ರಾಷ್ಟ್ರಪಕ್ಷಿ ನವಿಲುಗಳನ್ನು ಕೊಂದು ಮಾರಾಟ ಮಾಡ್ತಿದ್ದ ಆರೋಪಿ ಅರೆಸ್ಟ್, ಹೇಗಿತ್ತು ಪೊಲೀಸರ ಕಾರ್ಯಾಚರಣೆ? ಇಲ್ಲಿದೆ ಓದಿ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸದ್ದಿಲ್ಲದೇ ರಾಷ್ಟ್ರ ಪಕ್ಷಿ ನವಿಲುಗಳನ್ನ ಬೇಟೆಯಾಡುವ ಗ್ಯಾಂಗ್ ಹುಟ್ಟುಕೊಂಡಿದೆ. ನವಿಲಿನ ಮಾಂಸಕ್ಕಾಗಿ ರಾಷ್ಟ್ರ ಪಕ್ಷಿಗೆ ವಿಷ ಉಣಿಸುವ ಕೆಲಸಕ್ಕೆ ಪಾಪಿಗಳು ಮುಂದಾಗಿದ್ದ ಗ್ಯಾಂಗ್ನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ, ಜನವರಿ 14: ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಸದ್ದಿಲ್ಲದೇ ರಾಷ್ಟ್ರ ಪಕ್ಷಿ ನವಿಲುಗಳನ್ನ (Peacock) ಬೇಟೆಯಾಡುವ ಗ್ಯಾಂಗ್ ಹುಟ್ಟುಕೊಂಡಿದೆ. ನವಿಲಿನ ಮಾಂಸಕ್ಕಾಗಿ ರಾಷ್ಟ್ರ ಪಕ್ಷಿಗೆ ವಿಷ ಉಣಿಸುವ ಕೆಲಸಕ್ಕೆ ಪಾಪಿಗಳು ಮುಂದಾಗಿದ್ದ ಗ್ಯಾಂಗ್ನ್ನು ಬಂಧಿಸುವಲ್ಲಿ ಪೊಲೀಸರು (Police) ಯಶಸ್ವಿಯಾಗಿದ್ದಾರೆ. ರೈತರ ಜಮೀನಿಗೆ ಕಾಳು ತಿನ್ನಲು ಬರುತ್ತಿದ್ದ ನವಿಲುಗಳು ಮೃತಪಟ್ಟಿದ್ದನ್ನು ಕಂಡು ಗ್ರಾಮಸ್ಥರು, ಅರಣ್ಯ ಇಲಾಖೆ ಬೆಚ್ಚಿ ಬಿದ್ದಿತ್ತು. ಅಷ್ಟಕ್ಕೂ ಯಾವುದದೂ ಗ್ಯಾಂಗ್, ಅದ್ಯಾವ ರೀತಿ ನವಿಲುಗಳ ಬೇಟೆ ಆಡುತ್ತಿದ್ದರು ಅಂತೀರಾ ಈ ಸ್ಟೋರಿ ಓದಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ರೈತರು ತಮ್ಮ ಜಮೀನಿಗೆ ಹೋಗಿದ್ದರು. ಜಮೀನಿನಲ್ಲಿ ಅಲ್ಲೊಂದು ಇಲ್ಲೊಂದು ನವಿಲುಗಳು ಸತ್ತು ಬಿದ್ದಿರುವುದನ್ನ ಕಂಡು ಶಾಕ್ ಆಗಿದ್ದರು. ಕೂಡಲೇ ಅರಣ್ಯ ಇಲಾಖೆ ಮತ್ತು ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೃತ ನವಿಲುಗಳನ್ನ ತಮ್ಮ ವಶಕ್ಕೆ ತೆಗೆದುಕೊಂಡರು. ಇತ್ತ ಸ್ಥಳ ಪರಿಶೀಲನೆ ಮಾಡಿ ಅಲ್ಲಿ ಬಿದ್ದಿದ್ದ ಕಾಳುಗಳನ್ನ ಕೂಡ ಜಪ್ತಿ ಮಾಡಿದರು. ತಕ್ಷಣ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಮೃತ ನವಿಲುಗಳನ್ನ ಬೆಳಗಾವಿ ವೆಟನರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ಸ್ಥಳದಲ್ಲಿ ಸಿಕ್ಕ ಸಾಕ್ಷಿಗಳ ಆಧಾರದ ಮೇಲೆ ಮತ್ತು ರೈತರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳ ಪತ್ತೆಗೆ ಎರಡು ಟೀಮ್ ಮಾಡಿಕೊಂಡು ಶೋಧ ಕಾರ್ಯಕ್ಕೆ ಮುಂದಾದರು.
