ಬಿಬಿಎಂಪಿ ಲ್ಯಾಬ್‌ನಲ್ಲಿ ಬೆಂಕಿ ಪ್ರಕರಣ: ಚಿಕಿತ್ಸೆ ಫಲಿಸದೆ ಬಿಬಿಎಂಪಿ ಎಇ ನಿಧನ, ಡಿಕೆ ಶಿವಕುಮಾರ್ ಸಂತಾಪ
bbmp Lab fire incident: ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯ ಲ್ಯಾಬ್‌ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಇ ಶಿವಕುಮಾರ್ ನಿಧನರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರು, (ಆಗಸ್ಟ್ 28): ಬೆಂಗಳೂರಿನ ಬಿಬಿಎಂಪಿ (BBMP) ಕೇಂದ್ರ ಕಚೇರಿಯ ಲ್ಯಾಬ್‌ನಲ್ಲಿ ಅಗ್ನಿ(Fire) ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಇ ಶಿವಕುಮಾರ್ (Shivakumar) ನಿಧನರಾಗಿದ್ದಾರೆ. ಆಕಸ್ಮಿಕ ಬೆಂಕಿ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಬಿಬಿಎಂಪಿ ಎಇ ಶಿವಕುಮಾರ್ ಇಂದು (ಆಗಸ್ಟ್ 30) ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಶೇಕಡಾ 25ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಶಿವಕುಮಾರ್ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್ನಲ್ಲಿ 1 ವಾರ ಕಾಲ ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಶ್ವಾಸಕೋಶ ನಿಷ್ಕ್ರಿಯವಾದ ನಂತರ ಅಪೋಲೊ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: ಬಿಬಿಎಂಪಿಯಲ್ಲಿ ಅಗ್ನಿ ಅವಘಡ ಬಗ್ಗೆ ಡಿಸಿಎಂ ಮಿಡ್ ನೈಟ್ ಮೀಟಿಂಗ್, 3 ಆಯಾಮಗಳಲ್ಲಿ ತನಿಖೆಗೆ ಸೂಚನೆ
ಡಿಕೆ ಶಿವಕುಮಾರ್ ಸಂತಾಪ
ಬಿಬಿಎಂಪಿ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯ ಅಗ್ನಿ ದುರಂತಕ್ಕೆ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಶಿವಕುಮಾರ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
“ಮುಖ್ಯ ಇಂಜಿನಿಯರ್ ಶಿವಕುಮಾರ್ ಅವರ ಅಗಲಿಕೆ ಸುದ್ದಿ ಕೇಳಿ ಬೇಸರವಾಗಿದೆ. ಕೆಲ ದಿನಗಳ ಹಿಂದಷ್ಟೇ ನಾನು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡಿದರೂ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅವರು ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೆವು. ನಮ್ಮ ಪ್ರಾರ್ಥನೆ ಫಲ ನೀಡಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಈ ಅವಘಡದಿಂದ ಪ್ರಾಣ ಕಳೆದುಕೊಂಡಿರುವುದು ಮನಸ್ಸಿಗೆ ನೋವು ಉಂಟು ಮಾಡಿದೆ. ಶಿವಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು ಹಾಗೂ ಬಂಧು ಮಿತ್ರರಿಗೆ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:09 pm, Mon, 28 August 23