AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಸ್​ಆರ್​ಟಿಸಿ ಸೇರಿ ನಾಲ್ಕೂ ನಿಗಮಗಳ ಬಸ್ ಟಿಕೆಟ್ ದರ ಏರಿಕೆ ಬಹುತೇಕ ಫಿಕ್ಸ್: ಸಿಎಂ ಗ್ರೀನ್ ಸಿಗ್ನಲ್ ಒಂದೇ ಬಾಕಿ

KSRTC, BMTC Bus Ticket Price Hike: ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟದ ನಡುವೆ ಸರ್ಕಾರಿ ಬಸ್‌ಗಳ ಟಿಕೆಟ್ ದರ ಏರಿಕೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ದರ ಪರಿಷ್ಕರಣೆ ಕುರಿತು ಸರ್ಕಾರ ಈಗಾಗಲೇ ಸಮಿತಿ ರಚಿಸಿದ್ದು, ಸಮಿತಿ ವರದಿ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಕೆಎಸ್​ಆರ್​ಟಿಸಿ ಸೇರಿ ನಾಲ್ಕೂ ನಿಗಮಗಳ ಬಸ್ ಟಿಕೆಟ್ ದರ ಏರಿಕೆ ಬಹುತೇಕ ಫಿಕ್ಸ್: ಸಿಎಂ ಗ್ರೀನ್ ಸಿಗ್ನಲ್ ಒಂದೇ ಬಾಕಿ
ಸಾಂದರ್ಭಿಕ ಚಿತ್ರImage Credit source: tv9
ಕಿರಣ್​ ಸೂರ್ಯ
| Edited By: |

Updated on: Aug 18, 2026 | 7:37 AM

Share

ಮುಖ್ಯಾಂಶಗಳು

  • ನಾಲ್ಕು ನಿಗಮಗಳಿಂದ ದರ ಏರಿಕೆಗೆ ಮನವಿ
  • ಟಿಕೆಟ್ ದರ ನಿಗದಿಗೆ ತಜ್ಞರ ಸಮಿತಿ
  • ಸಮಿತಿ ವರದಿ ಬಳಿಕ ಅಂತಿಮ ನಿರ್ಧಾರ

ಬೆಂಗಳೂರು, ಆಗಸ್ಟ್ 18: ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಏರಿಕೆ (Bus Ticket Price Hike) ಮಾಡುವ ಕುರಿತು ಚರ್ಚೆ ತೀವ್ರಗೊಂಡಿದೆ. ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಕಾರಣ ಡೀಸೆಲ್ ದರ ಏರಿಕೆಯಾಗಿದ್ದು, ಇದರಿಂದ ನಾಲ್ಕು ಸಾರಿಗೆ ನಿಗಮಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ ಎಂದು ನಿಗಮಗಳ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೆಎಸ್‌ಆರ್‌ಟಿಸಿ ಶೇ 33ರಷ್ಟು ಹಾಗೂ ಬಿಎಂಟಿಸಿ ಶೇ 44ರಷ್ಟು ಟಿಕೆಟ್ ದರ ಏರಿಕೆಗೆ ಮನವಿ ಮಾಡಿದೆ ಎನ್ನಲಾಗಿದೆ.

ಸಾರಿಗೆ ನಿಗಮಗಳಿಗೆ 40 ಕೋಟಿ ರೂ. ಹೆಚ್ಚುವರಿ ಹೊರೆ

ಡೀಸೆಲ್ ದರ ಏರಿಕೆಯಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, NWKRTC ಮತ್ತು KKRTC ನಿಗಮಗಳಿಗೆ ತಿಂಗಳಿಗೆ ಸುಮಾರು 40 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ವಾರ್ಷಿಕವಾಗಿ ಸುಮಾರು 480 ಕೋಟಿ ರೂ. ನಷ್ಟವಾಗುವ ಸಾಧ್ಯತೆಯಿದೆ.

ಆರು ಬಾರಿ ಡೀಸೆಲ್ ದರ ಏರಿಕೆ: ಸಚಿವ

ದರ ಏರಿಕೆ ಕುರಿತು ಮಾತನಾಡಿರುವ ಸಾರಿಗೆ ಸಚಿವ ಭೈರತಿ ಸುರೇಶ್, ಈಗಾಗಲೇ ಆರು ಬಾರಿ ಡೀಸೆಲ್ ದರ ಹೆಚ್ಚಳವಾಗಿದೆ. ಹೀಗಾಗಿ ಟಿಕೆಟ್ ದರ ಪರಿಷ್ಕರಣೆ ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ. ಡೀಸೆಲ್ ದರ ಏರಿಕೆಯಿಂದ ವಾರಕ್ಕೆ 7ರಿಂದ 8 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಟಿಕೆಟ್ ದರ ನಿಗದಿ ಮಾಡುವ ಸಂಬಂಧ ರಾಜ್ಯ ಸರ್ಕಾರ ಸಮಿತಿ ರಚಿಸಿದ್ದು, ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಮಿತಿ ಈಗಾಗಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ ದರ ಏರಿಕೆ ಕುರಿತು ಶಿಫಾರಸು ಮಾಡುವಂತೆ ಸಮಿತಿಗೆ ಸೂಚಿಸಲಾಗಿದೆ. ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ಅಧ್ಯಕ್ಷರಾಗಿದ್ದು, ದ್ವಾರಕನಾಥ್ ಬಾಬು, ನಿವೃತ್ತ ಸರ್ಕಾರಿ ಕಾರ್ಯದರ್ಶಿ ಡಾ. ಅಬ್ದುಲ್ ಪಿಂಜರಿ ಹಾಗೂ ಐಐಎಸ್‌ಸಿ ಪ್ರತಿನಿಧಿ ಸದಸ್ಯರಾಗಿದ್ದಾರೆ.

ಸಮಿತಿ ತನ್ನ ವರದಿ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಗಮನಕ್ಕೆ ತಂದು ಟಿಕೆಟ್ ದರ ಏರಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಪ್ರಯಾಣಿಕರಿಂದ ದರ ಏರಿಕೆಗೆ ವಿರೋಧ

ಇನ್ನೊಂದೆಡೆ, ಟಿಕೆಟ್ ದರ ಏರಿಕೆ ಕುರಿತು ಪ್ರಯಾಣಿಕರಿಂದ ಅಸಮಾಧಾನ ವ್ಯಕ್ತವಾಗಿದೆ. ಕಳೆದ ವರ್ಷವಷ್ಟೇ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಮತ್ತೆ ದರ ಹೆಚ್ಚಿಸುವುದು ಸರಿಯಲ್ಲ ಎಂದು ಪ್ರಯಾಣಿಕರು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ: ಶೇ 25 ರ ಹೆಚ್ಚಳಕ್ಕೆ ಸಿಎಂಗೆ ಮನವಿ

ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ, ಡೀಸೆಲ್ ದರ ಏರಿಕೆಯ ಪರಿಣಾಮ ಹಾಗೂ ಪ್ರಯಾಣಿಕರ ಮೇಲಿನ ಹೊರೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸಮಿತಿ ವರದಿ ನೀಡಲಿದೆ. ವರದಿ ಬಳಿಕ ಮುಖ್ಯಮಂತ್ರಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us