ಅತಿವೃಷ್ಟಿ, ಬೆಳೆಹಾನಿ ವಿಷಯ ಪ್ರಸ್ತಾಪಿಸದ ಕರಾವಳಿ ಶಾಸಕರು: ಯುಟಿ ಖಾದರ್ ಬೇಸರ
ಹಿಂದಿನ ಸರ್ಕಾರ ಭತ್ತಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಈಗಿನ ಸರ್ಕಾರ ವಿಶೇಷ ಪ್ಯಾಕೇಜ್ ಯೋಜನೆ ರದ್ದುಗೊಳಿಸಿದೆ ಎಂದು ವಿಷಾದಿಸಿದರು
ಬೆಳಗಾವಿ: ಕರಾವಳಿಯ ಯಾರೊಬ್ಬರೂ ಅತಿವೃಷ್ಟಿ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ನಮ್ಮ ಭಾಗದ 15 ಶಾಸಕರಿದ್ದರೂ ಸಮಸ್ಯೆಗಳ ಬಗ್ಗೆ ನಾನೊಬ್ಬನೇ ಮಾತನಾಡಬೇಕಿದೆ ಎಂದು ಶಾಸಕ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ನಿಯಮ 69ರ ಅಡಿ ಅತಿವೃಷ್ಟಿ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ನಮ್ಮ ಭಾಗದ ಯಾರೂ ಮಾತನಾಡಲ್ಲ ಎಂಬ ಬೇಸರದಲ್ಲಿಯೇ ಮುಂದಿನ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಈ ವರ್ಷ ರೈತರು ಕಟಾವು ಮಾಡಿದ ಭತ್ತವನ್ನು ಮನೆಗೆ ತೆಗೆದುಕೊಂಡು ಹೋಗಲು ಆಗಿಲ್ಲ. ಹಿಂದಿನ ಸರ್ಕಾರ ಭತ್ತಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ಈಗಿನ ಸರ್ಕಾರ ವಿಶೇಷ ಪ್ಯಾಕೇಜ್ ಯೋಜನೆ ರದ್ದುಗೊಳಿಸಿದೆ ಎಂದು ವಿಷಾದಿಸಿದರು. ಅತಿವೃಷ್ಟಿಯಿಂದ ಅಡಿಕೆಯೂ ನಾಶವಾಗಿದೆ. ಬಂದ ಅಲ್ಪಸ್ವಲ್ಪ ಬೆಳೆಗೆ ಬೆಲೆಯೂ ಇಲ್ಲದಂತಾಗಿದೆ. ಸಿದ್ದರಾಮಯ್ಯ ಸರ್ಕಾರ ಅಡಿಕೆ ಬೆಳೆಗೆ ಪರಿಹಾರ ಕೊಟ್ಟಿತ್ತು. ಈಗಿನ ಸರ್ಕಾರವೂ ಅದೇ ಮಾದರಿ ಅನುಸರಿಸಿ ಪರಿಹಾರ ಕೊಡಬೇಕು. ನೇತ್ರಾವತಿ ಹಿನ್ನೀರಿನ ಪ್ರದೇಶದಲ್ಲಿ ವ್ಯಾಪಕ ಬೆಳೆಹಾನಿಯಾಗಿದೆ. ನದಿಬದಿಯಲ್ಲಿನ ಜಾಗವನ್ನು ರಕ್ಷಿಸಿ, ವಿಶೇಷ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ನೇತ್ರಾವತಿ ಹಿನ್ನೀರಿನ ಪ್ರದೇಶದಲ್ಲಿ ಸಮುದ್ರದ ನೀರು ನುಗ್ಗಿ, ಗದ್ದೆಗಳಲ್ಲಿ ಉಪ್ಪು ಮಿಶ್ರಿತ ನೀರು ನುಗ್ಗಿ, ಬೆಳೆಗಳು ಹಾಳಾಗಿವೆ ಎಂದರು.
