AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣು ಭ್ರೂಣ ಹತ್ಯೆ ತಡೆಗೆ ಬೆಳಗಾವಿಯ ಕಮತನೂರು ಪಂಚಾಯಿತಿ ಕ್ರಾಂತಿಕಾರಿ ಹೆಜ್ಜೆ: ‘ಮನೆ ಮಹಾಲಕ್ಷ್ಮಿ’ ಯೋಜನೆ ಜಾರಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕಮತನೂರು ಗ್ರಾಮ ಪಂಚಾಯಿತಿ "ಮನೆ ಮಹಾಲಕ್ಷ್ಮಿ" ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಆಗಸ್ಟ್ 15ರಿಂದ ಆರಂಭವಾಗಿರುವ ಈ ಯೋಜನೆಯಡಿಯಲ್ಲಿ ಪ್ರತಿ ಹೆಣ್ಣು ಮಗುವಿನ ಜನನಕ್ಕೆ ₹5,000 ನೀಡಲಾಗುತ್ತದೆ. ಹೆಣ್ಣು ಭ್ರೂಣ ಹತ್ಯೆ ತಡೆಯುವುದು, ಶಿಕ್ಷಣ ಪ್ರೋತ್ಸಾಹಿಸುವುದು ಮತ್ತು ಹೆಣ್ಣು ಮಕ್ಕಳ ಪೋಷಣೆಗೆ ಇದು ಸಹಕಾರಿಯಾಗಿದೆ. ಗ್ರಾಮ ಪಂಚಾಯಿತಿ ತೆರಿಗೆ ಹಣದಿಂದ ಈ ಯೋಜನೆಗೆ ಧನಸಹಾಯ ಮಾಡಲಾಗುತ್ತಿದೆ.

ಹೆಣ್ಣು ಭ್ರೂಣ ಹತ್ಯೆ ತಡೆಗೆ ಬೆಳಗಾವಿಯ ಕಮತನೂರು ಪಂಚಾಯಿತಿ ಕ್ರಾಂತಿಕಾರಿ ಹೆಜ್ಜೆ: 'ಮನೆ ಮಹಾಲಕ್ಷ್ಮಿ' ಯೋಜನೆ ಜಾರಿ
ಮನೆ ಮಹಾಲಕ್ಷ್ಮಿ ಯೋಜನೆ
ಸಹದೇವ್​ ಮಾನೆ
| Edited By: |

Updated on: Sep 01, 2026 | 4:22 PM

Share

ಬೆಳಗಾವಿ, ಸೆ.1: ಸಮಾಜದಲ್ಲಿ ಹೆಣ್ಣು ಮನೆಯ ಮಹಾಲಕ್ಷ್ಮಿ ಎಂದು ಗೌರವಿಸಲ್ಪಟ್ಟರೂ, ಕೆಲವೆಡೆ ಹೆಣ್ಣು ಭ್ರೂಣ ಹತ್ಯೆಯಂತಹ ಅಮಾನವೀಯ ಕೃತ್ಯಗಳು ನಡೆಯುವುದು ದುರದೃಷ್ಟಕರ. ಇಂತಹ ಸನ್ನಿವೇಶದಲ್ಲಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕಮತನೂರು ಗ್ರಾಮ ಪಂಚಾಯಿತಿ, ಹೆಣ್ಣು ಮಗುವಿನ ಅಸ್ತಿತ್ವವನ್ನು ಗೌರವಿಸುವ ಮತ್ತು ಆಕೆಯ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ “ಮನೆ ಮಹಾಲಕ್ಷ್ಮಿ” ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದೇ ಈ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿದೆ.

ಈ ಯೋಜನೆಯ ಮುಖ್ಯ ಉದ್ದೇಶಗಳೆಂದರೆ ಮೊದಲನೆಯದಾಗಿ, ಹೆಣ್ಣು ಭ್ರೂಣ ಹತ್ಯೆಯ ದುಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವುದು. ಎರಡನೆಯದಾಗಿ, ಜನಿಸಿದ ಹೆಣ್ಣು ಮಕ್ಕಳನ್ನು ಪೋಷಿಸಿ, ರಕ್ಷಿಸಿ, ಅವರಿಗೆ ಉತ್ತಮ ಶಿಕ್ಷಣ ಒದಗಿಸುವುದು. “ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ” ಎಂಬ ಗಾದೆಯ ಮಾತಿನಂತೆ, ಗ್ರಾಮದ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ಈ ಯೋಜನೆಯ ಮಹತ್ವಾಕಾಂಕ್ಷೆಯಾಗಿದೆ.

ಮನೆ ಮಹಾಲಕ್ಷ್ಮಿ ಯೋಜನೆಯಡಿ, ಗ್ರಾಮದಲ್ಲಿ ಜನಿಸುವ ಪ್ರತಿ ಹೆಣ್ಣು ಮಗುವಿಗೆ, ವಿಶೇಷವಾಗಿ ಮೊದಲ ಹೆಣ್ಣು ಮಗುವಿಗೆ, 5,000 ರೂಪಾಯಿಗಳ ಆರ್ಥಿಕ ನೆರವನ್ನು ಚೆಕ್ ರೂಪದಲ್ಲಿ ನೀಡಲಾಗುತ್ತದೆ. ಈ ಹಣವು ಮಗುವಿನ ಆರೈಕೆಗೆ, ಅದರ ಪೋಷಣೆಗೆ ಮತ್ತು ಮುಂದಿನ ದಿನಗಳಲ್ಲಿ ಶಿಕ್ಷಣವನ್ನು ಒದಗಿಸಲು ಒಂದು ಆಧಾರವಾಗಲಿ ಎಂಬುದು ಪಂಚಾಯಿತಿಯ ಧ್ಯೇಯ. ಬಡತನದಿಂದಾಗಿ ಹೆಣ್ಣು ಮಕ್ಕಳ ಭವಿಷ್ಯ ಮಸುಕಾಗಬಾರದು ಎಂಬುದು ಈ ಯೋಜನೆಯ ಹಿಂದಿನ ಪ್ರಮುಖ ಕಾಳಜಿ.