ಇನ್ನೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಝಳಕಿ ನಿವಾಸಿ ಮಂಜುನಾಥ ಪವಾರ್ ಬಂಧಿತ ಆರೋಪಿ. ಇನ್ನೂ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು ಅವರ ಬಂಧನಕ್ಕೆ ಎರಡು ತಂಡಗಳನ್ನು ಮಾಡಿ ಹುಡುಕಾಟ ನಡೆಸಿದ್ದಾರೆ.
ಇನ್ನು ಸಿಕ್ಕ ಆರೋಪಿ ಮಂಜುನಾಥ್ ಮಾಂಜರಿ ಗ್ರಾಮದ ಹೊರ ವಲಯದಲ್ಲಿ ಇಟ್ಟಿಗೆ ಬಟ್ಟೆಯಲ್ಲಿ ಕೆಲಸ ಮಾಡುತ್ತಿದ್ದನು. ಮಾಂಸಕ್ಕಾಗಿ ಇವರೆಲ್ಲಾ ಮೆಕ್ಕೆಜೋಳದ ಕಾಳುಗಳಲ್ಲಿ ವಿಷ ಹಾಕಿ ನವಿಲುಗಳನ್ನ ಕೊಲ್ಲುತ್ತಿದ್ದರು. ಹೀಗೆ ಕೊಂದ ಬಳಿಕ ನವಿಲುಗಳನ್ನ ತೆಗೆದುಕೊಂಡು ಹೋಗಿ ಅದರ ಮಾಂಸವನ್ನ ತೆಗೆದು ಮಾರುತ್ತಿದ್ದರು. ಸದ್ಯ ಮಂಜುನಾಥನನ್ನು ಬಂಧಿಸಿ ವಿಚಾರಣೆ ನಡೆಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಕಬ್ಬಿನ ಗದ್ದೆಯಲ್ಲಿ ಎಂಟು ನವಿಲುಗಳು ಮೃತ ದೇಹ ಪತ್ತೆ
ಪ್ರಕರಣ ಸಂಬಂಧ ರಾಯಬಾಗ ಎಸಿಎಫ್ ಸುನೀತಾ ನಿಂಬರಗಿ ಮಾತನಾಡಿ, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಮೂರು ಹೆಣ್ಣು, ಐದು ಗಂಡು ನವಿಲು ಮೃತದೇಹ ಪತ್ತೆಯಾಗಿದ್ದವು. ತಕ್ಷಣ ಮೃತ ನವಿಲುಗಳನ್ನ ತಂದು ಮರಣೋತ್ತರ ಪರೀಕ್ಷೆ ಮಾಡಿಸಿದ್ದೇವೆ. ಝಳಕಿ ಗ್ರಾಮದ ನಿವಾಸಿ ಮಂಜುನಾಥ ಪವಾರ್ ಎಂಬಾತನನ್ನು ಬಂಧಿಸಿದ್ದೇವೆ. ಇನ್ನೂ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರಿಗಾಗಿ ಶೋಧಕಾರ್ಯ ನಡೆಸಿದ್ದೇವೆ. ಎರಡು ತಂಡ ರಚನೆ ಮಾಡಿದ್ದು ಎಸ್ಕೇಪ್ ಆಗಿದ್ದವರನ್ನ ಬಂಧಿಸಲಾಗುವುದು. ನವಿಲು ಮಾಂಸಕ್ಕಾಗಿ ವಿಷ ಹಾಕಿ ಕೊಂದಿದ್ದಾರೆ. ಮೆಕ್ಕೆಜೋಳದ ಕಾಳುಗಳಲ್ಲಿ ವಿಷ ಹಾಕಿ ಕೊಂದಿದ್ದಾರೆ ಅಂತಾ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ತನಿಖೆ ಬಳಿಕ ಇನ್ನಷ್ಟು ಮಾಹಿತಿ ತಿಳಿಯಲಿದೆ ಎಂದರು.
ಒಟ್ಟಾರೆಯಾಗಿ ರಾಷ್ಟ್ರ ಪಕ್ಷಿಗಳನ್ನೇ ಕೊಂದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸದ್ಯ ಈ ಗ್ಯಾಂಗ್ನ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ತಪ್ಪಿಸಿಕೊಂಡು ಹೋದ ಇಬ್ಬರಿಗಾಗಿ ಶೋಧ ಕಾರ್ಯ ಕೂಡ ಮುಂದುವರೆದಿದೆ. ಅದೇನೆ ಇರಲಿ ರಕ್ಷಣೆ ಮಾಡಿ ಉಳಿಸಿಕೊಂಡು ಹೋಗಬೇಕಿದ್ದ ನವಿಲುಗಳನ್ನೇ ಕೊಲ್ಲುತ್ತಿದ್ದ ಇಂತಹ ದುಷ್ಟರಿಗೆ ಕಠಿಣ ಶಿಕ್ಷೆ ಕೊಡಿಸುವ ಕೆಲಸ ಇಲಾಖೆ ಮಾಡಲಿ. ಈ ರೀತಿ ಘಟನೆಗಳು ಆಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಲಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:18 am, Sun, 14 January 24