
ಬೆಳಗಾವಿ, ಜುಲೈ 09: ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕರ್ನಾಟಕದ ಜನರು ಅದರಲ್ಲೂ ವಿಶೇಷವಾಗಿ ರೈತರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ರಾಜ್ಯದ ನೀರಾವರಿ ಯೋಜನೆಗಳ ಕುರಿತಾಗಿ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ. ಕೃಷ್ಣಾ, ಕಾವೇರಿ, ಗೋದಾವರಿ ಜೋಡಣೆಯನ್ನು 1 ಲಕ್ಷ ಕೋಟಿ ವೆಚ್ಚದಲ್ಲಿ ಮಾಡಲು ಮುಂದಾಗಿದ್ದೇವೆ. ಕೇಂದ್ರಕ್ಕೆ ಈ ಪ್ರಾಜೆಕ್ಟ್ ಮಾಡಲು ಕೇಳಿದ್ದೇವೆ ಎಂದು ಬೆಳಗಾವಿ ಸುವರ್ಣಸೌಧದಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಇನ್ನು ಮಹದಾಯಿ ಯೋಜನೆ ಜಾರಿಗೂ ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧ 5 ಬಾರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನ ಭೇಟಿಯಾಗಿದ್ದೇನೆ. ಕೇಂದ್ರ ಪರಿಸರ ಇಲಾಖೆ ಸಚಿವರ ಜೊತೆಗೂ ಮಾತುಕತೆ ನಡೆಸಿದ್ದು, ಅವರು ಇನ್ನೂ ತಲೆ ಅಲ್ಲಾಡಿಸುತ್ತಿದ್ದಾರೆ. ಆದರೂ ಯೋಜನೆ ಜಾರಿಗೆ ಪ್ರಯತ್ನಿಸಲಾಗುತ್ತಿದೆ. ಮಹಾರಾಷ್ಟ್ರ, ಗೋವಾ ಸಿಎಂ ಜೊತೆಗೆ ಈ ಸಂಬಂಧ ಚರ್ಚಿಸುತ್ತೇನೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಮತ್ತೊಂದು ಸಾಹಸಕ್ಕೆ ಕೈಹಾಕಿದ ಸರ್ಕಾರ; ಬಿಡದಿ ರೀತಿಯಲ್ಲೇ ಮತ್ತೊಂದು ಟೌನ್ಶಿಪ್, ಎಲ್ಲಿ?
ಬಹಳ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ತುಂಗಭದ್ರಾದಲ್ಲಿ ಭೀಕರವಾದ ಸಮಸ್ಯೆ ನೋಡ್ತಿದ್ದೇವೆ. ಸರ್ಕಾರದ ಮೊದಲ ಕರ್ತವ್ಯ ರೈತರನ್ನ ಬದುಕಿಸೋದು. 50 ವರ್ಷ ತುಂಬಿದ ಎಲ್ಲ ಡ್ಯಾಂಗಳ ಗೇಟ್ ಬದಲಾವಣೆ ಜೊತೆಗೆ ತುಂಗಭದ್ರಾ ಡ್ಯಾಂನಲ್ಲಿ ಹೂಳು ತೆಗೆಸಲಾಗುತ್ತದೆ. 3 ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟಿಗೆ ಸಭೆ ನಡೆಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಬಹಳ ಜನ ಶಾಸಕರು ಮೋಡ ಬಿತ್ತನೆ ಬಗ್ಗೆ ಸಲಹೆ ನೀಡಿದ್ದಾರೆ. ಅದರ ಬಗ್ಗೆಯೂ ಒಂದು ರಿಪೋರ್ಟ್ ಪಡೆದುಕೊಂಡು ಪರಿಶೀಲಿಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
ನೀರಿನ ಸಮಸ್ಯೆ ಬಹಳ ಇರುವ ಕಾರಣ ಸುವರ್ಣಸೌಧದಲ್ಲಿ ಹೊಸ ತೀರ್ಮಾನ ಕೈಗೊಂಡಿದ್ದು, ಗ್ರಾಮೀಣ ಕ್ಷೇತ್ರದ ಎಲ್ಲ ಶಾಸಕರಿಗೆ 1 ಕೋಟಿ ಅನುದಾನ ನೀಡುತ್ತೇವೆ. ಕುಡಿಯುವ ನೀರಿಗೆ ಕೊರತೆ ಆಗಬಾರದೆಂದು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರಿಗೆ ಡ್ಯಾಂ, ಕೆರೆಗಳಲ್ಲಿ ನೀರು ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:34 pm, Thu, 9 July 26