
ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ನವರತ್ನ ಸಾರ್ವಜನಿಕ ವಲಯದ ಉದ್ದಿಮೆ ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ (BEL), ತನ್ನ ಬೆಂಗಳೂರು ಕಾಂಪ್ಲೆಕ್ಸ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಚಾಲನೆ ನೀಡಿದೆ. ಜಾಲಹಳ್ಳಿಯಲ್ಲಿರುವ ಎಲೆಕ್ಟ್ರಾನಿಕ್ ವಾರ್ಫೇರ್ ಮತ್ತು ಏವಿಯಾನಿಕ್ಸ್ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಲ್ ಸಂಸ್ಥೆಯು ಒಟ್ಟು 14 ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಎಂಜಿನಿಯರಿಂಗ್ ವಿಭಾಗವಾರು ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ 08 ಹುದ್ದೆಗಳು ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ 06 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳು ಬೆಂಗಳೂರಿನ ಜಾಲಹಳ್ಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
ಈ ಹುದ್ದೆಗಳಿಗೆ ಸರ್ಕಾರಿ ನಿಯಮಾವಳಿಗಳ ಪ್ರಕಾರ ವರ್ಗಾವಾರು ಮೀಸಲಾತಿಯನ್ನು ನೀಡಲಾಗಿದೆ. ಒಟ್ಟು ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ (UR) 06, ಇತರ ಹಿಂದುಳಿದ ವರ್ಗಕ್ಕೆ (OBC) 04, ಪರಿಶಿಷ್ಟ ಜಾತಿಗೆ (SC) 02, ಪರಿಶಿಷ್ಟ ಪಂಗಡಕ್ಕೆ (ST) 01 ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (EWS) 01 ಹುದ್ದೆಯನ್ನು ಹಂಚಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ 4 ವರ್ಷಗಳ ಪೂರ್ಣಾವಧಿ B.E., B.Tech ಅಥವಾ B.Sc Engineering ಪದವಿಯನ್ನು ಪೂರ್ಣಗೊಳಿಸಿರಬೇಕು. ಇದರೊಂದಿಗೆ, ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಸಂಬಂಧಿತ ಕೈಗಾರಿಕಾ ವಲಯದಲ್ಲಿ ಕನಿಷ್ಠ 2 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರುವುದು ಕಡ್ಡಾಯವಾಗಿದೆ.
2026 ರ ಅಕ್ಟೋಬರ್ 01 ಅನ್ವಯ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 32 ವರ್ಷ ಮೀರಿರಬಾರದು. ಸರಕಾರಿ ಮಾರ್ಗಸೂಚಿಯಂತೆ ವಯೋಸಡಿಲಿಕೆ ಲಭ್ಯವಿದ್ದು, ಹಿಂದುಳಿದ ವರ್ಗದ (OBC) ಅಭ್ಯರ್ಥಿಗಳಿಗೆ 3 ವರ್ಷಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳು ಹಾಗೂ ಅಂಗವಿಕಲ (PwBD) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಸಿಗಲಿದೆ.
ಆರಂಭದಲ್ಲಿ ಈ ಹುದ್ದೆಗಳಿಗೆ 3 ವರ್ಷಗಳ ಗುತ್ತಿಗೆ ಅವಧಿ ಇರಲಿದೆ. ಯೋಜನೆಯ ಪ್ರಗತಿ ಮತ್ತು ಅಭ್ಯರ್ಥಿಯ ಕಾರ್ಯಕ್ಷಮತೆಯನ್ನು ಆಧರಿಸಿ ಈ ಅವಧಿಯನ್ನು ಗರಿಷ್ಠ ಮತ್ತೊಂದು ವರ್ಷಕ್ಕೆ (ಒಟ್ಟು 4 ವರ್ಷಗಳವರೆಗೆ) ವಿಸ್ತರಿಸುವ ಅವಕಾಶವಿದೆ. ವೇತನಕ್ಕೆ ಸಂಬಂಧಿಸಿದಂತೆ, ಮೊದಲ ವರ್ಷ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 50,000 ರೂ. ಪಾವತಿಸಲಾಗುತ್ತದೆ. ಗುತ್ತಿಗೆಯ ಪ್ರತಿ ವರ್ಷದ ವಿಸ್ತರಣೆಗೆ ಮಾಸಿಕ 5,000ರೂ. ಗಳಂತೆ ವೇತನ ಹೆಚ್ಚಳವಾಗಲಿದೆ. ಇದರ ಜೊತೆಗೆ ವಾರ್ಷಿಕವಾಗಿ 12,000 ರೂ. ಹೆಚ್ಚುವರಿ ಭತ್ಯೆ ದೊರೆಯಲಿದೆ. ಅಲ್ಲದೆ, 4 ವರ್ಷಗಳ ಸಂಪೂರ್ಣ ಗುತ್ತಿಗೆ ಅವಧಿಯನ್ನು ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ವಾರ್ಷಿಕ 25,000 ರೂ. ರಂತೆ ಒಟ್ಟು 1,00,000 ಗಳ ರಿಟೆಂನ್ಷನ್ ಬೋನಸ್ ಮತ್ತು ಗ್ರಾಚ್ಯುಟಿ ಸಿಗಲಿದೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ: 86 ಜವಾನ, ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ 400ರೂ. ಶುಲ್ಕದ ಜೊತೆಗೆ ಶೇ.18 GST ಸೇರಿದಂತೆ ಒಟ್ಟು 472ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಅಂಗವಿಕಲ (PwBD) ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ನೇಮಕಾತಿ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಆನ್ಲೈನ್ ಅರ್ಜಿ ಸಲ್ಲಿಕೆಯು ಅಕ್ಟೋಬರ್ 09 ರಿಂದ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 23 ಕೊನೆಯ ದಿನಾಂಕವಾಗಿದೆ. ಆದ್ದರಿಂದ ಆಸಕ್ತ ಅಭ್ಯರ್ಥಿಗಳು ತಡಮಾಡದೇ ಕೂಡಲೇ ಅರ್ಜಿ ಸಲ್ಲಿಸಿ, ನಿಮ್ಮ ಕನಸಿನ ಉದ್ಯೋಗವನ್ನು ಪಡೆಯಿರಿ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Fri, 16 October 26