
ಬೆಳಗಾವಿ, ಜೂನ್ 05: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆಲ್ಲುವ ಮುಖಾಂತರ ಚಿಕ್ಕ ವಯಸ್ಸಿನಲ್ಲೇ ಸಂಸತ್ತು ಪ್ರವೇಶಿಸಿದ್ದಾರೆ. ಪ್ರಿಯಂಕಾ ಜಾರಕಿಹೊಳಿ ತಮ್ಮದೇ ಆದ ಶೈಲಿಯ ಮೂಲಕ ರಾಜಕಾರಣದ ಪಟ್ಟುಗಳನ್ನು ಕಲಿತುಕೊಂಡು ಅಖಾಡಕ್ಕೆ ಇಳಿದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಭಾರತದಲ್ಲಿ ಅತಿ ಕಿರಿಯ ಸಂಸದೆ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರು ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದೆ.
ಪ್ರಿಯಂಕಾ ಜಾರಕಿಹೊಳಿ ಅವರು ಚುನಾವಣೆಯಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಕೇವಲ 27ನೇ ವಯಸ್ಸಿನಲ್ಲಿ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಸೋಲಿಸಿ ಭಾರತದ ಅತಿ ಕಿರಿಯ ಸಂಸದೆಯರಲ್ಲಿ ಒಬ್ಬರಾಗಿದ್ದಾರೆ.
ನೂತನ ಸಂಸದೆಯಾಗಿರುವ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಈಗ 27 ವರ್ಷ. ಅವರು ಹುಟ್ಟಿದ್ದು 1997ರ ಏಪ್ರಿಲ್ 16ರಂದು. ಪ್ರಿಯಂಕಾ ಜಾರಕಿಹೊಳಿ ಅವರು ಎಂಬಿಎ ಪದವಿದರೆ. ಎಂಬಿಎ ವಿದ್ಯಾಭ್ಯಾಸದ ಮೂಲಕ ಅವರು ವ್ಯವಹಾರ ಚತುರತೆಯನ್ನೂ ಬೆಳೆಸಿಕೊಂಡಿದ್ದಾರೆ. ಸತೀಶ ಶುಗರ್ ಲಿಮಿಟೆಡ್, ಬೆಳಗಮ್ ಶುಗರ್ ಪ್ರೈವೇಟ್ ಲಿಮಿಟೆಡ್, ಗಾಡಿಗಾಂವ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್, ವೆಸ್ಟರ್ನ್ ಗ್ರಾಟ್ಸ್ ಇನ್ಫ್ರಾ ಲಿಮಿಟೆಡ್, ನೇಚರ್ ನೆಸ್ಟ್ ಹಾರ್ಟಿಕಲ್ಚರ್, ಆಂಡ್ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಸೇರಿ 14 ಸಂಘ ಸಂಸ್ಥೆಗಳ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ನೂತನ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ. ಪ್ರಿಯಂಕಾ ಜಾರಕಿಹೊಳಿ ಎನ್‌ಜಿಒಗಳನ್ನು ನಡೆಸುತ್ತಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಮತ ಪಡೆಯುವ ಮೂಲಕ ಜೊಲ್ಲೆ ಅವರನ್ನು ಕಣದಿಂದ ಹೊರಗಟ್ಟಿ ಸಾಧನೆ ಮಾಡುವ ಮೂಲಕ ದೇಶದಲ್ಲೇ ಅತಿ ಚಿಕ್ಕ ವಯಸ್ಸಿನ ಸಂಸದೆ ಎಂಬ ದಾಖಲೆಯನ್ನ ತಮ್ಮದಾಗಿಸಿಕೊಂಡು ಉತ್ತರ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ. ಇವರ ಈ ಸಾಧನೆಗೆ ಹಿರಿಯರಿಂದ ಹಿಡಿದು ಕಿರಿಯರವರೆಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Wed, 5 June 24