ಬೆಳಗಾವಿ ನ್ಯಾಯಾಲಯಕ್ಕೆ ಅಣ್ಣಾಮಲೈ: ಭೂಗತ ಪಾತಕಿ ಬನ್ನಂಜೆ ರಾಜ ವಿರುದ್ಧ ಸಾಕ್ಷ್ಯ

ಬೆಳಗಾವಿ ನ್ಯಾಯಾಲಯಕ್ಕೆ ಅಣ್ಣಾಮಲೈ: ಭೂಗತ ಪಾತಕಿ ಬನ್ನಂಜೆ ರಾಜ ವಿರುದ್ಧ ಸಾಕ್ಷ್ಯ
ನಿವೃತ್ತ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಮತ್ತು ಕೊಲೆ ಆರೋಪಿ ಬನ್ನಂಜೆ ರಾಜ

ಪೊಲೀಸ್ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಅಣ್ಣಾಮಲೈ ಉದ್ಯಮಿ ಆರ್.ಎನ್.ನಾಯಕ್ ಕೊಲೆ ಪ್ರಕರಣದ ತನಿಖಾಧಿಕಾರಿಯೂ ಆಗಿದ್ದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 29, 2021 | 7:37 PM


ಬೆಳಗಾವಿ: ಉತ್ತರ ಕನ್ನಡ ಜಿಲ್ಲೆ ಅಂಕೋಲದ ಉದ್ಯಮಿ ಆರ್.ಎನ್.ನಾಯಕ್ ಕೊಲೆ ಪ್ರಕರಣದ ಆರೋಪಿ ಬನ್ನಂಜೆ ರಾಜಾ ವಿರುದ್ಧ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ (K Annamalai) ಬುಧವಾರ ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ (Control of Organized Crimes Act – COCA) ಸಾಕ್ಷ್ಯ ಹೇಳಿದರು. ಸಾಕ್ಷ್ಯ ನುಡಿಯಲೆಂದು ಬಂದಿದ್ದ ಅಣ್ಣಾಮಲೈ ಇಡೀ ದಿನ ಕಟಕಟೆಯಲ್ಲಿ ನಿಂತಿದ್ದರು. ಪೊಲೀಸ್ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಅಣ್ಣಾಮಲೈ ಉದ್ಯಮಿ ಆರ್.ಎನ್.ನಾಯಕ್ ಕೊಲೆ ಪ್ರಕರಣದ ತನಿಖಾಧಿಕಾರಿಯೂ ಆಗಿದ್ದರು. ಎಡಿಜಿಪಿ ಪ್ರತಾಪ್ ರೆಡ್ಡಿ ಮತ್ತು ಭಾಸ್ಕರ್ ರಾವ್ ಸಹ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದು ರಾಜ್ಯದಲ್ಲಿ ದಾಖಲಾಗಿದ್ದ ಮೊದಲ ಕೋಕಾ ಪ್ರಕರಣವಾಗಿತ್ತು. ರಾಜ್ಯದಲ್ಲಿ ಪ್ರಸ್ತುತ 17 ಕೋಕಾ ಪ್ರಕರಣಗಳು ಬಾಕಿಯಿವೆ.

ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಕಲ್ಮಾಡಿಯ ಭೂಗತ ಪಾತಕಿ ಬನ್ನಂಜೆ ರಾಜನನ್ನು 2015ರಲ್ಲಿ ಕೋಕಾ ಕಾಯ್ದೆಯಡಿ ಮೊರಾಕ್ಕೊದಲ್ಲಿ ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಗಿತ್ತು. ಇವನ ವಿರುದ್ಧ ಕೊಲೆ, ಶೂಟೌಟ್‌, ದರೋಡೆ ಸೇರಿದಂತೆ 15 ಕ್ರಿಮಿನಲ್ ಪ್ರಕರಣಗಳಿವೆ. ಆಗಸ್ಟ್ 27, 2018ರಂದು ತಾಯಿ ವಿಲಾಸಿನಿ ಶೆಟ್ಟಿಗಾರ್ ಮೃತಪಟ್ಟಾಗ ಪರೋಲ್ ಮೇಲೆ ಬಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ. ಬನ್ನಂಜೆ ರಾಜನ ಸಂಬಂಧಿಗಳು ಈಗಲೂ ಉಡುಪಿಯಲ್ಲಿದ್ದಾರೆ. ಬನ್ನಂಜೆ ರಾಜ ಜೈಲಿನಲ್ಲಿದ್ದರೂ ಸಹಚರರ ಮೂಲಕ ಆಗಾಗ ಉದ್ಯಮಿಗಳಿಗೆ ಬೆದರಿಕೆ ಹಾಕಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿದ್ದವು. ಬ್ರಹ್ಮಾವರದ ಉದ್ಯಮಿ ರತ್ನಾಕರ ಶೆಟ್ಟಿ ಎಂಬುವರಿಗೆ ಹಫ್ತಾ ನೀಡುವಂತೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮಾರ್ಚ್‌ 22, 2019ರಂದು ಬನ್ನಂಜೆ ರಾಜನ ಸಹಚರರನ್ನು ಬಂಧಿಸಲಾಗಿತ್ತು.

ಮಂಗಳೂರು ಮುಲ್ಕಿ ಕೊಲ್ನಾಡು ಕೆಎಸ್ ರಾವ್ ನಗರ ನಿವಾಸಿ ಶಶಿ ಪೂಜಾರಿ ಯಾನೆ ಶಾಡೋ (28), ರವಿಚಂದ್ರ ಪೂಜಾರಿ ಯಾನೆ ವಿಕ್ಕಿ ಪೂಜಾರಿ (30), ಮಂಗಳೂರು ಪೆರ್ಮಂಕಿ ಉಲಾಯಿಬೆಟ್ಟು ಪಟ್ರಕೋಡಿ ಹೌಸ್ ನಿವಾಸಿ ಧನರಾಜ್ ಪೂಜಾರಿ ಯಾನೆ ಧನರಾಜ್ ಯಾನೆ ರಾಕ್ (26), ಕೊಡವೂರು ಗ್ರಾಮದ ಮಲ್ಪೆ ಕೊಳದ ಯಶಸ್ವಿನಿ ಐಸ್ ಪ್ಲಾಂಟ್ ನಿವಾಸಿ ಧನರಾಜ್ ಸಾಲ್ಯಾನ್ ಯಾನೆ ಧನು ಕೊಳ (30) ಹಾಗೂ ಮಲ್ಪೆ ಸರಕಾರಿ ಪಿ.ಯು. ಕಾಲೇಜು ಬಳಿ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಮಿತಿ ಹತ್ತಿರ ನಿವಾಸಿ ಉಲ್ಲಾಸ್ ಶೆಣೈ ಯಾನೆ ಉಲ್ಲಾಸ್ (27) ಬೆದರಿಕೆ ಪ್ರಕರಣದಲ್ಲಿ ಬಂಧಿತರು.ಇದನ್ನೂ ಓದಿ: K Annamalai: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ನೇಮಕ
ಇದನ್ನೂ ಓದಿ: ಸೋಲುಗಳು ಜೀವನದ ಒಂದು ಭಾಗ, ಇಂಥ ಸೋಲುಗಳನ್ನು ಜೀವನದಲ್ಲಿ ಬಹಳ ನೋಡಿದ್ದೇನೆ: ಕೆ.ಅಣ್ಣಾಮಲೈ ಟ್ವೀಟ್

Follow us on

Related Stories

Most Read Stories

Click on your DTH Provider to Add TV9 Kannada