ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಇಲ್ಲ ಕರೆಂಟ್, ನೆಟ್‌ವರ್ಕ್: ಬೆಳಗಾವಿಯ ಗವಳಿವಾಡ ಗ್ರಾಮಸ್ಥರ ನರಕಯಾತನೆ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗವಳಿವಾಡ ಗ್ರಾಮವು ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ವಿದ್ಯುತ್, ರಸ್ತೆ, ಮೊಬೈಲ್ ನೆಟ್‌ವರ್ಕ್‌ನಂತಹ ಮೂಲಭೂತ ಸೌಕರ್ಯಗಳಿಲ್ಲದೆ ಕತ್ತಲಲ್ಲಿ ಮುಳುಗಿದೆ. 175 ಜನರು ದೈನಂದಿನ ಕಷ್ಟಗಳನ್ನು ಎದುರಿಸುತ್ತಿದ್ದು, ಕಾಡುಪ್ರಾಣಿಗಳ ಭೀತಿಯಲ್ಲಿ ಬದುಕುತ್ತಿದ್ದಾರೆ. ವೈದ್ಯಕೀಯ ಸೇವೆಗೂ ಪರದಾಡುತ್ತಿರುವ ಗ್ರಾಮಸ್ಥರು ಆಡಳಿತದ ನಿರ್ಲಕ್ಷ್ಯಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಇಲ್ಲ ಕರೆಂಟ್, ನೆಟ್‌ವರ್ಕ್: ಬೆಳಗಾವಿಯ ಗವಳಿವಾಡ ಗ್ರಾಮಸ್ಥರ ನರಕಯಾತನೆ
ಗೌಳಿ ವಾಡಾ ಕುಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಮಕ್ಕಳು
Image Credit source: Google

Updated on: Nov 04, 2026 | 9:18 AM

ಬೆಳಗಾವಿ, ನ.4: ದೇಶದಲ್ಲಿ ಸ್ಮಾರ್ಟ್‌ಫೋನ್, ಹೈ-ಸ್ಪೀಡ್ ಇಂಟರ್ನೆಟ್ ಹಾಗೂ ಸುಸಜ್ಜಿತ ರಸ್ತೆಗಳು ದೈನಂದಿನ ಜೀವನದ ಭಾಗವಾಗಿರುವ ಡಿಜಿಟಲ್ ಯುಗದಲ್ಲೂ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ‘ಗವಳಿವಾಡ’ (Gawali Wada) ಗ್ರಾಮದ ಜನತೆ ಇನ್ನೂ ಮೂಲಭೂತ ಸೌಕರ್ಯಗಳೇ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಸುಮಾರು 8 ದಶಕಗಳು (80 ವರ್ಷಗಳು) ಕಳೆದಿದ್ದರೂ, ಖಾನಾಪುರ ತಾಲೂಕಿನ ಗೊಳ್ಯಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದಂಚಿನಲ್ಲಿರುವ ಈ ಪುಟ್ಟ ಹಳ್ಳಿಗೆ ಇದುವರೆಗೆ ವಿದ್ಯುತ್ ಸಂಪರ್ಕವೇ ತಲುಪಿಲ್ಲದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಗವಳಿವಾಡದ 20 ಕುಟುಂಬಗಳ ಸುಮಾರು 175 ಜನರು ದೈನಂದಿನ ಅಗತ್ಯಗಳಿಗಾಗಿ ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ವಿದ್ಯುತ್, ಮೊಬೈಲ್ ನೆಟ್‌ವರ್ಕ್, ಟಿವಿ ಸಂಪರ್ಕ ಅಥವಾ ಸಂಚಾರಕ್ಕೆ ಸೂಕ್ತ ರಸ್ತೆಯೂ ಇಲ್ಲ. ದಟ್ಟ ಅರಣ್ಯದ ನಡುವೆ ಇರುವ ಈ ಹಳ್ಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಗಾಢ ಕತ್ತಲು ಆವರಿಸುತ್ತದೆ. ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಂಚರಿಸಲು ತೀವ್ರ ತೊಂದರೆ ಎದುರಿಸುತ್ತಿದ್ದು, ಕಾಡುಪ್ರಾಣಿಗಳು ಗ್ರಾಮಕ್ಕೆ ನುಗ್ಗುವ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ರಸ್ತೆ ಮತ್ತು ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದರಿಂದ ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಕೈಕೊಟ್ಟರೆ ಅಥವಾ ತುರ್ತು ವೈದ್ಯಕೀಯ ನೆರವು ಬೇಕಾದಾಗ ಆಸ್ಪತ್ರೆಗೆ ತಲುಪಿಸುವುದು ಸವಾಲಿನ ಕೆಲಸವಾಗಿದೆ. ಪ್ರತಿ ಚುನಾವಣೆಯ ವೇಳೆಯಲ್ಲೂ ಜನಪ್ರತಿನಿಧಿಗಳು ನೀಡುವ ಭರವಸೆಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!

ಗ್ರಾಮದ ನಿವಾಸಿ ಭಗು ಧಾಕ್ಲು ಧಂಗಾರ್ ಮಾತನಾಡಿ, “ನಾವು ಹಲವು ವರ್ಷಗಳಿಂದ ಎಲ್ಲಾ ಅಧಿಕಾರಿಗಳು ಹಾಗೂ ನಾಯಕರಿಗೆ ಮನವಿ ಸಲ್ಲಿಸಿದ್ದರೂ ಯಾರೊಬ್ಬರೂ ಸ್ಪಂದಿಸಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಗ್ರಾಮಸ್ಥರ ನಿಯೋಗವು ಖಾನಾಪುರ ತಹಶೀಲ್ದಾರ್ ಹಾಗೂ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಮನವಿ ಪತ್ರ ಸಲ್ಲಿಸಿದ್ದು, ತಕ್ಷಣವೇ ವಿದ್ಯುತ್ ಹಾಗೂ ರಸ್ತೆ ಸೌಕರ್ಯ ಒದಗಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:17 am, Wed, 4 November 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us