ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ: ಒಳಗೂ-ಹೊರಗೂ ಬೊಮ್ಮಾಯಿ ಸರ್ಕಾರಕ್ಕೆ ಪ್ರತಿಭಟನೆ ಕಾವು, ಏನದು? ವಿವರ ಇಲ್ಲಿದೆ
3 ವರ್ಷಗಳ ಬಳಿಕ ಇಂದಿನಿಂದ ಸುವರ್ಣಸೌಧದಲ್ಲಿ ಅಧಿವೇಶನ ಆರಂಭವಾಗುತ್ತಿದ್ದು ಅಧಿವೇಶನದಲ್ಲಿ ಭಾಗಿಯಾಗಲು 2 ಡೋಸ್ ಕೊವಿಡ್ ಲಸಿಕೆ, ಕೊವಿಡ್ ನೆಗೆಟಿವ್ ವರದಿಯನ್ನು ಸರ್ಕಾರ ಕಡ್ಡಾಯ ಮಾಡಿದೆ.
ಬೆಳಗಾವಿ: ಇಂದಿನಿಂದ 10 ದಿನ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ಸದನದಲ್ಲಿ ಮಾತಿನ ಸಮರವೇ ನಡೆಯೋದ್ರಲ್ಲಿ ಎರಡು ಮಾತಿಲ್ಲ. ಇದ್ರ ಮಧ್ಯೆ ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಶಾಕ್ ಕೊಡಲು ವಿವಿಧ ಸಂಘಟನೆಗಳು ಸಜ್ಜಾಗಿವೆ. ಇಂದು 75ಸಂಘಟನೆಗಳು ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಧರಣಿ ನಡೆಸಲು ಮುಂದಾಗಿದ್ದು, ಇವತ್ತು 4 ಕಡೆಗಳಲ್ಲಿ ಮಾತ್ರ ಪ್ರತಿಭಟನೆ ನಡೆಯಲಿದೆ.
3 ವರ್ಷಗಳ ಬಳಿಕ ಇಂದಿನಿಂದ ಸುವರ್ಣಸೌಧದಲ್ಲಿ ಅಧಿವೇಶನ ಆರಂಭವಾಗುತ್ತಿದ್ದು ಅಧಿವೇಶನದಲ್ಲಿ ಭಾಗಿಯಾಗಲು 2 ಡೋಸ್ ಕೊವಿಡ್ ಲಸಿಕೆ, ಕೊವಿಡ್ ನೆಗೆಟಿವ್ ವರದಿಯನ್ನು ಸರ್ಕಾರ ಕಡ್ಡಾಯ ಮಾಡಿದೆ. ಈಗಾಗಲೇ ಅಧಿವೇಶನದಲ್ಲಿ ಭಾಗಿಯಾಗಲು ನಾಯಕರು, ಸ್ಪೀಕರ್ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರು, ಶಾಸಕರು, ಅಧಿಕಾರಿಗಳ ದಂಡು ಬೆಳಗಾವಿಗೆ ಆಗಮಿಸಿದೆ. ಬೆಳಗ್ಗೆ 9 ಗಂಟೆಗೆ ಸಿಎಂ ಬೊಮ್ಮಾಯಿ ಬೆಳಗಾವಿಗೆ ಆಗಮಿಸಲಿದ್ದಾರೆ.
ಕೊವಿಡ್ ಹಿನ್ನೆಲೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದೇವೆ ಇನ್ನು ಇಂದು ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ ಎಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸ್ಪೀಕರ್ ಕಾಗೇರಿ ಸಿದ್ಧತೆಗಳ ಬಗ್ಗೆ ವಿವರಿಸಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಸದನ ಸಲಹಾ ಸಮಿತಿ ಸಭೆ ನಿಗದಿಯಾಗಿದೆ. ಉ-ಕ ಬಗ್ಗೆ 2 ದಿನ ಚರ್ಚೆ ನಡೆಸಬೇಕೆಂದು ಸಲಹೆ ಬಂದಿದೆ. ಈ ಬಗ್ಗೆ ಸದನ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡ್ತೀವಿ. ಯಾವ ಬಿಲ್ ಮಂಡಿಸುತ್ತೇವೆಂದು ಸರ್ಕಾರ ಮಾಹಿತಿ ನೀಡಿಲ್ಲ. ಕೊವಿಡ್ ಹಿನ್ನೆಲೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದೇವೆ. ಕಲಾಪ ಚೆನ್ನಾಗಿ ನಡೆಯಬೇಕು, ಎಲ್ಲಾ ಶಾಸಕರು ಭಾಗಿಯಾಗಿ ನಿಯಮದಂತೆ ಚರ್ಚೆಗೆ ಎಲ್ಲರಿಗೂ ಅವಕಾಶ ಮಾಡಿಕೊಡುವೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತೆಂದು ಗೈರು ಸರಿಯಲ್ಲ. ಕಲಾಪದಲ್ಲಿ ಎಲ್ಲ ಶಾಸಕರು ಪಾಲ್ಗೊಳ್ಳಿ ಎಂದು ಸ್ಪೀಕರ್ ಮನವಿ ಮಾಡಿಕೊಂಡಿದ್ದಾರೆ.
