AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹಜ ಸ್ಥಿತಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿ: ಎಂದಿನಂತೆ ಬಸ್ ಸಂಚಾರ ಆರಂಭ

ಚಿಕ್ಕೋಡಿಯಿಂದ ಪ್ರತಿದಿನ 200ಕ್ಕೂ ಹೆಚ್ಚು ಬಸ್​ಗಳು ಮಹಾರಾಷ್ಟ್ರದ ವಿವಿಧ ನಗರ, ಪಟ್ಟಣಗಳಿಗೆ ತೆರಳುತ್ತಿದ್ದವು. ಆದರೆ ಪೂರ್ಣ ಪ್ರಮಾಣದ ಸಂಚಾರಕ್ಕೆ ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ಇನ್ನೂ ಸಮ್ಮತಿಸಿಲ್ಲ.

ಸಹಜ ಸ್ಥಿತಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿ: ಎಂದಿನಂತೆ ಬಸ್ ಸಂಚಾರ ಆರಂಭ
ಬೆಳಗಾವಿ ನಿಲ್ದಾಣದಿಂದ ಮಹಾರಾಷ್ಟ್ರಕ್ಕೆ ತೆರಳಲು ಸಿದ್ಧವಾಗಿರುವ ಬಸ್​ಗಳುImage Credit source: Tv9Kannada
TV9 Web
| Edited By: |

Updated on:Dec 09, 2022 | 11:29 AM

Share

ಬೆಳಗಾವಿ: ಮಹಾರಾಷ್ಟ್ರ ಗಡಿಯಲ್ಲಿ (Karnataka Maharashtra Border) ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಎಂದಿನಂತೆ ಮತ್ತೆ ಕೆಎಸ್‌ಆರ್‌ಟಿಸಿ (KSRTC) ಬಸ್​ಗಳ ಸಂಚಾರ ಆರಂಭವಾಗಿದೆ. ಬೆಳಗಾವಿಯ ವಿವಿಧ ಭಾಗಗಳಿಂದ ಮಹಾರಾಷ್ಟ್ರಕ್ಕೆ ಶುಕ್ರವಾರ 400ಕ್ಕೂ ಹೆಚ್ಚು ಬಸ್​ಗಳು ತೆರಳಿದವು. ಇದೇ ವೇಳೆ ಮಹಾರಾಷ್ಟ್ರದಿಂದಲೂ ಬೆಳಗಾವಿಗೆ (Belagavi) ಸಾಕಷ್ಟು ಬಸ್​ಗಳು ಬಂದವು. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ನಡುವೆ ಕಳೆದ ಎರಡು ದಿನಗಳಿಂದ ಬಸ್​ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆ ಬಸ್‌ಗಳ ಓಡಾಟ ಎಂದಿನಂತೆ ಆರಂಭವಾಗಿವೆ. ಕೊಲ್ಹಾಪುರ, ಪುಣೆ, ಮುಂಬೈ, ಮಿರಜ್, ಸಾಂಗ್ಲಿ ಸೇರಿದಂತೆ ನಗರಗಳಿಗೆ ಕರ್ನಾಟಕದಿಂದ ಬಸ್​ಗಳು ತೆರಳಿದವು.

