ಗಾಣಗಾಪುರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸಿದ್ಧ: 250 ಕೋಟಿ ರೂ. ವೆಚ್ಚದ ಯೋಜನೆಗೆ ಮುಂದಾದ ಸರ್ಕಾರ
ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ 250 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಮೊದಲ ಹಂತದಲ್ಲಿ 50 ಕೋಟಿ ರೂಪಾಯಿ ವೆಚ್ಚದ ಆರು ಪ್ರಮುಖ ಕಾಮಗಾರಿಗಳಿಗೆ ಡಿಪಿಆರ್ ಸಿದ್ಧಪಡಿಸಲಾಗಿದೆ. ಸಂಗಮ ಘಾಟ್, ಪಾಪವಿನಾಶ ತೀರ್ಥ, ಪಾರ್ಕಿಂಗ್ ವ್ಯವಸ್ಥೆ, ದೇವಸ್ಥಾನದ ಮಾರ್ಗ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.

ಮುಖ್ಯಾಂಶಗಳು
- ಗಾಣಗಾಪುರ ದತ್ತಾತ್ರೇಯ ಕ್ಷೇತ್ರಕ್ಕೆ 250 ಕೋಟಿ ಮಾಸ್ಟರ್ ಪ್ಲ್ಯಾನ್
- ಮೊದಲ ಹಂತದಲ್ಲಿ ಆರು ಪ್ರಮುಖ ಅಭಿವೃದ್ಧಿ ಕಾಮಗಾರಿಗಳು
- 860 ಕಾರು, 500 ಬೈಕ್‌ಗಳಿಗೆ ಬೃಹತ್ ಪಾರ್ಕಿಂಗ್ ವ್ಯವಸ್ಥೆ
ಕಲಬುರಗಿ, ನವೆಂಬರ್ 20: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದತ್ತಾತ್ರೇಯ ಸ್ವಾಮಿಯ ಸನ್ನಿಧಿಗೆ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಬರೋಬ್ಬರಿ 250 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ಮೊದಲ ಹಂತದಲ್ಲಿ 50 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ.
ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಪ್ರತಿ ಹುಣ್ಣಿಮೆಯಂದು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತಿದಿನವೂ ಸಾವಿರಾರು ಭಕ್ತರು ದತ್ತಾತ್ರೇಯ ಸ್ವಾಮಿಯ ಪಾದುಕೆಗಳ ದರ್ಶನ ಪಡೆಯುತ್ತಾರೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಭಕ್ತರ ಸಂಖ್ಯೆ ಹೆಚ್ಚಿದ್ದರೂ ಸೂಕ್ತ ಪಾರ್ಕಿಂಗ್, ದರ್ಶನ ವ್ಯವಸ್ಥೆ ಹಾಗೂ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಅಗತ್ಯ ಸೌಲಭ್ಯಗಳ ಕೊರತೆಯಿದೆ ಎಂಬ ದೂರುಗಳಿದ್ದವು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದೆ.
ಗಾಣಗಾಪುರದಲ್ಲಿ ಮೊದಲ ಹಂತದ ಆರು ಪ್ರಮುಖ ಕಾಮಗಾರಿಗಳು
ಮೊದಲ ಹಂತದಲ್ಲಿ ಆರು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಭಕ್ತರು ಪುಣ್ಯಸ್ನಾನ ಮಾಡುವ ಸಂಗಮ ಘಾಟ್ ಅಭಿವೃದ್ಧಿಗೆ 17.12 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಪಾಪವಿನಾಶ ತೀರ್ಥದ ಅಭಿವೃದ್ಧಿಗೆ 12.50 ಕೋಟಿ ರೂಪಾಯಿ ಹಾಗೂ ದತ್ತಾತ್ರೇಯ ದೇವಸ್ಥಾನದ ಪ್ರೊಮೆನಡ್ ಮಾರ್ಗ ನಿರ್ಮಾಣಕ್ಕೆ 6.50 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ.
ಇನ್ನು ಪಾರ್ಕಿಂಗ್ ಮತ್ತು ಸಾರಿಗೆ ವ್ಯವಸ್ಥೆ ಅಭಿವೃದ್ಧಿಗೆ 9.10 ಕೋಟಿ ರೂಪಾಯಿ ಮೀಸಲಿಡಲಾಗಿದೆ. ದೇವಸ್ಥಾನ ಸಂಕೀರ್ಣದ ಅಭಿವೃದ್ಧಿಗೆ 4.25 ಕೋಟಿ ರೂಪಾಯಿ ಹಾಗೂ ಬಸ್ ನಿಲ್ದಾಣದಿಂದ ದೇವಸ್ಥಾನದವರೆಗೆ ಪಾದಚಾರಿ ಮಾರ್ಗ ನಿರ್ಮಾಣಕ್ಕೆ 52 ಲಕ್ಷ ರೂಪಾಯಿ ಯೋಜನೆ ರೂಪಿಸಲಾಗಿದೆ.
