ನಾಳೆ ಎಐಸಿಸಿ ಮಹಾಧಿವೇಶನದ ಶತಮಾನೋತ್ಸವ: ಕುಂದಾನಗರಿ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರ ದಂಡು
1924ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಕರ್ನಾಟಕ ಸರ್ಕಾರ ವಿಜೃಂಭಣೆಯಿಂದ ಆಚರಿಸುತ್ತಿದೆ. ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದ ಸ್ಮರಣಾರ್ಥ ಹಲವು ಕಾರ್ಯಕ್ರಮಗಳು ಏರ್ಪಾಟಾಗಿದ್ದು, ಕಾಂಗ್ರೆಸ್ ನಾಯಕರು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಆದರೆ ಬಿಜೆಪಿ ಈ ಕಾರ್ಯಕ್ರಮವನ್ನು ಟೀಕಿಸಿದೆ.
ಬೆಳಗಾವಿ, ಡಿಸೆಂಬರ್ 25: ಅದು 1924, ಸ್ವಾತಂತ್ರ್ಯ ಸಂಗ್ರಾಮ ಚುರುಕು ಪಡೆದ ದಿನಗಳು. ಆ ದಿನಗಳಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿತ್ತು. ಆ ಅಧಿವೇಶನ ನಡೆದು ನೂರುವರ್ಷಗಳು ತುಂಬುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಬೆಳಗಾವಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಗುರುವಾರ ಮತ್ತು ಶುಕ್ರವಾರ ಎರಡು ದಿನ ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ಕಾಂಗ್ರೆಸ್ ನಾಯಕರ ದಂಡೇ ಕುಂದಾನಗರಿಯಲ್ಲಿ ಬೀಡು ಬಿಟ್ಟಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಮುನಿಯಪ್ಪ, ಎಂಬಿ ಪಾಟೀಲ್ ಸೇರಿ ಘಟಾನುಘಟಿ ನಾಯಕರು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.
ಕಾಂಗ್ರೆಸ್ ಅಧಿವೇಶನದಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆ?
ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, 140 ಸಂಸದರು ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ.
ಪ್ರಮುಖ ನಾಯಕರಿಗೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಸಂಜೆ ಪೀರನವಾಡಿಯಲ್ಲಿರುವ ಗಾಂಧಿ ಭವನದಲ್ಲಿ ಎಐಸಿಸಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಖರ್ಗೆ ಅವರೇ ಎಲ್ಲರಿಗೂ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಇನ್ನು ಗುರುವಾರ ಸುವರ್ಣ ಸೌಧದಲ್ಲಿ ಗಾಂಧಿ ಪ್ರತಿಮೆ ಉದ್ಘಾಟನೆ ಮಾಡಲಿದ್ದು ಫೋಟೋ ಸೆಷನ್ ಕೂಡ ನಡೆಯಲಿದೆ.
ಇನ್ನು ಡಿ.27ರಂದು ಬೆಳಗ್ಗೆ ಹನ್ನೊಂದು ಗಂಟೆಗೆ ನಗರದ ಸಿಪಿಎಡ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ
ಕಾರ್ಯಕ್ರಮದ ಯಶಸ್ವಿಗಾಗಿ ಹಲವು ಕಮಿಟಿಗಳನ್ನು ಮಾಡಲಾಗಿದೆ. ಊಟ, ವಸತಿ ಸೇರಿ ಒಂದೊಂದು ಕಮಿಟಿಗೆ ಒಂದೊಂದು ಜವಾಬ್ದಾರಿ ವಹಿಸಲಾಗಿದೆ.
ನಕಲಿ ಗಾಂಧಿಗಳಿಂದ ಸಮಾವೇಶ: ಶೆಟ್ಟರ್ ಟೀಕೆ
ಎಐಸಿಸಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮಕ್ಕೆ ವಿಧಾನಸಭೆ ವಿಪಕ್ಷ ನಾಯಕ ಅಶೋಕ್, ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಸ್ವಾಮಿಗೆ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ಆಹ್ವಾನಿಸಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಬಿಜೆಪಿ ಕಿಡಿಕಾರಿದೆ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ನಕಲಿ ಗಾಂಧಿಗಳಿಂದ ಸಮಾವೇಶ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಸಿದ್ಧತೆ ಹೇಗಿದೆ? ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ವಿವರ ಇಲ್ಲಿದೆ
ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು, ಸಂಸದರನ್ನು ಆಹ್ವಾನಿಸದೆ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಈ ಸಮಾವೇಶದ ಮೂಲಕ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿರುವುದು ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