ಬೆಳಗಾವಿ: ಯೋಧನ ಅಂತ್ಯಕ್ರಿಯೆಗೆ ಸರ್ಕಾರಿ ಜಾಗ ಕೇಳಿದ್ದಕ್ಕೆ ಗ್ರಾಮಸ್ಥರ ಮೇಲೆ ಲಾಠಿ ಬೀಸಿದ ಪೊಲೀಸರು
ಬೈಲಹೊಂಗಲ ತಾಲೂಕಿನ ಮುರಗೋಡದಲ್ಲಿ ಕರ್ತವ್ಯದಲ್ಲಿ ಗಾಯಗೊಂಡು ಮೃತಪಟ್ಟ ಯೋಧ ವಿಷ್ಣು ಕಾರಜೋಳ ಅವರ ಅಂತ್ಯಕ್ರಿಯೆಗೆ ಸರ್ಕಾರಿ ಭೂಮಿ ನೀಡಲು ನಿರಾಕರಿಸಿದ್ದರಿಂದ ಗ್ರಾಮಸ್ಥರು ಪ್ರತಿಭಟಿಸಿದರು. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿದರು. ತಡರಾತ್ರಿ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ಘಟನೆಯು ಸರ್ಕಾರದ ವಿರುದ್ಧ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ, ಮೇ 19: ಯೋಧನ (Soilder) ಅಂತ್ಯಕ್ರಿಯೆಗೆ ಸರ್ಕಾರಿ ಜಾಗ (Government Land) ಕೇಳಿದ ಗ್ರಾಮಸ್ಥರ ಮೇಲೆ ಪೊಲೀಸರು (Police) ಲಾಠಿ ಬೀಸಿರುವ ಘಟನೆ ಬೈಲಹೊಂಗಲ (Bailhongal) ತಾಲೂಕಿನ ಮುರಗೋಡ ಗ್ರಾಮದಲ್ಲಿ ನಡೆದಿದೆ. ವಿಷ್ಣು ಕಾರಜೋಳ (25) ಮೃತ ಯೋಧ. ಯೋಧ ವಿಷ್ಣು ಕಾರಜೋಳ ಕರ್ತವ್ಯದಲ್ಲಿದ್ದಾಗ ಬಿದ್ದು ಗಾಯಗೊಂಡಿದ್ದರು. ಮೂರು ತಿಂಗಳು ದೆಹಲಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಾಲ್ಕು ದಿನದ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಗ್ರಾಮ ಪಂಚಾಯತಿ ಜಾಗದಲ್ಲಿ ಅಂತ್ಯ ಕ್ರಿಯೆಗೆ ಗ್ರಾಮಸ್ಥರು ಅವಕಾಶ ಕೇಳಿದ್ದರು. ಗ್ರಾಮ ಪಂಚಾಯತಿ ಜಾಗ ಕೊಡಲು ಸಾಧ್ಯವಿಲ್ಲ, ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲು ಪಿಡಿಒ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪಿಡಿಒ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಬೀಸಿ ಚದುರಿಸಿದ್ದಾರೆ. ತಡರಾತ್ರಿ ಸಾರ್ವಜನಿಕ ರುದ್ರಭೂಮಿಯಲ್ಲಿ ಯೋಧನ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಇದನ್ನೂ ಓದಿ: ಕುರಾನ್ ಸುಟ್ಟಿದ್ದನ್ನು ಖಂಡಿಸಿ ಮುಸ್ಲಿಮರಿಂದ ಪ್ರತಿಭಟನೆ: ಪೊಲೀಸರ ಮೇಲೆಯೇ ಚಪ್ಪಲಿ ಎಸೆತ
ಕರ್ನಲ್ ಸುಫೀಯಾ ಮನೆ ಮೇಲೆ ದಾಳಿ ಸುಳ್ಳು ಸುದ್ದಿ
ಆಪರೇಷನ್ ಸಿಂದೂರ್ ಯಶಸ್ವಿ ಬಗ್ಗೆ ಕ್ಷಣ ಕ್ಷಣ ಮಾಹಿತಿಯನ್ನು ನೀಡುತ್ತಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರ ಬೆಳಗಾವಿಯ ಮನೆ ಮೇಲೆ ಆರ್ಎಸ್ಎಸ್ ದಾಳಿ ಮಾಡಿತ್ತು ಎಂದು ಕಿಡಿಗೇಡಿ ಅನಿಸ್ ಉದ್ದೀನ್ ಎಂಬಾತ ಇತ್ತೀಚಿಗೆ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದನು. ಆದರೆ, ಇದು ಸುಳ್ಳು ಸುದ್ದಿ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಹೇಳಿದ್ದರು.
ಸುಳ್ಳು ಸುದ್ದಿ ಟ್ವೀಟ್ ಮಾಡಿದ್ದ ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕರ್ನಲ್ ಸುಫಿಯಾ ಖುರೇಷಿ ಅವರ ಮನೆಗೆ ಭದ್ರತೆ ನೀಡಲಾಗಿತ್ತು. ಸುಳ್ಳು ಸುದ್ದಿ ಹರಡಿದ್ದ ವಿಚಾರವಾಗಿ ಎಸ್ಪಿ ಭೀಮಾಶಂಕರ್ ಗುಳೇದ್ ಮಾತನಾಡಿ, ಸುಳ್ಳು ಸುದ್ದಿ ಹರಡಿದರೆ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ರೀತಿಯ ಕ್ರಮಗಳನ್ನ ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೇಲೆ ಸೈಬರ್ ಪೊಲೀಸರು ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:57 am, Mon, 19 May 25