860 ಕಾರು, 500 ಬೈಕ್‌ಗಳ ಪಾರ್ಕಿಂಗ್ ವ್ಯವಸ್ಥೆ
ಗಾಣಗಾಪುರಕ್ಕೆ ಬರುವ ಭಕ್ತರ ವಾಹನಗಳ ನಿಲುಗಡೆ ಸಮಸ್ಯೆ ಪರಿಹರಿಸಲು ಬೃಹತ್ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಉದ್ದೇಶಿಸಲಾಗಿದೆ. ಒಂದೇ ಬಾರಿಗೆ 860 ಕಾರುಗಳು ಹಾಗೂ 500 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಸೌಲಭ್ಯ ಕಲ್ಪಿಸಲಾಗುತ್ತದೆ.
ಸಂಗಮ ಘಾಟ್‌ನಲ್ಲಿ 40 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಪಾಪವಿನಾಶ ತೀರ್ಥದಲ್ಲಿ ಫ್ಲೋಟಿಂಗ್ ಜೆಟ್ಟಿ ಹಾಗೂ ಸುರಕ್ಷಿತವಾಗಿ ಪುಣ್ಯಸ್ನಾನ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ಇದೆ. ದೇವಸ್ಥಾನದ ಮಾರ್ಗದಲ್ಲಿ 30 ಅಂಗಡಿಗಳು, ಮಾಹಿತಿ ಕೇಂದ್ರ ಹಾಗೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಇರಲಿದೆ.
ಇದರ ಜೊತೆಗೆ ಉದ್ಯಾನವನ, ಶೌಚಾಲಯ ಹಾಗೂ ವಿಶ್ರಾಂತಿ ಸ್ಥಳಗಳನ್ನು ನಿರ್ಮಿಸುವ ಮೂಲಕ ಯಾತ್ರಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಯೋಜಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲ ಭಕ್ತರ ಅನುಕೂಲಕ್ಕೂ ಆದ್ಯತೆ ನೀಡಲಾಗಿದ್ದು, ಅವರಿಗೆ ವಿಶೇಷ ಪ್ರವೇಶ ವ್ಯವಸ್ಥೆ ಹಾಗೂ ಪ್ರತ್ಯೇಕ ದರ್ಶನ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ.
ಗಾಣಗಾಪುರಕ್ಕೆ ಚತುಷ್ಪಥ ರಸ್ತೆ ನಿರ್ಮಾಣದ ಯೋಜನೆ
ಪ್ರತಿ ಹುಣ್ಣಿಮೆಯಂದು ನೆರೆಯ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಗಾಣಗಾಪುರ ಸುತ್ತಮುತ್ತ ವಾಹನ ದಟ್ಟಣೆ ಉಂಟಾಗುತ್ತದೆ. ಕೆಲವೊಮ್ಮೆ ಗಂಟೆಗಟ್ಟಲೆ ಸಂಚಾರ ದಟ್ಟಣೆ ಎದುರಿಸಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚೌಡಾಪುರ ಪಟ್ಟಣದಿಂದ ಗಾಣಗಾಪುರದವರೆಗೆ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ.
ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಷರೀಫ್ ಅವರು ತಮ್ಮ ತಂಡದೊಂದಿಗೆ ಕ್ಷೇತ್ರಕ್ಕೆ ಭೇಟಿ ನೀಡಿ ಅಭಿವೃದ್ಧಿ ಯೋಜನೆಯ ರೂಪುರೇಷೆ ಸಿದ್ಧಪಡಿಸಿದ್ದಾರೆ. ಮೊದಲ ಹಂತದ 50 ಕೋಟಿ ರೂಪಾಯಿ ವೆಚ್ಚದ ಯೋಜನೆ ಅನುಷ್ಠಾನಗೊಂಡರೆ ಗಾಣಗಾಪುರ ಕ್ಷೇತ್ರದ ಮೂಲಸೌಕರ್ಯದಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ.
ಭಕ್ತರಿಗೆ ಅನುಕೂಲ, ಸ್ಥಳೀಯರಿಗೆ ಉದ್ಯೋಗಾವಕಾಶ
ಈ ಯೋಜನೆಯಿಂದ ದತ್ತಾತ್ರೇಯ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ಉತ್ತಮ ಸೌಲಭ್ಯಗಳು ದೊರೆಯಲಿವೆ. ವಾಣಿಜ್ಯ ಮಳಿಗೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ. ಜೊತೆಗೆ ಕಲಬುರಗಿ ಜಿಲ್ಲೆಯ ಆರ್ಥಿಕ ಚಟುವಟಿಕೆ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುವ ಗುರಿ ಹೊಂದಲಾಗಿದೆ.
ಒಟ್ಟಿನಲ್ಲಿ, 250 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲ್ಯಾನ್‌ನ ಮೊದಲ ಹಂತದ ಕಾಮಗಾರಿಗಳು ಯಾವಾಗ ಆರಂಭವಾಗಲಿವೆ ಎಂಬುದು ಈಗ ಕುತೂಹಲ ಮೂಡಿಸಿದೆ. ಯೋಜನೆ ಜಾರಿಯಾದರೆ ಗಾಣಗಾಪುರದ ದತ್ತಾತ್ರೇಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಹಲವು ಮೂಲಸೌಕರ್ಯಗಳ ಅನುಕೂಲ ದೊರೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