ಚಿಕ್ಕೋಡಿಯಿಂದ ಪ್ರತಿದಿನ 200ಕ್ಕೂ ಹೆಚ್ಚು ಬಸ್​ಗಳು ಮಹಾರಾಷ್ಟ್ರದ ವಿವಿಧ ನಗರ, ಪಟ್ಟಣಗಳಿಗೆ ತೆರಳುತ್ತಿದ್ದವು. ಆದರೆ ಪೂರ್ಣ ಪ್ರಮಾಣದ ಸಂಚಾರಕ್ಕೆ ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ಇನ್ನೂ ಸಮ್ಮತಿಸಿಲ್ಲ. ಹೀಗಾಗಿ ಅರ್ಧದಷ್ಟು, ಅಂದರೆ 110 ಬಸ್​ಗಳು ಮಾತ್ರ ಮಹಾರಾಷ್ಟ್ರಕ್ಕೆ ಹೊರಟವು. ಕಾಗವಾಡ ಮಾರ್ಗ ಹಾಗೂ ನಿಪ್ಪಾಣಿ ಮಾರ್ಗವಾಗಿ ಬಸ್​ಗಳು ಸಂಚರಿಸುತ್ತಿವೆ. ಆದರೆ ಚಿಕ್ಕೋಡಿಗೆ ಮಹಾರಾಷ್ಟ್ರ ಸಾರಿಗೆ ನಿಗಮದ ಬಸ್​ಗಳು ಇನ್ನೂ ಬರುತ್ತಿಲ್ಲ. ಕರ್ನಾಟಕದ ಗಡಿಯವರೆಗೆ ಬರುತ್ತಿರುವ ಬಸ್​ಗಳು ಅಲ್ಲಿಯೇ ಪ್ರಯಾಣಿಕರನ್ನು ಇಳಿಸಿ, ಹಿಂದಿರುಗುತ್ತಿವೆ. ಬಸ್ ಸಂಚಾರ ಮತ್ತೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನೆ, ಎಂಎನ್​ಎಸ್ ಹಾಗೂ ಮರಾಠಿ ಸಂಘಟನೆಗಳು ಬಸ್​ಗಳ ಮೇಲೆ ಕಲ್ಲುತೂರಾಟ, ಮಸಿ ಬಳಿಯುವುದು ಸೇರಿದಂತೆ ಹಲವು ರೀತಿಯಲ್ಲಿ ತೊಂದರೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ಕರ್ನಾಟಕದ ಬಸ್​ಗಳ ಮಹಾರಾಷ್ಟ್ರ ಸಂಚಾರ ಸ್ಥಗಿತಗೊಂಡಿತ್ತು.

ಮಹಾರಾಷ್ಟ್ರ ಸಂಸದರಿಂದ ಅಮಿತ್​ ಶಾ ಭೇಟಿ

ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವೆ ಗಡಿ ವಿವಾದ ಶಮನಗೊಳ್ಳದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಇಂದು (ಡಿ 9) ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಗಡಿ ವಿವಾದದ ಬಗ್ಗೆ ಸಂಸದರು ಅಮಿತ್ ಶಾ ಅವರಿಗೆ ವಿವರಿಸಿ, ಮಹಾರಾಷ್ಟ್ರದ ನಿಲುವು ಬೆಂಬಲಿಸುವಂತೆ ಕೋರಲಿದ್ದಾರೆ.

ಬಸ್ ನಿಲ್ದಾಣ ಪ್ರವೇಶಿಸದ ಬಸ್​ಗಳು

ಗಡಿಯಲ್ಲಿ ಶಾಂತ ಸ್ಥಿತಿ ನೆಲೆಗೊಂಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಕರ್ನಾಟಕ ಸಾರಿಗೆ ನಿಗಮದ ಬಸ್​ಗಳು ತೆರಳುತ್ತಿವೆಯಾದರೂ ಬಸ್​ ನಿಲ್ದಾಣಗಳಿಗೆ ಪ್ರವೇಶಿಸುತ್ತಿಲ್ಲ. ಶಿವಸೇನೆಯವರು ಗಲಾಟೆ ಮಾಡಬಹುದು ಎಂಬ ಭೀತಿಯಿಂದ ನಿಗಮದ ಅಧಿಕಾರಿಗಳು ರಸ್ತೆ ಬದಿಯಲ್ಲಿಯೇ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಬೆಳಗಾವಿ-ಚಿಕ್ಕೋಡಿ ವಿಭಾಗಕ್ಕೆ ₹ 70 ಲಕ್ಷದಷ್ಟು ನಷ್ಟವಾಗಿದೆ.

ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಸಂಸತ್ತಿನಲ್ಲಿ ಬಿಸಿಬಿಸಿ ಚರ್ಚೆ

ಇನ್ನಷ್ಟು ಬೆಳಗಾವಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:15 am, Fri, 9 December 22