ಕಿಡ್ನಿ ದಾನಮಾಡಿ ಹೆಂಡತಿಯನ್ನ ಉಳಿಸಿಕೊಂಡರೂ ವಿಧಿಯ ಮುಂದೆ ಸೋತ ಪತಿ: ಹಿಟ್ ಆ್ಯಂಡ್ ರನ್ಗೆ ಮಹಿಳೆ ಬಲಿ
ಆರು ವರ್ಷಗಳ ಹಿಂದೆ ಕಿಡ್ನಿ ದಾನ ಮಾಡಿ ಪತಿಯಿಂದ ಮರುಜೀವ ಪಡೆದಿದ್ದ ಮಹಿಳೆ , ನೆಲಮಂಗಲದ ಎಡೆಹಳ್ಳಿ ಬಳಿ ಸಂಭವಿಸಿದ ಭೀಕರ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ.

ನೆಲಮಂಗಲ, ನವೆಂಬರ್ 20: ಆಕೆಯದಿನ್ನೂ ಬದುಕಿ ಬಾಳಬೇಕಿದ್ದ ವಯಸ್ಸು. ಅಷ್ಟರಲ್ಲಾಗಲೇ ಬಾಳಲ್ಲಿ ವಿಧಿ ಚೆಲ್ಲಾಟವಾಡಿತ್ತು. ತೀವ್ರ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆ ಸೇರಿದ್ದವಳಿಗೆ ತನ್ನದೇ ಕಿಡ್ನಿ ನೀಡಿ ಪತಿ ಮರುಜೀವ ನೀಡಿದ್ದ. ಇನ್ನು ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲೇ ಮತ್ತೊಂದು ದುರಂತ ನಡೆದುಹೋಗಿದೆ. ಪತಿ ಜೊತೆ ಮಠಕ್ಕೆ ತೆರಳಿದ್ದವಳು ಮನೆಗೆ ಮರಳದೆ ಮಸಣ ಸೇರಿದ್ದಾಳೆ. ಹೌದು, ನೆಲಮಂಗಲ ತಾಲೂಕಿನ ಎಡೆಹಳ್ಳಿಯಲ್ಲಿ ಹಿಟ್ ಆ್ಯಂಡ್ ರನ್ಗೆ 38 ವರ್ಷದ ಮಹಿಳೆ ಬಲಿಯಾಗಿದ್ದಾರೆ. ವೀಣಾ ಭಾಯಿ ಮೃತ ದುರ್ದೈವಿ.
ಪತಿ ಶಿವಾಜಿ ರಾವ್ ಜೊತೆ ವೀಣಾ ಭಾಯಿ ನಿನ್ನೆ ರಾತ್ರಿ ಸಿದ್ದಗಂಗಾ ಮಠಕ್ಕೆ ಪೂಜೆಗೆಂದು ತೆರಳಿದ್ದರು. ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ ವೀಣಾ ಭಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಂಡತಿಯನ್ನ ಕಳೆದುಕೊಂಡು ಪತಿಯ ಆಕ್ರಂದನ ಮುಗಿಲು ಮುಟ್ಟಿದ್ದು, ನೋಡುಗರ ಕಣ್ಣಂಚಲೂ ನೀರು ತರಿಸಿವೆ. ದಂಪತಿ ಲಗ್ಗೆರೆ ನಿವಾಸಿಗಳಾಗಿದ್ದರು. ಶಿವಾಜಿ ರಾವ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಕಾರಿನಲ್ಲಿ ವ್ಯಕ್ತಿ ಶವ ಪತ್ತೆ: ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ
ಕಿಡ್ನಿ ನೀಡಿ ಪತ್ನಿಯ ಜೀವ ಕಾಪಾಡಿದ್ದ ಪತಿ
ಇನ್ನು ಆರು ವರ್ಷಗಳ ಹಿಂದೆ ಲೋ ಬಿಪಿ ಆಗಿ ವೀಣಾ ಭಾಯಿ ತಮ್ಮ ಎರಡೂ ಕಿಡ್ನಿಗಳನ್ನು ಕಳೆದುಕೊಂಡಿದ್ದರು. ಈ ವೇಳೆ ಸ್ವತಃ ತಾವೇ ಒಂದು ಕಿಡ್ನಿ ದಾನ ಮಾಡುವ ಮೂಲಕ ಪತಿ ಶಿವಾಜಿ ರಾವ್ ಪತ್ನಿಯ ಜೀವ ಉಳಿಸಿಕೊಂಡಿದ್ದರು. ಆದರೆ ಅದೇ ಪತ್ನಿಯೀಗ ಅಪಘಾತಕ್ಕೆ ಬಲಿಯಾಗಿರೋದು ಶಿವಾಜಿ ರಾವ್ಗೆ ಅರಗಿಸಿಕೊಳ್ಳಲಾಗದ ನೋವು ತಂದಿದೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:23 pm, Fri, 20 November 26




