ಬೇಲೆಕೇರಿ ಅದಿರು ಅಕ್ರಮ: ಸತೀಶ್ ಸೈಲ್ ಪಾತ್ರವೇನು? 14 ವರ್ಷ ಹಿಂದಿನ ಪ್ರಕರಣದ ಸಮಗ್ರ ಮಾಹಿತಿ ಇಲ್ಲಿದೆ

|

Updated on: Oct 26, 2024 | 5:30 PM

ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ಸಾಗಾಟ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಲೋಕಾಯುಕ್ತ ಹಾಗೂ ಅರಣ್ಯಾಧಿಕಾರಿಗಳು 2010 ರಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದರು. ಒಂದಲ್ಲ-ಎರಡಲ್ಲ ನೂರಾರು ಕೋಟಿ ಬೆಲೆ ಬಾಳುವ ಅಕ್ರಮ ಅದಿರನ್ನು ಜಪ್ತಿ ಮಾಡಿದ್ದರು. ಇದೀಗ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಇತರ ಆರೋಪಿಗಳನ್ನು ಜನಪ್ರತಿನಿಧಿಗಳ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದ್ದು, 3, 5 ಹಾಗೂ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ 44 ಕೋಟಿ ರೂ.ಗೂ ಅಧಿಕ ದಂಡ ವಿಧಿಸಿದೆ. ಪ್ರಕರಣದ ಸಮಗ್ರ ವಿವರ ಇಲ್ಲಿದೆ.

ಬೇಲೆಕೇರಿ ಅದಿರು ಅಕ್ರಮ: ಸತೀಶ್ ಸೈಲ್ ಪಾತ್ರವೇನು? 14 ವರ್ಷ ಹಿಂದಿನ ಪ್ರಕರಣದ ಸಮಗ್ರ ಮಾಹಿತಿ ಇಲ್ಲಿದೆ
ಸತೀಶ್ ಸೈಲ್
Image Credit source: Facebook
Follow us on

ಬೆಂಗಳೂರು, ಅಕ್ಟೋಬರ್ 26: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. 2010 ರಲ್ಲಿ ಲೋಕಾಯುಕ್ತ ಹಾಗೂ ಅರಣ್ಯಾಧಿಕಾರಿಗಳು ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದರು. ಒಂದಲ್ಲ-ಎರಡಲ್ಲ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಅಕ್ರಮ ಅದಿರನ್ನು ಜಪ್ತಿ ಮಾಡಿದ್ದರು. ಹೀಗೆ ಜಪ್ತಿ ಮಾಡಿದ್ದ ಅದಿರಿನ 24 ಗುಡ್ಡೆಗಳನ್ನು ಬೇಲೆಕೇರಿ ಬಂದರಿನಲ್ಲಿ ಸಂಗ್ರಹಿಸಿಡಲಾಗಿತ್ತು. 2010 ರ ಮಾರ್ಚ್ 20ರಲ್ಲಿ ಸೀಜ್ ಆಗಿದ್ದ ಅದಿರು 8ಲಕ್ಷ ಮೆಟ್ರಿಕ್ ಟನ್. 2010 ರ ಜೂನ್ 2ರಲ್ಲಿ, ಅಂದರೆ ಕೇವಲ 80 ದಿನಗಳಲ್ಲಿ 6 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ನಾಪತ್ತೆಯಾಗಿತ್ತು. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ತನಿಖೆ ಆರಂಭಿಸಿತ್ತು. ಶಾಸಕ ಸತೀಶ್ ಸೈಲ್, ಮಹೇಶ್ ಬಿಳಿಯೆ, ಕಾರಾಪುಡಿ ಮಹೇಶ್, ಸ್ವಸ್ತಿಕ್ ನಾಗರಾಜು ಸೇರಿದಂತೆ ಹಲವರ ವಿರುದ್ಧ ಆರೋಪಪಟ್ಟಿ ದಾಖಲಿಸಿತ್ತು. ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸತೀಶ್ ಸೈಲ್ ಸೇರಿದಂತೆ 7 ಆರೋಪಿಗಳನ್ನು ದೋಷಿ ಎಂದು ಹೇಳಿದ್ದು, ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

ಒಟ್ಟು 6 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಸೈಲ್​ಗೆ 3, 5 ಹಾಗೂ 7 ವರ್ಷ ಜೈಲು ಶಿಕ್ಷೆ ಮತ್ತು ಸುಮಾರು 44 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸಲಾಗಿದೆ.

ಏನಿದು ಬೇಲೆಕೇರಿ ಪ್ರಕರಣ?

