ರೈತರ ಆಯುಧ ಪೂಜೆ ಸಂಭ್ರಮಕ್ಕೆ ಲೋಡ್ ಶೆಡ್ಡಿಂಗ್ ಅಡ್ಡಿ: ತೋಟದ ಮನೆಗಳಿಗೂ ‘ನಿರಂತರ ಜ್ಯೋತಿ’ ಸಂಪರ್ಕಕ್ಕೆ ಆಗ್ರಹ
ಪ್ರತಿ ವರ್ಷ ಆಯುಧ ಪೂಜೆ ದಿನ ರೈತರ ಮನೆಯಲ್ಲಿ ಇರುತ್ತಿದ್ದ ಸಂಭ್ರಮಕ್ಕೆ ಈ ಬಾರಿ ಭೀಕರ ಬರಗಾಲ, ವಿದ್ಯುತ್ ಕಣ್ಣಾಮುಚ್ಚಾಲೆ ಕೊಳ್ಳೆ ಇಟ್ಟಿದೆ. ತೋಟದ ಮನೆಗಳಿಗೆ ದಿನಕ್ಕೆ 7 ಗಂಟೆಯೂ ಸಹ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಆ ಒಂದು ಯೋಜನೆಯ ಸಂಪರ್ಕ ತೋಟದ ಮನೆಗಳಿಗೂ ನೀಡುವಂತೆ ಆಗ್ರಹಿಸಿದ್ದಾರೆ.
ಚಿಕ್ಕೋಡಿ, ಅಕ್ಟೋಬರ್ 23: ರಾಜ್ಯದಲ್ಲಿ ಭೀಕರ ಬರಗಾಲದ ಮಧ್ಯೆ ವಿದ್ಯುತ್ (electricity) ಕಣ್ಣಾಮುಚ್ಚಾಲೆ ರೈತರ ನಿದ್ದೆಗೆಡಿಸಿದೆ. ಅದರಲ್ಲೂ ತೋಟದ ಪ್ರದೇಶಗಳಲ್ಲಿ ವಾಸಿಸುವ ರೈತ ಕುಟುಂಬಗಳ ಸ್ಥಿತಿ ಹೇಳತೀರದಾಗಿದೆ. ಪ್ರತಿ ವರ್ಷ ಆಯುಧ ಪೂಜೆ ದಿನ ರೈತರ ಮನೆಯಲ್ಲಿ ಇರುತ್ತಿದ್ದ ಸಂಭ್ರಮಕ್ಕೆ ಈ ಬಾರಿ ಭೀಕರ ಬರಗಾಲ, ವಿದ್ಯುತ್ ಕಣ್ಣಾಮುಚ್ಚಾಲೆ ಕೊಳ್ಳೆ ಇಟ್ಟಿದೆ. ತೋಟದ ಮನೆಗಳಿಗೆ ದಿನಕ್ಕೆ 7 ಗಂಟೆಯೂ ಸಹ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಆ ಒಂದು ಯೋಜನೆಯ ಸಂಪರ್ಕ ತೋಟದ ಮನೆಗಳಿಗೂ ನೀಡುವಂತೆ ಆಗ್ರಹಿಸಿದ್ದಾರೆ.
ಪ್ರಸಕ್ತ ವರ್ಷ ಭೀಕರ ಬರ ಹಾಗೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತ ಕುಟುಂಬಗಳ ಸ್ಥಿತಿ ಅಯೋಮಯವಾಗಿದೆ. ಅದರಲ್ಲೂ ತೋಟದ ಪ್ರದೇಶದಲ್ಲಿ ವಾಸವಿರುವ ರೈತ ಕುಟುಂಬಗಳ ಸ್ಥಿತಿ ಹೇಳತೀರದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿಯ ಹೆಸ್ಕಾಂ, ಕಲಬುರಗಿಯ ಜೆಸ್ಕಾಂ ವ್ಯಾಪ್ತಿಯಲ್ಲಿ ಸರಿಸುಮಾರು 1 ಲಕ್ಷ 30 ಸಾವಿರ ತೋಟದ ಮನೆಗಳಿವೆ. ಹೀಗಿರುವ ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೇರೂರು, ಜೋಡಕುರಳಿ, ನಂದಿಕುರಳಿ, ಇಟ್ನಾಳ್, ಬೆಳಕೂಡ ಸೇರಿದಂತೆ ಹಲವು ಗ್ರಾಮಗಳ ತೋಟದ ಮನೆಗಳಿಗೆ ಸಂಜೆ 6.30 ರಿಂದ ರಾತ್ರಿ 10 ರವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯಾಗಿದೆ. ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿದೆ. ದಿನದ 24 ಗಂಟೆಗಳ ಪೈಕಿ 7 ಗಂಟೆಯೂ ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ರೈತ ಕುಟುಂಬಗಳು ಸಂಕಷ್ಟದಲ್ಲಿದ್ದಾರೆ. ಅಂದುಕೊಂಡಂತೆ ಮುಂಗಾರು ಮಳೆ ಬಂದಿದ್ದರೆ ದಸರಾ ವೇಳೆಗೆ ಸೋಯಾಬಿನ್, ಶೇಂಗಾ, ಹೆಸರು, ಮೆಕ್ಕೆಜೋಳ ರಾಶಿ ಮಾಡಿ ಅದನ್ನು ಮಾರಾಟ ಮಾಡಿ ಸಡಗರ ಸಂಭ್ರಮದಿಂದ ಆಯುಧ ಪೂಜೆ ಆಚರಿಸಬಹುದಿತ್ತು. ಆದರೆ ಈ ವರ್ಷ ಭೀಕರ ಬರಗಾಲ ಹಾಗೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತ ಕಂಗಾಲಾಗಿದ್ದು ಸಮರ್ಪಕವಾಗಿ ಮಳೆಯಾಗದೇ ಹೊಲದಲ್ಲಿ ಬೆಳೆದ ಬೆಳೆಗಳ ಇಳುವರಿಯೂ ಬಂದಿಲ್ಲ ಹಾಗೂ ಮಾರುಕಟ್ಟೆಯಲ್ಲಿ ದರವೂ ಕುಸಿತ ಕಂಡಿದ್ದರಿಂದ ಅಕ್ಷರಶಃ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಭೀಕರ ಬರ ಇದ್ದರೂ ಶಾಸಕರ ನಿರ್ಲಕ್ಷ್ಯ: ರೈತರು ಆಕ್ರೋಶ
ರೈತರ ಮನೆಗಳಲ್ಲಿ ಪ್ರತಿವರ್ಷ ಸಂಭ್ರಮದಿಂದ ನಡೆಯುತ್ತಿದ್ದ ದಸರಾಗೆ ಈ ಬಾರಿಯ ಬರಗಾಲ, ಲೋಡ್ಶೆಡ್ಡಿಂಗ್ ಕೊಳ್ಳೆ ಇಟ್ಟಿದ್ದು ಸರಳವಾಗಿ ಆಯುಧ ಪೂಜೆ ಆಚರಿಸುವ ಪರಿಸ್ಥಿತಿ ಬಂದೊದಗಿದೆ. ಈ ಕುರಿತು ಟಿವಿ9 ಜೊತೆ ಮಾತನಾಡಿದ ಕೇರೂರು ಗ್ರಾಮದ ರೈತ ಮಹಿಳೆ ಫುಲಾಬಾಯಿ, ದಸರಾ ಹೊತ್ತಿಗೆ ಹೆಸರು, ಸೋಯಾಬಿನ್, ಮೆಕ್ಕೆಜೋಳ ರಾಶಿ ಮಾಡ್ತಿದ್ವಿ. ಮೆಣಸಿನಕಾಯಿ ಸಹ ಬೆಳೆದು ಸಂಪಾದನೆ ಮಾಡ್ತಿದ್ವಿ. ಆದರೆ ಈ ಬಾರಿ ಮಳೆಯಾಗದೇ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಯಾಗದ ಹಿನ್ನೆಲೆ ಬೆಳೆ ಹಾನಿಯಾಗಿದೆ. ಕೈಯಲ್ಲಿ ದುಡ್ಡು ಇಲ್ಲ. ಹೀಗಾಗಿ ಈ ಬಾರಿ ಸರಳವಾಗಿ ಆಯುಧಪೂಜೆ ಆಚರಣೆ ಮಾಡುತ್ತಿದ್ದೇವೆ. ಸರ್ಕಾರದವರು ನಮ್ಮತ್ತ ನೋಡಿ ಸಮರ್ಪಕ ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾರೆ.
