ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಗದ್ದಲ: ಸುರ್ಜೇವಾಲ ಮೇಲೆ ಮುಗಿಬಿದ್ದ ಸತೀಶ್ ಜಾರಕಿಹೊಳಿ ಬೆಂಬಲಿಗರು
ಬೆಳಗಾವಿಯಲ್ಲಿ ಗಾಂಧಿ ಭಾರತ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್‌ನಲ್ಲಿ ಗೊಂದಲ ಉಂಟಾಗಿದೆ. ರಣದೀಪ್ ಸುರ್ಜೇವಾಲ ಮತ್ತು ಸತೀಶ್ ಜಾರಕಿಹೊಳಿ ಬೆಂಬಲಿಗರ ನಡುವೆ ವಾದ-ವಿವಾದಗಳು ನಡೆದಿವೆ. ಕಾರ್ಯಕರ್ತರು ಸಭೆ ನಡೆದಿಲ್ಲ ಎಂದು ಆಕ್ಷೇಪಿಸಿದ್ದಾರೆ. ಕಾಂಗ್ರೆಸ್ ಕಚೇರಿ ನಿರ್ಮಾಣದ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ. ಸುರ್ಜೇವಾಲ ಅವರು ಎಲ್ಲರನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ.
ಬೆಳಗಾವಿ, ಜನವರಿ 17: ಕ್ರೆಡಿಟ್ ವಾರ್.. ಬೆಳಗಾವಿ ಅಭಿವೃದ್ಧಿ ವಿಚಾರದಲ್ಲಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ವರ್ಸಸ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಕ್ರೆಡಿಟ್ ವಾರ್ ಶುರುವಾಗಿದೆ. ಇದೇ ಕ್ರೆಡಿಟ್ ವಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸಭೆಯಲ್ಲೂ ಸ್ಫೋಟಗೊಂಡಿತ್ತು. ಈ ಮಧ್ಯೆ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಗದ್ದಲ ಮಾಡಲಾಗಿದೆ.
ಇಂದು ನಗರದಲ್ಲಿ ಗಾಂಧಿ ಭಾರತ ಸಮಾವೇಶ ಹಿನ್ನೆಲೆ ಜಿಲ್ಲಾ ಮುಖಂಡರ ಜೊತೆಗೆ ರಣದೀಪ್ ಸಿಂಗ್ ಸುರ್ಜೇವಾಲ ಪೂರ್ವಭಾವಿ ಸಭೆ ಮಾಡಿದ್ದಾರೆ. ಸಭೆಯಲ್ಲಿ ಗದ್ದಲ ಉಂಟಾಗಿದೆ. ಸಮಾವೇಶದ ಕುರಿತು ಈಗಾಗಲೇ ಸಭೆ ಮಾಡಿದ್ದೇವೆ ಎಂದು ಸುರ್ಜೇವಾಲ ಹೇಳಿದ್ದು, ಆದರೆ ಯಾವುದೇ ಸಭೆ ಮಾಡಿಲ್ಲ ಎಂದು ನೇರವಾಗಿ ಕಾಂಗ್ರೆಸ್ ಕಾರ್ಯಕರ್ತರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗಾಂಧಿ ಭಾರತ ಪೂರ್ವಭಾವಿ ಸಭೆಯಲ್ಲಿ ಸುರೇಶ್ ಮತ್ತು ಸತೀಶ್ ಅಕ್ಕಪಕ್ಕ ಕೂರುವಂತೆ ಮಾಡಿದ ಸುರ್ಜೆವಾಲಾ
ಬಳಿಕ ಕಾಂಗ್ರೆಸ್ ಕಚೇರಿ ನಿರ್ಮಾಣದ ಕುರಿತು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಕಚೇರಿಯನ್ನ ಈಗ ನೋಡಿಕೊಳ್ಳುತ್ತಿದ್ದಾರೆ ಎಂದರು. ವೇಳೆ ಸತೀಶ್ ಜಾರಕಿಹೊಳಿ ಅವರನ್ನ ಖುಷಿ ಪಡಿಸಲು ಮಾತನಾಡುತ್ತಿದ್ದೀರಿ ಎಂದು ಸುರ್ಜೇವಾಲ ಹೇಳಿದ್ದಾರೆ. ಆಗ ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಆಕ್ರೋಶ ಹೊರಹಾಕಿದ್ದಾರೆ.
ಸತೀಶ್ ಜಾರಕಿಹೊಳಿ ನಮ್ಮ ಹೆಮ್ಮೆ, ಅವರ ಸಲುವಾಗಿ ನಾವು ಜೀವ ಕೊಡುತ್ತೇವೆ. ಇಷ್ಟೆಲ್ಲಾ ಜನರು ಅವರ ಸಲುವಾಗಿ ಬಂದಿದ್ದಾರೆ ಎಂದು ನೇರವಾಗಿ ಸುರ್ಜೇವಾಲಗೆ ಟಾಂಗ್ ಕೊಟ್ಟರು. ಈ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ಮೂಕ ಪ್ರೇಕ್ಷಕರಾದರು. ಇದೇ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ವೇದಿಕೆ ಮೇಲೆಯೇ ಇದ್ದರು.
ಇದನ್ನೂ ಓದಿ: ಬೆಳಗಾವಿ: ಸತೀಶ್ ಜಾರಕಿಹೊಳಿಗೆ ನೋಟಿಸ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸುರ್ಜೇವಾಲ ಸ್ಪಷ್ಟನೆ
ಬಳಿಕ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಯಾರಿಗೆ ಏನು ಅವಶ್ಯಕತೆ ಇದೆ. ವಾಹನ ವ್ಯವಸ್ಥೆ ಸೇರಿ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಎಲ್ಲರನ್ನೂ ಸುರ್ಜೇವಾಲ ಸುಮ್ಮನಾಗಿಸಿದರು. ಇಷ್ಟೆಲ್ಲಾ ನಡೆಯುತ್ತಿದ್ದರು ಸತೀಶ್ ಜಾರಕಿಹೊಳಿ ಮಾತ್ರ ಸುಮ್ಮನೆ ಕುಳಿತಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:14 pm, Fri, 17 January 25