ನೇಮಕಾತಿ ಅಕ್ರಮ ಆರೋಪ: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಕಚೇರಿ ಮೇಲೆ ಸಿಬಿಐ ದಾಳಿ

ರಾಜ್ಯದ ಏಕೈಕ ದಂಡುಮಂಡಳಿ ಕಚೇರಿ ಬೆಳಗಾವಿಯಲ್ಲಿದೆ. ಈ ಕಚೇರಿಗೆ ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ತಮಗೆ ದೂರು ಬಂದ ಹಿನ್ನೆಲೆ ಸ್ಥಳೀಯ ಮಟ್ಟದ ಅಧಿಕಾರಿಗಳ ವಿಚಾರಣೆ ಕೂಡ ನಡೆಸಿದ್ದಾರೆ.

ನೇಮಕಾತಿ ಅಕ್ರಮ ಆರೋಪ: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಕಚೇರಿ ಮೇಲೆ ಸಿಬಿಐ ದಾಳಿ
ಬೆಳಗಾವಿ: ಕಂಟೋನ್ಮೆಂಟ್ ಬೋರ್ಡ್ ಕಚೇರಿ ಮೇಲೆ ಸಿಬಿಐ ದಾಳಿ
Follow us
Sahadev Mane
| Updated By: Ganapathi Sharma

Updated on: Nov 18, 2023 | 6:04 PM

ಬೆಳಗಾವಿ, ನವೆಂಬರ್ 18: ಬೆಳಗಾವಿ ದಂಡು ಮಂಡಳಿಯಲ್ಲಿ (Belagavi Cantonment Board) ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಗೆ ಖುದ್ದು ಸಿಬಿಐ ಅಧಿಕಾರಿಗಳೇ (CBI Raid) ಬಂದಿದ್ದಾರೆ. ರಾಜ್ಯದ ಏಕೈಕ ದಂಡುಮಂಡಳಿ ಕಚೇರಿ ಬೆಳಗಾವಿಯಲ್ಲಿದೆ. ಈ ಕಚೇರಿಗೆ ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ತಮಗೆ ದೂರು ಬಂದ ಹಿನ್ನೆಲೆ ಸ್ಥಳೀಯ ಮಟ್ಟದ ಅಧಿಕಾರಿಗಳ ವಿಚಾರಣೆ ಕೂಡ ನಡೆಸಿದ್ದಾರೆ.

