AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರದಲ್ಲೇ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ: ಶೇ 25 ರ ಹೆಚ್ಚಳಕ್ಕೆ ಸಿಎಂಗೆ ಮನವಿ

ಡೀಸೆಲ್ ದರ ಹೆಚ್ಚಾಗಿದ್ದು, ಇದರ ನೇರ ಹೊರೆ ಕರ್ನಾಟಕದ ಸಾರಿಗೆ ಸಂಸ್ಥೆಗಳ ಮೇಲೆ ಬಿದ್ದಿದೆ. ಆರ್ಥಿಕ ನಷ್ಟದಿಂದ ತತ್ತರಿಸುತ್ತಿರುವ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳು ಬಸ್ ಟಿಕೆಟ್ ದರವನ್ನು ಕನಿಷ್ಠ ಶೇಕಡಾ 25 ರಷ್ಟು ಹೆಚ್ಚಿಸಲು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿವೆ. ಆದರೆ, ದರ ಏರಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಶೀಘ್ರದಲ್ಲೇ ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ: ಶೇ 25 ರ ಹೆಚ್ಚಳಕ್ಕೆ ಸಿಎಂಗೆ ಮನವಿ
ಕೆಎಸ್ಆರ್‌ಟಿಸಿ ಬಸ್ (ಸಾಂದರ್ಭಿಕ ಚಿತ್ರ)Image Credit source: tv9
ಕಿರಣ್​ ಸೂರ್ಯ
| Edited By: |

Updated on: Jun 22, 2026 | 8:02 AM

Share

ಬೆಂಗಳೂರು, ಜೂನ್ 22: ಕಳೆದ ವರ್ಷವಷ್ಟೇ ಜನವರಿಯಲ್ಲಿ ಶೇಕಡಾ 15 ರಷ್ಟು ಬಸ್ ಟಿಕೆಟ್ ದರವನ್ನು ಹೆಚ್ಚಿಸಿದ್ದ ರಾಜ್ಯದ ಸಾರಿಗೆ ನಿಗಮಗಳು, ಇದೀಗ ಮತ್ತೆ ದರ ಏರಿಕೆಗೆ ಸಿದ್ಧತೆ ನಡೆಸಿವೆ. ಜಾಗತಿಕ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ ಸರಿಸುಮಾರು 8 ರೂಪಾಯಿಯಷ್ಟು ದುಬಾರಿಯಾಗಿದೆ. ಇದರಿಂದಾಗಿ ಕೆಎಸ್ಆರ್‌ಟಿಸಿ (KSRTC), ಬಿಎಂಟಿಸಿ (BMTC), ಈಶಾನ್ಯ (NWKRTC) ಮತ್ತು ಕಲ್ಯಾಣ ಕರ್ನಾಟಕ (KKRTC) ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಟಿಕೆಟ್ ದರ ಏರಿಕೆಗೆ (Bus Ticket Price Hike) ಗ್ರೀನ್ ಸಿಗ್ನಲ್ ನೀಡುವಂತೆ ಮುಖ್ಯಮಂತ್ರಿಗಳ ಬಳಿ ನಾಲ್ಕೂ ನಿಗಮಗಳು ಅಧಿಕೃತವಾಗಿ ಮನವಿ ಮಾಡಿವೆ.

ಮುಖ್ಯಾಂಶಗಳು

  • ಡೀಸೆಲ್ ದರ ಏರಿಕೆಯಿಂದ ಟಿಕೆಟ್ ದರ ಹೆಚ್ಚಳ ಅನಿವಾರ್ಯ.
  • ಕಳೆದ ವರ್ಷವಷ್ಟೇ ದರ ಏರಿಸಿದ್ದು, ಮತ್ತೆ ಹೆಚ್ಚಿಸುವುದು ಸರಿಯಲ್ಲ ಎಂದ ಪ್ರಯಾಣಿಕರು.
  • ನಾಲ್ಕು ಸಾರಿಗೆ ನಿಗಮಗಳಿಗೆ ವಾರ್ಷಿಕ 480 ಕೋಟಿ ರೂ. ನಷ್ಟದ ಭೀತಿ.