ಪರಿಷತ್ನಲ್ಲಿ ಎತ್ತಿನಹೊಳೆ ಚರ್ಚೆ ಎತ್ತಿನಹೊಳೆ ಯೋಜನೆ ಕುರಿತು ವಿಧಾನಪರಿಷತ್ನಲ್ಲಿ ಸದಸ್ಯ ಗೋಪಾಲಸ್ವಾಮಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದರು. ರಾಮನಗರ, ಕೋಲಾರದಲ್ಲಿ ಎತ್ತಿನಹೊಳೆ ಯೋಜನೆ ಜಾರಿಯಾಗುತ್ತಿದೆ. ಹಾಸನ ಭಾಗದಲ್ಲೂ ಯೋಜನೆ ಜಾರಿಯಾಗಬೇಕು. ಸೆಪ್ಟೆಂಬರ್ ವೇಳೆಗೆ ಯೋಜನೆ ಪೂರ್ಣಗೊಳ್ಳಬಹುದು ಎಂದು ಹೇಳಿದ್ದಿರಿ. ಆದರೆ ಯೋಜನೆಯು ಅವಧಿಯೊಳಗೆ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ನೀರಾವರಿ ಸಚಿವ ಗೋವಿಂದ ಕಾರಜೋಳ, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ನಾನೇ ಸ್ಥಳಕ್ಕೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಹಾಸನಕ್ಕೂ ಹೋಗಿ ಪರಿಶೀಲಿಸಿದ್ದೇನೆ. ಮಾರ್ಚ್ ಅಂತ್ಯದ ಒಳಗೆ 10 ಟಿಎಂಸಿ ನೀರು ಕೊಡಲಾಗುವುದು ಎಂದರು.
ಸದಸ್ಯರನ್ನು ತಡೆದ ವಿಚಾರ: ಕಾವೇರಿದ ಚರ್ಚೆ
ಸುವರ್ಣಸೌಧದ ಬಳಿ ನಮ್ಮನ್ನು ತಡೆದಿದ್ದಾರೆ. ನಮ್ಮನ್ನು ಸುಮಾರು 3 ಗಂಟೆಗಳ ಕಾಲ ತಡೆದು ನಿಲ್ಲಿಸಿದ್ದಾರೆ. ಈ ಅವಮಾನ ಖಂಡಿಸಿ, ಪೊಲೀಸರ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹೇಳಿದರು. ಪ್ರತಿಪಕ್ಷಗಳ ಆಕ್ಷೇಪ ಕುರಿತು ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ನಿಮ್ಮನ್ನು ತಡೆದ ಮಾಹಿತಿ ಇಲ್ಲ. ವಿಚಾರ ತಿಳಿದ ಕೂಡಲೇ ನಾವು ಶಾಸಕರನ್ನು ಬಿಡಲು ಹೇಳಿದ್ದೇವೆ. ಯಾರಿಗೂ ಅವಮಾನ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಭದ್ರತೆ ದೃಷ್ಟಿಯಿಂದ ಪೊಲೀಸರು ಈ ರೀತಿ ಮಾಡಿರಬಹುದು. ವಿಷಯ ತಿಳಿದ ಕೂಡಲೇ ಸಮರ್ಪಕವಾಗಿ ಪ್ರತಿಕ್ರಿಯಿಸಿದ್ದೇವೆ ಎಂದರು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಸಂತಾಪ ತಮಿಳುನಾಡಿನ ಕೂನೂರು ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಸಹ ನಿಧನರಾದ ಹಿನ್ನೆಲೆಯಲ್ಲಿ ಅವರಿಗೆ ಸದನದಲ್ಲಿ ಸಂತಾಪ ಸೂಚಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭಾಪತಿ ಬಸವರಾಜ್ ಹೊರಟ್ಟಿ, ಆಡಳಿತ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಂತಾಪ ಸೂಚಿಸಿದರು.
ಇದನ್ನೂ ಓದಿ: ಕರ್ನಾಟಕ ಸರ್ಕಾರದ ಮೇಲೆ ಶೇ 40ರ ಕಮಿಷನ್ ಆರೋಪ: ಬೆಳಗಾವಿ ಅಧಿವೇಶನದಲ್ಲಿ ಗೋವಿಂದ ಕಾರಜೋಳ ಪ್ರತಿಕ್ರಿಯೆ ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ: ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಿದ ಅನ್ನದಾನಿ
Published On - 4:50 pm, Thu, 16 December 21