ಮತ್ತೊಂದು ಸಾಹಸಕ್ಕೆ ಕೈಹಾಕಿದ ಸರ್ಕಾರ: ಬಿಡದಿ ರೀತಿಯಲ್ಲೇ ಮತ್ತೊಂದು ಟೌನ್‌ಶಿಪ್, ಎಲ್ಲಿ?
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಜಿಎಫ್‌ನಲ್ಲಿ ಸಮಗ್ರ ಟೌನ್‌ಶಿಪ್ ಯೋಜನೆಗೆ ರಾಜ್ಯ ಸರ್ಕಾರ ಇದೀಗ ಮರುಜೀವ ನೀಡಲು ಮುಂದಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ಯೋಜನೆಗೆ ಸಲಹೆಗಾರರ ನೇಮಕಕ್ಕೆ ಟೆಂಡರ್ ಆಹ್ವಾನಿಸಲಾಗಿದೆ. ಆ ಮೂಲಕ ವಾಣಿಜ್ಯ ಹಾಗೂ ಕೈಗಾರಿಕಾ ಹೂಡಿಕೆದಾರರನ್ನು ಆಕರ್ಷಿಸಲು ಮುಂದಾಗಿದೆ.

ಮುಖ್ಯಾಂಶಗಳು
- ಕೆಜಿಎಫ್ ಸಮಗ್ರ ಟೌನ್‌ಶಿಪ್ ಮರುಜೀವಕ್ಕೆ ಮುಂದಾದ ಸರ್ಕಾರ
- ಸಲಹೆಗಾರರ ನೇಮಕಕ್ಕೆ ಟೆಂಡರ್ ಆಹ್ವಾನ
- ವಾಣಿಜ್ಯ ಮತ್ತು ಕೈಗಾರಿಕಾ ಹೂಡಿಕೆದಾರರನ್ನು ಸೆಳೆಯುವ ಉದ್ದೇಶ
ಬೆಂಗಳೂರು, ಜುಲೈ 08: ಬಿಡದಿ ಟೌನ್‌ಶಿಪ್ ಯೋಜನೆಗೆ (Bidadi Township Project) ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಸಮಗ್ರ ಟೌನ್‌ಶಿಪ್ ನಿರ್ಮಾಣ ಯೋಜನೆಗೆ (KGF township project) ಇದೀಗ ಮರುಜೀವ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ವರದಿ ಹಾಗೂ ಮಾರ್ಗಸೂಚಿ ಸಿದ್ಧಪಡಿಸಲು ಅರ್ಹ ಸಲಹೆಗಾರರ ನೇಮಕಕ್ಕೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಟೆಂಡರ್ ಆಹ್ವಾನಿಸಿದೆ.
ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಸಮಗ್ರ ಟೌನ್‌ಶಿಪ್ ನಿರ್ಮಾಣ ಯೋಜನೆ
ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಈ ಬೃಹತ್ ಯೋಜನೆಗೆ ಮರುಜೀವ ಕಲ್ಪಿಸಲು ಇದೀಗ ಸರ್ಕಾರ ಮುಂದಾಗಿದೆ. ಆಯ್ಕೆಗೊಳ್ಳುವ ಸಲಹೆಗಾರರು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಸಮಗ್ರ ಟೌನ್‌ಶಿಪ್ ನಿರ್ಮಾಣ ಯೋಜನೆಯ ಆರ್ಥಿಕತೆ ಸೇರಿದಂತೆ ತಾಂತ್ರಿಕ ಕಾರ್ಯಗಳ ವರದಿಯನ್ನು ಸಿದ್ಧಪಡಿಸುವುದು, ಮಾರುಕಟ್ಟೆಯ ಬೇಡಿಕೆಯನ್ನು ಪರಿಶೀಲಿಸುವುದು, ಭೂಮಿಯ ಮೌಲ್ಯ ಹಾಗೂ ಸೂಕ್ತವಾದ ಪಿಪಿಪಿ ಮಾದರಿಯನ್ನು ಸರ್ಕಾರಕ್ಕೆ ಶಿಫಾರಸು ಮಾಡಲಿದ್ದಾರೆ.
ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ವಿರೋಧಿಸಿ ಅಪ್ಪಿಕೋ ಚಳವಳಿ: ರಾಜ್ಯವ್ಯಾಪಿ ಜನಾಂದೋಲನಕ್ಕೆ ಹೆಚ್ಡಿ ಕುಮಾರಸ್ವಾಮಿ ತಂತ್ರ
ಇನ್ನು ದೇಶ-ವಿದೇಶಗಳಲ್ಲಿನ ಯಶಸ್ವಿ ಟೌನ್‌ಶಿಪ್ ಯೋಜನೆಗಳ ಅಧ್ಯಯನ ಮಾಡಿ, ರಾಜ್ಯದಲ್ಲಿ ಹಂತ-ಹಂತವಾಗಿ ಯೋಜನೆಯನ್ನು ಹೇಗೆ ಜಾರಿಗೊಳಿಸಬೇಕು ಮತ್ತು ಅದರಿಂದ ಸರ್ಕಾರಕ್ಕೆ ಹೇಗೆ ಆದಾಯವಾಗಲಿದೆ ಎಂಬ ಕುರಿತಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಿದ್ದಾರೆ.
ಯೋಜನೆಯ ಹಿನ್ನೆಲೆ
ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಕೆಜಿಎಫ್, ಒಂದು ಕಾಲದಲ್ಲಿ ಭಾರತದ ಅತಿ ದೊಡ್ಡ ಚಿನ್ನದ ಗಣಿ ಕೇಂದ್ರವಾಗಿತ್ತು. 2001ರಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಬಂದ್ ಆಗುವುದಕ್ಕೂ ಮುನ್ನ ಸುಮಾರು 800 ಟನ್ ಚಿನ್ನವನ್ನು ಉತ್ಪಾದಿಸಲಾಗುತ್ತಿತ್ತು. ಆದರೆ, ಆ ನಂತರ ಈ ಭಾಗದಲ್ಲಿ ಯಾವುದೇ ಪ್ರಮುಖ ಕೈಗಾರಿಕಾ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಹೀಗಾಗಿ ಸ್ಥಳೀಯರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸುವ ಅನಿವಾರ್ಯ ಉಂಟಾಗಿತ್ತು.
960 ಎಕರೆ ಭೂಮಿ
ಈ ನಿಟ್ಟಿನಲ್ಲಿ ಕಳೆದ ವರ್ಷ ಅಂದರೆ 2025ರ ಮಾರ್ಚ್‌ನಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಬಿಜಿಎಂಎಲ್‌ಗೆ ಸೇರಿದ ಜಾಗದಲ್ಲಿ ಟೌನ್‌ಶಿಪ್ ನಿರ್ಮಿಸುವುದಾಗಿ ಹೇಳಿದ್ದರು. ಅದರಂತೆ ಯೋಜನೆಯ ಮೊದಲ ಹಂತವಾಗಿ ಸುಮಾರು 300 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸದ್ಯ ಬಿಜಿಎಂಎಲ್ ಒಡೆತನದ ಸುಮಾರು 960 ಎಕರೆ ಭೂಮಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದೆ.
ಇದನ್ನೂ ಓದಿ: ಟೌನ್‌ಶಿಪ್ ವಿವಾದ: ಕುಮಾರಸ್ವಾಮಿ ಹಣ ಕೊಟ್ಟ ಹೊರಗಿನವರನ್ನ ಕರೆಸಿದ್ರಾ? ಭುಗಿಲೆದ್ದ ಆಕ್ರೋಶ
ಇನ್ನು ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಚೆನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಬಳಸಿಕೊಂಡು, ಈ ಹೊಸ ಟೌನ್‌ಶಿಪ್ ಮೂಲಕ ಕೆಜಿಎಫ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಹೂಡಿಕೆದಾರರನ್ನು ಸೆಳೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




