜದಲ್ಲಿ ವೈಷಮ್ಯ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬಸವಣ್ಣನವರ ಹೆಜ್ಜೆ ಗುರುತು ಇಡೀ ದೇಶಕ್ಕೆ ಮಾದರಿಯಾಗಿವೆ. ಅವರ ಆದರ್ಶಗಳನ್ನು ಸರ್ಕಾರಗಳು ಅಳವಡಿಸಿಕೊಳ್ಳುತ್ತಿವೆ. ದೆಹಲಿಯಲ್ಲಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಪ್ರತಿಯೊಂದು ಊರು, ಮನೆ, ಶಾಲೆ ಹಾಗೂ ಕಚೇರಿಗಳಲ್ಲಿ ಅವರ ಆಚಾರ-ವಿಚಾರಗಳನ್ನು ಜನರಿಗೆ ಮನದಟ್ಟು ಮಾಡುವ ಕೆಲಸ ನಡೆಯುತ್ತಿದೆ. ಅವರ ಆಡಳಿತ, ಭಾವಚಿತ್ರ ಹಾಗೂ ಮಾರ್ಗದರ್ಶನವನ್ನು ಸ್ಮರಿಸಿಕೊಂಡು ನಾವು ಹೆಜ್ಜೆ ಹಾಕುತ್ತಿದ್ದೇವೆ ಎಂದು ಹೇಳಿದರು.

Loading...

ಆದರೆ, ಇಂತಹ ಮಹಾನ್ ವ್ಯಕ್ತಿತ್ವದ ಬಗ್ಗೆ ಕೆಲವು ಕಿಡಿಗೇಡಿಗಳು ಸಮಾಜದಲ್ಲಿ ವೈಷಮ್ಯ ಮೂಡುವಂತಹ ವಿಚಾರಗಳನ್ನು ಹರಡುತ್ತಿದ್ದಾರೆ. ಇದು ಕರ್ನಾಟಕಕ್ಕೆ ದೊಡ್ಡ ಅಗೌರವ ತಂದಿರುವ ವಿಚಾರ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಸಂಪುಟದ ಒಕ್ಕೊರಲ ನಿರ್ಧಾರ

ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ತಮ್ಮ ಎಲ್ಲಾ ಸಂಪುಟ ಸಹೋದ್ಯೋಗಿಗಳು ಒಕ್ಕೊರಲಿನಿಂದ ನಿರ್ಧಾರ ಕೈಗೊಂಡಿದ್ದು, ಇಡೀ ಸಚಿವ ಸಂಪುಟದ ಸದಸ್ಯರು ನಿರ್ಧಾರಕ್ಕೆ ಸಹಿ ಹಾಕಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಬಸವ ಸಮಿತಿಯೂ ಈ ಸಂಬಂಧ ತಮಗೆ ಪತ್ರ ಬರೆದಿತ್ತು. ಹೀಗಾಗಿ ಎಲ್ಲ ಆಯಾಮಗಳನ್ನು ಚರ್ಚಿಸಿ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶನ ನೀಡಿದ್ದೇವೆ. ಈ ಕೃತಿಯ ಹಿಂದೆ ಯಾರ್ಯಾರು ಇದ್ದಾರೆ ಎಂಬುದನ್ನು ಪರಿಶೀಲಿಸಿ, ಸರ್ಕಾರದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು.

ರಾಜ್ಯದಲ್ಲಿ ಶಾಂತಿ ಭಂಗವಾಗಬಾರದು

ಈ ವಿಚಾರವಾಗಿ ವಿವಿಧ ಮುಖಂಡರು ತಮ್ಮ ಬಳಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಪ್ರತಿಭಟನೆಗಳು ಹೆಚ್ಚಾಗಿ ಶಾಂತಿ ಭಂಗ ಉಂಟಾಗುವ ಸಾಧ್ಯತೆ ಬಗ್ಗೆ ಆತಂಕವಿತ್ತು. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಮೊದಲೇ ಸಚಿವ ಸಂಪುಟ ಸಭೆಯಲ್ಲಿ ತಕ್ಷಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ವಿವರಿಸಿದರು.

ಬಸವಣ್ಣನವರ ಕುರಿತು ಕೃತಿಯಲ್ಲಿನ ಕೆಲವು ಬರಹಗಳು ಆಕ್ಷೇಪಾರ್ಹವಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಸವಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬಸವಣ್ಣನವರನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂಬುದು ಪ್ರತಿಭಟನಾಕಾರರ ಆಕ್ಷೇಪವಾಗಿದೆ. ಈ ಸಂಬಂಧ ಲೇಖಕ ರವಿ ಹಂಜ್ ಹಾಗೂ ಕೃತಿಯನ್ನು ಪ್ರಕಟಿಸಿದ ಪತ್ರಕರ್ತ ವಿಶ್ವೇಶ್ವರ್ ಭಟ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿವಾದದ ಬೆನ್ನಲ್ಲೇ ಲೇಖಕ ರವಿ ಹಂಜ್ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ಬಸವ ಮಂಟಪ’ ಕೃತಿ ವಿವಾದ: ಪುಸ್ತಕದಲ್ಲಿ ಏನಿದೆ? ಲೇಖಕ ರವಿ ಹಂಜ್‌ಗೆ ಸಂಕಷ್ಟ ತಂದ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ

ಒಟ್ಟಿನಲ್ಲಿ, ‘ಬಸವ ಮಂಟಪ’ ಕೃತಿ ವಿವಾದದ ಹಿನ್ನೆಲೆಯಲ್ಲಿ ಸರ್ಕಾರ ಮುಟ್ಟುಗೋಲು ಕ್ರಮಕ್ಕೆ ಮುಂದಾಗಿದ್ದು, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
Loading...
Unable to load recommendations.
Follow Us