ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಸವದತ್ತಿಗೆ ಬಂದಿದ್ದ 145 ಮಹಾರಾಷ್ಟ್ರ ಬಸ್‌ಗಳು ವಾಪಸ್
ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಸವದತ್ತಿಗೆ ಬಂದಿದ್ದ 145 ಮಹಾರಾಷ್ಟ್ರ ಬಸ್‌ಗಳು ವಾಪಸ್ ಹೋಗಿವೆ. ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇಗುಲಕ್ಕೆ ಮಹಾರಾಷ್ಟ್ರದ ಭಕ್ತಾದಿಗಳು ಬಂದಿದ್ದರು.
ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ (Karnataka Maharashtra Border)ಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಜಾತ್ರೆಗೆಂದು ಸವದತ್ತಿಗೆ ಬಂದಿದ್ದ 145 ಮಹಾರಾಷ್ಟ್ರ ಬಸ್‌ಗಳು ವಾಪಸ್ ರಾಜ್ಯಕ್ಕೆ ಸುರಕ್ಷಿತವಾಗಿ ಹೋಗಿವೆ. ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇಗುಲ (Savadatti Renuka Yellamma Devi Temple)ಕ್ಕೆ ಮಹಾರಾಷ್ಟ್ರದಲ್ಲಿನ ಭಕ್ತರು ಆಗಮಿಸಿದ್ದರು. ಮಹಾರಾಷ್ಟ್ರದಿಂದ ಬಂದ ಬಸ್ಗಳನ್ನು ಒಂದೆಡೆ ಪಾರ್ಕ್ ಮಾಡಿ ಪೊಲೀಸ್ ಭದ್ರತೆ (Police security) ನೀಡಲಾಗಿತ್ತು. ಆ ಮೂಲಕ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ಸುರಕ್ಷಿತವಾಗಿ ಅಷ್ಟೂ ಬಸ್ಗಳನ್ನು ರಾಜ್ಯಕ್ಕೆ ವಾಪಸ್ ಕಳುಹಿಸಲಾಗಿದ್ದು, ಬೆಳಗಾವಿ ಜಿಲ್ಲಾ ಪೊಲೀಸರಿಗೆ MSRTC ಅಧಿಕಾರಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ. ಕೊಲ್ಲಾಪುರ ವಿಭಾಗದ 145 ಬಸ್‌ಗಳು ಸುರಕ್ಷಿತವಾಗಿ ವಾಪಸ್ ಆಗಿವೆ. ಭದ್ರತೆ ನೀಡಿದ ಬೆಳಗಾವಿ ಜಿಲ್ಲಾ ಪೊಲೀಸ್ (Belagavi Police) ಸಿಬ್ಬಂದಿಗೆ ಧನ್ಯವಾದ ಎಂದು ಮಹಾರಾಷ್ಟ್ರದ ಕೊಲ್ಲಾಪುರ ವಿಭಾಗದ MSRTC ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಪೊಲೀಸರ ವಿರುದ್ಧ ಕರವೇ ಶಿವರಾಮೇ ಗೌಡ ಕೆಂಡಮಂಡಲ