ಅಷ್ಟಕ್ಕೂ ಸಿಬಿಐ ದಾಳಿ ನಡೆಸಿದ್ದು ಎರಡು ವಿಚಾರಕ್ಕಾಗಿ. ಒಂದು ಕೆಲ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು ಇದರಲ್ಲಿ ಅಕ್ರಮ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇದರ ಜತೆಗೆ ಕ್ಲಿಂಟನ್ ಅಂತ ಬೆಳಗಾವಿಯ ಕ್ಯಾಂಪ್ ನಿವಾಸಿ. ಈ ಕ್ಲಿಂಟನ್ ಕ್ಯಾಂಪ್ ಪ್ರದೇಶದಲ್ಲಿ 1400 ಚದರ ಅಡಿ ಜಾಗ ಹೊಂದಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಕ್ಲಿಂಟನ್ ಮಾಲೀಕತ್ವದ 50 ಚದರ ಅಡಿ ಜಾಗವನ್ನು ಪಕ್ಕದ ಜಾಗದವರು ಒತ್ತುವರಿ ಮಾಡಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕ್ಲಿಂಟನ್ ದಂಡು ಮಂಡಳಿಗೆ ದೂರು ದಾಖಲಿಸಿದರೂ ಸಹ ಅಧಿಕಾರಿಗಳು ಕ್ಯಾರೆ ಎಂದಿರಲಿಲ್ಲ. ಅದೂ ಒಂದು ಎರಡೂ ಬಾರಿ ಅಲ್ಲ ಆಫ್ ಲೈನ್ ಆನ್ ಲೈನ್ ಸೇರಿ ಕ್ಲಿಂಟನ್ 22 ಸಾವಿರ ಬಾರಿ ದೂರು ಸಲ್ಲಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕ್ಲಿಂಟನ್ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಸಹ ಯಾವುದೇ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಕ್ಲಿಂಟನ್ ಟ್ವಿಟರ್ ಖಾತೆಯನ್ನು ತೆರೆದು ಅದರಲ್ಲಿ ಸಿಬಿಐಗೆ ಅಕೌಂಟಿಗೆ ಒಂದು ಟ್ವಿಟ್ ಮಾಡಿದ್ದರು. ಅಧಿಕಾರಿಗಳು ನೀಡ್ತಿರೋ ತೊಂದರೆಯ ಬಗ್ಗೆ ಕ್ಲಿಂಟನ್ ಟ್ವೀಟ್ ಮಾಡಿ ಮುಟ್ಟಿಸಿದ್ದರು. ಇನ್ನೂ ನೇಮಕಾತಿ ಅಕ್ರಮದ ಕುರಿತು ಕೂಡ ದೂರು ಬಂದ ಹಿನ್ನೆಲೆ ಇಂದು ಬೆಳ್ಳಂ ಬೆಳಗ್ಗೆ ದಂಡು ಮಂಡಳಿ ಕಚೇರಿಯ ಮೇಲೆ ಬೆಂಗಳೂರು ಹಾಗೂ ದೆಹಲಿ ಮೂಲದ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ತಲಾಷ್ ನಡೆಸಿದರು. ಇನ್ನೂ ಕ್ಲರ್ಕ್, ಸ್ಟೆನೋಗ್ರಾಫರ್ ಸೇರಿ 2021 ರಲ್ಲಿ ನಡೆದಿದ್ದ 19 ನೇಮಕಾತಿ ಪ್ರಕ್ರಿಯೆ ನಡೆದಿದ್ದು ಇದರಲ್ಲಿ ಅಕ್ರಮ ನಡೆದಿದೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ. ಇದೇ ಸಂದರ್ಭದಲ್ಲಿ ದಂಡು ಮಂಡಳಿಯ ಸಿಇಒ ಕೆ.ಆನಂದ್ ಸೇರಿ ಹಿರಿಯ ಅಧಿಕಾರಿಗಳನ್ನ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಕೆಲವುದ ದಾಖಲೆಗಳನ್ನ ಕೂಡ ತಮ್ಮ ವಶಕ್ಕೆ ತೆಗೆದುಕೊಂಡಿದ್ದು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ರೈತ ಪರ ಕಾಳಜಿಗೂ ಬರ… ಬರಗಾಲದ ಕುರಿತು ಚರ್ಚಿಸಲು ಬೆಳಗಾವಿ ಜಿಲ್ಲೆಯಲ್ಲಿ 18 ಶಾಸಕರ ಪೈಕಿ 3 ಮಂದಿ ಮಾತ್ರ ಸಭೆಗೆ ಹಾಜರು!

ಇನ್ನು ದಂಡು ಮಂಡಳಿಯ ವಿರುದ್ಧ ಕ್ಲರ್ಕ್ ಹಾಗೂ ಸ್ಟೇನೋಗ್ರಾಫರ್ ಪರೀಕ್ಷೆಯಲ್ಲೂ ಸಹ ಅಕ್ರಮದ ಆರೋಪ ಇದ್ದ ಬೆನ್ನಲ್ಲೆ ಅಧಿಕಾರಿಗಳಿ ದಾಳಿ ನಡೆಸಿದ್ದು ಮಹತ್ವದ ದಾಖಲೆಗಳನ್ನೂ ಸಹ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜನರ ಹಿತ ಕಾಪಾಡಲು ಇರುವ ವ್ಯವಸ್ಥೆ ಅವ್ಯವಸ್ಥೆಯ ಹಾದಿ ಹಿಡಿಯುತ್ತಿದ್ದಂತೆ ಸಿಬಿಐ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ನಿಜಕ್ಕೂ ಅಕ್ರಮ ಆಗಿದೆಯಾ ಅನ್ನೋದು ತನಿಖೆಯಿಂದಷ್ಟೇ ಹೊರ ಬರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