ಬೆಳಗಾವಿ: ಕಬ್ಬು ಪೂರೈಸಿದ ಬಾಕಿ ಹಣ ನೀಡುವಂತೆ ಆಗ್ರಹಿಸಿ ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ಮನೆ ಎದುರು ರೈತರು ಪ್ರತಿಭಟನೆ ನಡೆಸಿದರು. ಉದಪುಡಿ ಗ್ರಾಮದ ಬಳಿಯಿರುವ ಶಿವಸಾಗರ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತರು ಪೂರೈಸಿದ್ದ ಕಬ್ಬಿಗೆ ಈವರೆಗೆ ಹಣ ನೀಡಿಲ್ಲ. ಕಾರ್ಖಾನೆ ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ ರೈತರು, ಬಾಕಿ ಹಣ ನೀಡುವವರೆಗೂ ಕಾರ್ಖಾನೆ ಮುಚ್ಚುವಂತೆ ಆಗ್ರಹಿಸಿದರು. ಸಕ್ಕರೆ ಸಚಿವರಿಂದ ಸೂಕ್ತ ಭರವಸೆ ಸಿಗುವವರೆಗೂ ಮನೆಗಳಿಗೆ ತೆರಳುವುದಿಲ್ಲ ಎಂದು ಧರಣಿ ನಿರತ ರೈತರು ಬಿಗಿಪಟ್ಟು ಹಿಡಿದರು. ರೈತರ ಮನವೊಲಿಕೆಗೆ ಶಾಸಕ ಮಹದೇವಪ್ಪ ಸತತ ಪ್ರಯತ್ನ ಮಾಡಿದರು. ಆದರೆ ಬೆಳೆಗಾರರು ಪ್ರತಿಭಟನೆ ನಿಲ್ಲಿಸಲಿಲ್ಲ. ಸಕ್ಕರೆ ಸಚಿವರಿಂದ ಭರವಸೆ ಸಿಗುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಗೋಲ್‌ಮಾಲ್ ಆರೋಪ
ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಗೋಲ್‌ಮಾಲ್ ನಡೆದಿದೆ. ಕಾರ್ಖಾನೆಯು ಸಕ್ಕರೆ ದಾಸ್ತಾನು ಬಗ್ಗೆ ತಪ್ಪು ಮಾಹಿತಿ ನೀಡಿದೆ. ಕಾರ್ಖಾನೆಯಲ್ಲಿ 273 ಕ್ವಿಂಟಲ್ ಸಕ್ಕರೆ ದಾಸ್ತಾನು ಇದೆಯೆಂದು ಸೆ.30ರಂದು ಸರ್ಕಾರಕ್ಕೆ ಆಡಳಿತ ಮಂಡಳಿ ವರದಿ ಸಲ್ಲಿಸಿತ್ತು. ಆದರೆ ಕಾರ್ಖಾನೆಯಲ್ಲಿ 25 ಸಾವಿರ ಕ್ವಿಂಟಲ್‌ಗೂ ಹೆಚ್ಚು ಸಕ್ಕರೆ ದಾಸ್ತಾನು ಇದ್ದ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ರೈತರ ಆರೋಪದ ಬೆನ್ನಲ್ಲೇ ಕಾರ್ಖಾನೆಯಿಂದ ಮತ್ತೊಂದು ವರದಿ ಪ್ರಕಟವಾಗಿದೆ. 13,800 ಕ್ವಿಂಟಾಲ್ ಸಕ್ಕರೆ ದಾಸ್ತಾನಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ರೈತರ ಆರೋಪ ಹಿನ್ನೆಲೆ ಪೊಲೀಸರು ದಾಸ್ತಾನು ಪರಿಶೀಲನೆಗೆ ಮುಂದಾದರು. ಸಕ್ಕರೆ ದಾಸ್ತಾನು ಬಗ್ಗೆ ಮಾಹಿತಿ ಕೇಳುವಾಗ ತಡಬಡಾಯಿಸಿದ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಹಿರೇಮಠ ಪರಾರಿಯಾಗಲು ಪ್ರಯತ್ನಿಸಿದರು. ಅಧ್ಯಕ್ಷ ನಾಸೀರ್ ಈ ಅಕ್ರಮದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷರ ವಿರುದ್ಧ ಪ್ರತಿಭಟನೆ
ಕಬ್ಬಿಗೆ ಸೂಕ್ತ ಬೆಲೆ ನೀಡಬೇಕು ಎಂದು ಆಗ್ರಹಿಸಿ ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದಲ್ಲಿ ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷರ ವಿರುದ್ಧ ರೈತರು ಪ್ರತಿಭಟನಾ ಱಲಿ ನಡೆಸಿದರು. ಬಿಜೆಪಿ ಮುಖಂಡ ಮತ್ತು ಕಾರ್ಖಾನೆಯ ಅಧ್ಯಕ್ಷ ಡಿ.ಕೆ.ಸಿದ್ರಾಮ್ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದರು. ಬೇರೆ ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ₹ 2400 ಕೊಡಲಿ ಬಿಡಲಿ ನಾರಂಜಾ ಕಾರ್ಖಾನೆಗೆ ಕಬ್ಬು ಹಾಕಿದ ರೈತರ ಕಬ್ಬಿಗೆ ಬೆಂಬಲ ಬೆಲೆ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಎದುರು ಅಧ್ಯಕ್ಷ ಡಿ.ಕೆ.ಸಿದ್ರಾಮ್ ಹೇಳಿದ್ದರು. ಆದರೆ ಈವರೆಗೂ ರೈತರಿಗೆ ಬೆಂಬಲ ಬೆಲೆ ಕೊಡುವಲ್ಲಿ ವಿಫಲ ರೈತರ ಆಕ್ರೋಶ ವ್ಯಕ್ತಪಡಿಸಿ, ಭಾಲ್ಕಿ ಪಟ್ಟಣದಲ್ಲಿರುವ ಕಾರ್ಖಾನೆ ಅಧ್ಯಕ್ಷರ ಮನೆಗೆ ರೈತರ ಮುತ್ತಿಗೆ ಹಾಕಲು ಯತ್ನಿಸಿದರು. ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ರೈತರನ್ನು ಬಂಧಿಸಿ, ಪೊಲೀಸರು ಕರೆದುಕೊಂಡು ಹೋದರು.
ಇದನ್ನೂ ಓದಿ: ಸಚಿವ ಗೋವಿಂದ ಕಾರಜೋಳ ಕಾರು ಅಪಘಾತ, ಹಾವೇರಿ-ಯಾದಗಿರಿಯಲ್ಲಿ ಕಬ್ಬು ಬೆಳೆ ಭಸ್ಮ, ಫೋರೆನ್ಸಿಕ್ ಲ್ಯಾಬ್ಗೆ ಉಪಕರಣ
ಇದನ್ನೂ ಓದಿ: ಒಂದೇ ರಾತ್ರಿಯಲ್ಲಿ 43 ಮೆಟ್ರಿಕ್ ಟನ್ ಕಬ್ಬು ಟ್ರ್ಯಾಕ್ಟರ್ಗೆ ತುಂಬಿಸಿ ಸಾಹಸ ಮೆರೆದ ಕಾರ್ಮಿಕ