ಬೆಳಗಾವಿಯಲ್ಲಿ ನಡೆಯುತ್ತಿರುವ ಪುಂಡಾಟಿಗಳ ವಿರುದ್ಧ ಕರವೇ ವತಿಯಿಂದ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಯಿತು. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೊಲೀಸರ ವಿರುದ್ಧ ಕರವೇ ಶಿವರಾಮೇ ಗೌಡ ಕೆಂಡಮಂಡಲರಾದರು. ಎಂಇಎಸ್ ಪುಂಡರನ್ನ, ಮರಾಠಿ ಪುಂಡರನ್ನ ಮೊದಲು ಬಂಧಿಸಿ. ಕರ್ನಾಟಕದ ಬಸ್ಸುಗಳಿಗೆ ಬೆಂಕಿ ಹಚ್ಚಿದವರನ್ನ ಬಂಧಿಸಿ, ನಮ್ಮನ್ನ ಬಂಧಿಸಿ ಹೋರಾಟವನ್ನ ಹತ್ತಿಕ್ಕಲಾಗುತ್ತಿದೆ. ರಾಜ್ಯ ಸರ್ಕಾರ ಕನ್ನಡಪರ ಹೋರಾಟವನ್ನ ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಸಂಸತ್ತಿನಲ್ಲಿ ಬಿಸಿಬಿಸಿ ಚರ್ಚೆ
ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಕರವೇ ಪ್ರತಿಭಟನೆ ನಡೆಸುತ್ತಿದ್ದು ಪ್ರತಿಭಟನೆ ಆರಂಭಕ್ಕೂ ಮುನ್ನವೇ ರಾಜ್ಯ ಸರ್ಕಾರ ಹತ್ತಿಕ್ಕುತ್ತಿದೆ. ಹೋರಾಟಕ್ಕೂ ಮೊದಲೇ ನಮ್ಮನ್ನ ಬಂಧಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ವೇಳೆ ಹೈಡ್ರಾಮ ನಡೆದಿದ್ದು, ಬೆಳಗಾವಿ ನಮ್ಮದು ಎಂದು ಘೋಷಣೆ ಕೂಗುತ್ತಲೇ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸ್ ವಾಹನ ಹತ್ತಲು ಕರವೇ ಕಾರ್ಯಕರ್ತರು ನಿರಾಕರಿಸಿದರು ಮತ್ತು ರಸ್ತೆ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರಕ್ಕೆ ಎರಡು ದಿನದ ಡೆಡ್ ಲೈನ್ ಕೊಟ್ಟ ಕರವೇ
ಪುಂಡಾಟ ನಿಲ್ಲಿಸಲು ಮಹಾರಾಷ್ಟ್ರಕ್ಕೆ ಕರವೇ ಎರಡು ದಿನಗಳ ಗಡುವು ಕೊಟ್ಟಿದ್ದು, ಉದ್ದಟತನ ನಿಲ್ಲಿಸದಿದ್ದರೆ ಕನ್ನಡಿಗರು ಏನು ಅಂತ ತೋರಿಸುತ್ತೇವೆ ಎಂದು ಕರವೇ ಎಚ್ಚರಿಕೆ ಕೊಟ್ಟಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಮತ್ತು ಬಣದಿಂದ ಪ್ರತಿಭಟನೆ ನಡೆಯಿತು. ಈ ವೇಳೆ ಮಹಾರಾಷ್ಟ್ರ ಸರ್ಕಾರ ಹಾಗೂ MES ಪುಂಡರ ವಿರುದ್ಧ ಆಕ್ರೋಶ ಹೊರಹಾಕಿದ ಟಿ ಎ ನಾರಾಯಣಗೌಡ, ಬೆಳಗಾವಿ ರಾಜಕಾರಣಿಗಳು ರಣಹೇಡಿಗಳು. ಇದೆ ರೀತಿ ಅವರ ಪುಂಡಾಟಿಕೆ ಮುಂದುವರೆದರೆ ವಾಹನಗಳ ತಡೆಯುತ್ತೇವೆ. ಒಂದೇ ಒಂದು ಮಹಾರಾಷ್ಟ್ರ ವಾಹನವೂ ರಾಜ್ಯ ಪ್ರವೇಶಕ್ಕೆ ಬಿಡಲ್ಲ. ಇನ್ನಾದರೂ ನಮ್ಮ ರಾಜಕಾರಣಿಗಳು ಮಾತಾನಾಡಲಿ. ಓಲೈಕೆ ರಾಜಕಾರಣ ಪಕ್ಕಕ್ಕೆ ಇಟ್ಟು ಮುಂದೆ ಬನ್ನಿ. ಸಂಸದ ಉದಾಸಿ ಬಿಟ್ಟು ಬೇರೆ ಯಾರು ಮಾತನಾಡುತ್ತಿಲ್ಲ. ಮತ ಕೇಳುವ ನೈತಿಕತೆ ಇದ್ದರೆ ಕನ್ನಡಿಗರ ಪರ ದನಿ ಎತ್ತಿ. ಇಲ್ಲದಿದ್ದಲ್ಲಿ ಸಂಸದರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Thu, 8 December 22