ಇಲ್ಲಿದೆ ನೋಡಿ ವಿಡಿಯೋ:

ಈ ಯೋಜನೆಗೆ ಧನಸಹಾಯ ಮಾಡುವ ವಿಧಾನವು ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ, ಗ್ರಾಮ ಪಂಚಾಯಿತಿಗಳು ತೆರಿಗೆ ರೂಪದಲ್ಲಿ ಸಂಗ್ರಹಿಸುವ ಹಣವನ್ನು ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ದೀಪಗಳಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಆದರೆ, ಕಮತನೂರು ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಸಿಬ್ಬಂದಿ ಒಟ್ಟಾಗಿ ಒಂದು ಹೊಸ ಹೆಜ್ಜೆಯನ್ನಿಟ್ಟಿದ್ದಾರೆ. ಮೂಲಭೂತ ಸೌಕರ್ಯಗಳಿಗಾಗಿ ಬರುವ ತೆರಿಗೆ ಹಣದಲ್ಲಿ ಒಂದು ಭಾಗವನ್ನು ಉಳಿತಾಯ ಮಾಡಿ, ಅದನ್ನು ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಮೀಸಲಿಡಲು ನಿರ್ಧರಿಸಿದ್ದಾರೆ. ದೇಶದಲ್ಲೇ ಅಥವಾ ರಾಜ್ಯದಲ್ಲೇ ಇಂತಹ ವಿನೂತನ ಕ್ರಮವನ್ನು ಅಳವಡಿಸಿಕೊಂಡ ಮೊದಲ ಗ್ರಾಮ ಪಂಚಾಯಿತಿ ಇದಾಗಿದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಆರೋಪಿಯ ಸುಳ್ಳಿನ ನಾಟಕ ಬಯಲು: ಚಿಕನ್ ಪಾರ್ಟಿ ಕೊಲೆಯಲ್ಲಿ ಅಂತ್ಯ

ಗ್ರಾಮೀಣ ಭಾಗದಲ್ಲಿ ಹೆಣ್ಣು ಮಗು ಹುಟ್ಟಿದರೆ, ಅದನ್ನು “ಹುಣ್ಣು ಹುಟ್ಟಿದಂತೆ” ಎಂದು ಪರಿಗಣಿಸುವ ಮನಸ್ಥಿತಿ ಇನ್ನೂ ಕೆಲವೆಡೆ ಇದೆ. ಇಂತಹ ನಕಾರಾತ್ಮಕ ಚರ್ಚೆಗಳ ನಡುವೆ, ಕಮತನೂರು ಪಂಚಾಯಿತಿಯ ಈ ಯೋಜನೆ ಒಂದು ಆಶಾಕಿರಣವಾಗಿದೆ. ಇದು ಕೇವಲ ಹಣಕಾಸಿನ ನೆರವಿನ ಯೋಜನೆಯಲ್ಲ, ಬದಲಿಗೆ ಹೆಣ್ಣು ಮಕ್ಕಳ ಬಗ್ಗೆ ಸಮಾಜದಲ್ಲಿ ಧನಾತ್ಮಕ ಚಿಂತನೆ ಮೂಡಿಸುವ ಒಂದು ಸಾಮಾಜಿಕ ಕ್ರಾಂತಿಯ ಹೆಜ್ಜೆ. ಹೆಣ್ಣು ಮಕ್ಕಳ ಪಾಲನೆ-ಪೋಷಣೆ ಮತ್ತು ಉತ್ತಮ ಶಿಕ್ಷಣಕ್ಕೆ ಪೋಷಕರು ಮುಂದಾಗುವಂತೆ ಪ್ರೇರೇಪಿಸುವುದು ಇದರ ಉದ್ದೇಶ.

ಈ ಯೋಜನೆ ಇಡೀ ರಾಜ್ಯಾದ್ಯಂತ ವ್ಯಾಪಿಸಿದರೆ, ಹೆಣ್ಣು ಮಕ್ಕಳನ್ನು ಸಾಕಿ ಸಲಹಲು ಆರ್ಥಿಕವಾಗಿ ಕಷ್ಟಪಡುತ್ತಿರುವ ಸಾವಿರಾರು ಬಡ ಕುಟುಂಬಗಳಿಗೆ ದೊಡ್ಡ ನೆರವು ಸಿಗಲಿದೆ. ಕಮತನೂರು ಗ್ರಾಮ ಪಂಚಾಯಿತಿಯ ಈ ಶ್ಲಾಘನೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜ್ಯದ ಇತರ ಎಲ್ಲಾ ಗ್ರಾಮ ಪಂಚಾಯಿತಿಗಳು ಇಂತಹ ಮಾದರಿ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಆಗ್ರಹವೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಒಟ್ಟಾರೆ, ಕಮತನೂರಿನ ಮನೆ ಮಹಾಲಕ್ಷ್ಮಿ ಯೋಜನೆಯು ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us