ತೋಟದ ವಸತಿ ಪ್ರದೇಶಗಳಲ್ಲಿ ರಾತ್ರಿ 10 ಗಂಟೆಯ ಮೇಲೆ ವಿದ್ಯುತ್ ಇಲ್ಲದೇ ರೈತ ಕುಟುಂಬಗಳು ಪರದಾಡುವ ಸ್ಥಿತಿ ಇದೆ. ಬಡ ರೈತ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದ್ದು ರಾತ್ರಿ 10ರ ಬಳಿಕ ಏನಾದರೂ ವಿದ್ಯಾಭ್ಯಾಸ ಮಾಡಬೇಕಂದ್ರೆ ಮೇಣದ ಬತ್ತಿಯೇ ಆಸರೆಯಾಗಿದೆ. ಕಳೆದ ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಂಗಲ್ ಫೇಸ್ ಟ್ರಾನ್ಸಫಾರ್ಮರ್ ಅಳವಡಿಸಿ ತೋಟದ ಮನೆಗಳಿಗೆ ವಿದ್ಯುತ್ ನೀಡಲು ಯೋಜನೆ ಕೈಗೊಳ್ಳಲಾಗಿತ್ತು. ಆದರೆ ಈವರೆಗೂ ಅದು ಚಿಕ್ಕೋಡಿ ಉಪವಿಭಾಗದಲ್ಲಿ ಮಾತ್ರ ಕಾರ್ಯಗತವಾಗಿಲ್ಲ.
ಭೀಕರ ಬರದಿಂದ ರೈತರು ಕಂಗಾಲಾಗಿದ್ದಾರೆ ಹೀಗಾಗಿ ರೈತರ ಪಂಪ್ಸೆಟ್ಗಳಿಗೆ ಏಳು ಗಂಟೆ ತ್ರಿಫೇಸ್ ವಿದ್ಯುತ್ ಹಾಗೂ ತೋಟದ ಪ್ರದೇಶದಲ್ಲಿರುವ ರೈತರ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ನೀಡಿ ಬೆಳಕಿನ ಭಾಗ್ಯ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ರಾಜ್ಯ ರೈತ ಸಂಘ ಹಸಿರು ಸೇನೆ ಚಿಕ್ಕೋಡಿ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ, ಉತ್ತರ ಕರ್ನಾಟಕದಲ್ಲಿ ಭೀಕರ ಬರಗಾಲ ಇದೆ. ದಸರಾ ಹೊತ್ತಿಗೆ ಸೋಯಾಬಿನ್, ಶೇಂಗಾ, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳ ರಾಶಿ ಮಾಡಿ ಮಾರಾಟ ಮಾಡಿ ರೈತರ ಕೈಯಲ್ಲಿ ಹಣ ಇರುತ್ತಿತ್ತು.
ಇದನ್ನೂ ಓದಿ: ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಸಿಎಂ ಪದೇ ಪದೇ ಗೈರು, ಮೌಡ್ಯಕ್ಕೆ ಹೆದರಿದ್ರಾ ಸಿದ್ದರಾಮಯ್ಯ?
ಈ ಬಾರಿ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ಇನ್ನೂ ತೋಟದ ಪ್ರದೇಶಗಳಲ್ಲಿ ಸಮರ್ಪಕ ಪೂರೈಕೆಯಾಗುತ್ತಿಲ್ಲ ರಾಜ್ಯ ಸರ್ಕಾರ ರೈತರ ಪಾಲಿಗೆ ಕತ್ತಲೆಯ ದಸರಾ ಹಬ್ಬ ಮಾಡಿ ಬಿಟ್ಟಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಇರುವ ಒಂದು ಲಕ್ಷ ಮೂವತ್ತು ಸಾವಿರ ತೋಟದ ಮನೆಗಳಿಗೆ ಹಳ್ಳಿಗಳಲ್ಲಿ ನೀಡುವ ನಿರಂತರ ಜ್ಯೋತಿ ವಿದ್ಯುತ್ ಲೈನ್ ಸಂಪರ್ಕ ನೀಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯದ ಜನತೆಗೆ 200 ಯೂನಿಟ್ ಫ್ರೀ ವಿದ್ಯುತ್ ಗೃಹಜ್ಯೋತಿ ಭಾಗ್ಯ ನೀಡಿರುವ ಸರ್ಕಾರ ತೋಟದ ಪ್ರದೇಶದಲ್ಲಿ ವಾಸಿಸುವ ರೈತರಿಗೆ ಕತ್ತಲೆ ಭಾಗ್ಯ ನೀಡಿದೆ. ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ತೋಟದ ವಸತಿ ಪ್ರದೇಶಗಳಿಗೆ ವಿಸ್ತರಿಸಲಾಗದಿದ್ದರೆ ಕೊನೆಯ ಪಕ್ಷ ಸಿಂಗಲ್ ಫೇಸ್ ಟ್ರಾನ್ಸಫಾರ್ಮರ್ ಅಳವಡಿಸಿ ವಿದ್ಯುತ್ ಪೂರೈಸುವಂತೆ ರೈತರು ಆಗ್ರಹಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.