11 ಗಂಟೆಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ರೈತರ ಪ್ಲ್ಯಾನ್ ಬೆಳಗ್ಗೆ 11 ಗಂಟೆಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ರೈತ ಸಂಘಟನೆಗಳು ಸಜ್ಜಾಗಿವೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಹಿರೇಬಾಗೇವಾಡಿ ಟೋಲ್ ಗೇಟ್ನಿಂದ ಪಾದಯಾತ್ರೆ ಮೂಲಕ ಬಂದು ರೈತರು ಮುತ್ತಿಗೆ ಹಾಕಲು ಪ್ಲ್ಯಾನ್ ಮಾಡಿದ್ದಾರೆ. ಈ ವೇಳೆ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ಆದೇಶ ವಾಪಸ್ ಪಡೆಯುವಂತೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಿದ್ದಾರೆ.
ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಪ್ರತಿಭಟನೆ ಮತ್ತೊಂದ್ಕಡೆ, ಸುವರ್ಣ ಗಾರ್ಡನ್ನಲ್ಲಿ ಕೆಲವು ರೈತ ಸಂಘಟನೆಗಳು ಹೋರಾಟಕ್ಕಿಳಿಯಲಿವೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಧರಣಿ ಮಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಪ್ರತಿವರ್ಷ ಅಧಿವೇಶನ ನಡೆಯುವ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನ ತೆಗೆದುಕೊಂಡು ಬರ್ತಾರೆ ಸಮಸ್ಯೆ ಬಗೆ ಹರಿಸುತ್ತೇವೆ ಅಂತಾ ಹೇಳಿದ್ದಾರೆ.
ಶಾಸಕಿ ಅಂಜಲಿ ನಿಂಬಾಳ್ಕರ್ ಪಾದಯಾತ್ರೆ ಬೆಳಗಾವಿ ಜಿಲ್ಲೆ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ ಹೊರಟಿದ್ದಾರೆ. ನಿನ್ನೆ ಮಧ್ಯಾಹ್ನ ಖಾನಾಪುರದಿಂದ ಪಾದಯಾತ್ರೆ ಹೊರಟಿರುವ ನಿಂಬಾಳ್ಕರ್, ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮ ತಲುಪಿದ್ರು. ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಮ್ಮೊಟ್ಟಿಗೆ ಬಂದ ಕ್ಷೇತ್ರದ ಜನರಿಗೆ ಊಟ ಬಡಿಸಿ ಅಲ್ಲೇ ವಾಸ್ತವ್ಯ ಹೂಡಿದ್ರು. ಬೆಳಗ್ಗೆ 5.30ಕ್ಕೆ ಸುವರ್ಣ ಗಾರ್ಡನ್ನತ್ತ ಮತ್ತೆ ಕಾಲ್ನಡಿಗೆ ಆರಂಭಿಸಿದ್ರು. ಇನ್ನು, ಶಾಸಕಿಯಾಗಿ ಆಯ್ಕೆಯಾದ ಬಳಿಕ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಆಗ್ತಿಲ್ಲ. ಇದ್ರಿಂದ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ ಆಗ್ತಿದೆ. 2 ಬಾರಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ರಸ್ತೆ ಮತ್ತು ಸೇತುವೆಗಳು ದುರಸ್ತಿ ಆಗ್ಬೇಕು. ಆರೋಗ್ಯ ಇಲಾಖೆ ಸಮಸ್ಯೆ.. ಹೀಗೆ ಸಾಕಷ್ಟು ಬೇಡಿಕೆ ಇಟ್ಕೊಂಡು ಪಾದಯಾತ್ರೆ ಕೈಗೊಂಡಿದ್ದಾರೆ. ಈ ಪಾದಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸಾಥ್ ನೀಡೋದಾಗಿ ಹೇಳಿದ್ದಾರೆ.
ಅಧಿವೇಶನ ಖಂಡಿಸಿ ಎಂಇಎಸ್ ಮಹಾಮೇಳ ಮತ್ತೊಂದ್ಕಡೆ, ಅಧಿವೇಶನ ಖಂಡಿಸಿ ಎಂಇಎಸ್ ಮಹಾಮೇಳ ಮಾಡಲು ತಯಾರಾಗಿದೆ. ಆದ್ರೆ, ಮಹಾಮೇಳಕ್ಕೆ ಯಾವುದೇ ಅನುಮತಿ ಸಿಕ್ಕಿಲ್ಲ. ಪರ್ಮಿಷನ್ ಇಲ್ಲದೆ ಮಹಾಮೇಳ ಮಾಡಲು ಹೊರಟ ಪುಂಡರಿಗೆ ಲಾಠಿ ರುಚಿ ತೋರಿಸಲು ಖಾಕಿ ಸಜ್ಜಾಗಿದೆ. ರೈತರ ಹೋರಾಟದ ಸ್ಥಳ ಸೇರಿ ಎಲ್ಲ ಕಡೆಗೂ ಪೊಲೀಸ್ರು ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲು ಖಾಕಿ ಪಡೆ ಸನ್ನದ್ಧವಾಗಿದೆ.
ಇದನ್ನೂ ಓದಿ: ಚಳಿಗಾಲ ಅಧಿವೇಶನಕ್ಕೆ ಸಜ್ಜಾದ ಬೆಳಗಾವಿ; ಸಿದ್ಧತೆಗಳು ಹೀಗಿವೆ
Published On - 7:21 am, Mon, 13 December 21