ಕೋಟಿ ಕೋಟಿ ನಷ್ಟದ ಭೀತಿಯಲ್ಲಿ ನಾಲ್ಕು ನಿಗಮಗಳು

ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳಿಗೆ ಬರೋಬ್ಬರಿ 40 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದೆ. ಇದೇ ರೀತಿ ಮುಂದುವರಿದರೆ ವಾರ್ಷಿಕವಾಗಿ ನಿಗಮಗಳ ನಷ್ಟದ ಪ್ರಮಾಣ 480 ಕೋಟಿ ರೂಪಾಯಿ ದಾಟುವ ಆತಂಕ ಎದುರಾಗಿದೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕನಿಷ್ಠ ಶೇ 25 ರಷ್ಟು ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯ, ಇಲ್ಲದಿದ್ದರೆ ನಿಗಮಗಳನ್ನು ನಡೆಸುವುದು ಕಷ್ಟ ಎಂದು ಸಾರಿಗೆ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿಯಲ್ಲಿ ವಿವರಿಸಿದ್ದಾರೆ.

ಸಾರಿಗೆ ನೌಕರರ ವೇತನ ಬಾಕಿ, ಶಕ್ತಿ ಯೋಜನೆಯ ಹೊರೆ

ನಿಗಮಗಳಿಗೆ ಕೇವಲ ಡೀಸೆಲ್ ದರ ಮಾತ್ರವಲ್ಲದೆ ಇತರೆ ಆರ್ಥಿಕ ಹೊರೆಗಳೂ ಬೆನ್ನುಬಿದ್ದಿವೆ. ಬರುವ ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇಕಡಾ 12.5 ರಷ್ಟು ಹೊಸ ವೇತನವನ್ನು ನೀಡಬೇಕಾಗಿದೆ. ಇದರೊಂದಿಗೆ ನೌಕರರಿಗೆ ನೀಡಬೇಕಿರುವ ಒಟ್ಟು 1,271 ಕೋಟಿ ರೂಪಾಯಿಗಳ ವೇತನ ಹಿಂಬಾಕಿ (Arrears) ಹಣದಲ್ಲಿ ಸದ್ಯ 450 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ 821 ಕೋಟಿ ರೂಪಾಯಿಗಳನ್ನು ನೀಡಬೇಕಿದೆ. ಇವೆಲ್ಲದರ ಜೊತೆಗೆ, ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ (ಮಹಿಳೆಯರ ಉಚಿತ ಪ್ರಯಾಣ) ಸಂಬಂಧಿಸಿದಂತೆ ಸರ್ಕಾರದಿಂದ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ಸುಮಾರು 5,000 ಕೋಟಿ ರೂಪಾಯಿಗಳ ಅನುದಾನವೂ ಬಾಕಿ ಉಳಿದಿದೆ. ಈ ಎಲ್ಲಾ ಆರ್ಥಿಕ ಸವಾಲುಗಳನ್ನು ಎದುರಿಸಲು ಟಿಕೆಟ್ ದರ ಏರಿಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಪ್ರಯಾಣಿಕರ ತೀವ್ರ ಅಸಮಾಧಾನ

ಸರ್ಕಾರದ ಈ ದರ ಏರಿಕೆಯ ಆಲೋಚನೆಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷವಷ್ಟೇ ದರ ಏರಿಕೆ ಮಾಡಿದ್ದೀರಿ, ಈಗ ಮತ್ತೆ ಬೆಲೆ ಏರಿಕೆ ಮಾಡುವುದು ಸರಿಯಲ್ಲ ಎಂದು ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವು ಪ್ರಯಾಣಿಕರು, ಟಿಕೆಟ್ ದರವನ್ನು ಸಂಪೂರ್ಣವಾಗಿ ಹೆಚ್ಚಿಸುವ ಬದಲು, ಸದ್ಯ ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರಿಂದ ಕನಿಷ್ಠ ಅರ್ಧದಷ್ಟಾದರೂ ಟಿಕೆಟ್ ದರವನ್ನು ಪಡೆದುಕೊಳ್ಳಲಿ; ಇದರಿಂದ ನಿಗಮಗಳ ಆರ್ಥಿಕ ಹೊರೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಡೀಸೆಲ್ ದರ ನೋಡಿದ್ರೆ ಗಾಬರಿಯಾಗುತ್ತೆ ಎಂದ ಡಿಕೆಶಿ: ಬಸ್ ಪ್ರಯಾಣ ದರ ಏರಿಕೆಗೆ ಚಿಂತನೆ

ಸದ್ಯ ನಿಗಮಗಳ ಆರ್ಥಿಕ ಹೊರೆ ತಪ್ಪಿಸಲು ಟಿಕೆಟ್ ದರ ಏರಿಕೆ ಅನಿವಾರ್ಯ ಎನ್ನಲಾಗುತ್ತಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಗ್ರೀನ್ ಸಿಗ್ನಲ್ ನೀಡುತ್ತಾರಾ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us