ಬೇಲೆಕೇರಿ ಎಂಬುದು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನಲ್ಲಿರುವ ಬಂದರು. ಇಲ್ಲಿಂದ ನಿಯಮ ಬಾಹಿರವಾಗಿ ವಿದೇಶಕ್ಕೆ ಅದಿರು ರಫ್ತು ಮಾಡಲಾಗಿತ್ತು. 2009ರ ಜನವರಿ 1ರಿಂದ 2010ರ ಮೇ 31ರವರೆಗೆ, ಅಂದರೆ 17 ತಿಂಗಳ ಅವಧಿಯಲ್ಲಿ ಬರೋಬ್ಬರಿ 88 ಲಕ್ಷದ 6 ಸಾವಿರ ಮೆಟ್ರಿಕ್ ಟನ್ ಅದಿರು ರಫ್ತಾಗಿತ್ತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, 38 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತು ಮಾಡುವುದಕ್ಕಷ್ಟೇ ಅನುಮತಿ ನೀಡಲಾಗಿತ್ತು. ಗಣಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದ್ದ ಆರೋಪಿಗಳು ಅದಿರು ರಫ್ತು ಮಾಡಿದ್ದರು. ಬರೋಬ್ಬರಿ 50 ಲಕ್ಷ ಮೆಟ್ರಿಕ್​ ಟನ್​ ಅದಿರು ಹೆಚ್ಚುವರಿಯಾಗಿ ವಿದೇಶಕ್ಕೆ ರಫ್ತಾಗಿತ್ತು. 73 ರಫ್ತುದಾರರು ಈ ರಫ್ತು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಪೈಕಿ ನಾಲ್ಕು ಕಂಪನಿಗಳ ಮೂಲಕ 33 ಲಕ್ಷ ಮೆಟ್ರಿಕ್​ ಟನ್​ ಅದಿರು ಕಳುಹಿಸಲಾಗಿತ್ತು. ಹೀಗೆ ರಫ್ತು ಮಾಡಿದ್ದ 4 ಕಂಪನಿಗಳಲ್ಲಿ ಶಾಸಕ ಸತೀಶ್​ ಸೈಲ್​ ಒಡೆತನದ ಕಂಪನಿ ಕೂಡ ಇದೆ. ಸೈಲ್ ಒಡೆತನದ ಶ್ರೀಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ 7 ಲಕ್ಷದ 23ಸಾವಿರ ಮೆಟ್ರಿಕ್ ಟನ್​ ಅದಿರು ಸಾಗಿಸಿತ್ತು. ಇನ್ನುಳಿದ ಕಂಪನಿಗಳ ಅದಿರು ರಫ್ತುವಿನಲ್ಲಿ ಸೈಲ್​ ಪರೋಕ್ಷ ಭಾಗಿಯಾಗಿದ್ದರು.

ಗಣಿ ಇಲಾಖೆ 38 ಲಕ್ಷ ಮೆಟ್ರಿಕ್​ ಟನ್​ ಅದಿರು ರಫ್ತಿಗೆ ಮಾತ್ರ ಅನುಮತಿ ಕೊಟ್ಟಿತ್ತು. ಆದರೆ ವಿದೇಶಕ್ಕೆ ಹೋಗಿದ್ದು ಮಾತ್ರ 88 ಲಕ್ಷ ಮೆಟ್ರಿಕ್ ಟನ್.

ಸಂತೋಷ್ ಹೆಗ್ಡೆ ಬಯಲಿಗೆಳೆದಿದ್ದ ಪ್ರಕರಣ

2010ರ ಮಾರ್ಚ್​​ನಲ್ಲಿ ಅಂದಿನ ಕರ್ನಾಟಕ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ ಪ್ರಕರಣವನ್ನು ಬಯಲಿಗೆಳೆದಿದ್ದರು. ಲೋಕಾಯುಕ್ತ ಹಾಗೂ ಅರಣ್ಯಾಧಿಕಾರಿಗಳ ಕಾರ್ಯಾಚರಣೆ ಈ ಪ್ರಕರಣ ಹೊರಬರಲು ಕಾರಣವಾಗಿತ್ತು.

ಬೇಲೆಕೇರಿ ಪ್ರಕರಣದಲ್ಲಿ ಸತೀಶ್ ಸೈಲ್ ಪಾತ್ರವೇನು?

ಕಾಂಗ್ರೆಸ್ ಶಾಸಕ ಸತೀಶ್​ ಸೈಲ್ ಕಾಡಿನ ನಡುವೆ ತೆಗೆದ ಅದಿರನ್ನ ಖರೀದಿ ಮಾಡುತ್ತಿದ್ದರು. ಕಾನೂನು ಬಾಹಿರವಾಗಿ, ಅಂದರೆ, ಗುತ್ತಿಗೆ ಪಡೆಯದೇ ತೆಗೆದ ಅದಿರು ಖರೀದಿಸುತ್ತಿದ್ದರು. ಬಳ್ಳಾರಿ ಮತ್ತು ಹೊಸಪೇಟೆ ಸೇರಿದಂತೆ ಇತರೆ ಅರಣ್ಯದಲ್ಲಿ ತೆಗೆದಿದ್ದ ಅದಿರು ಕೊಂಡುಕೊಳ್ಳುತ್ತಿದ್ದರು. ಖರೀದಿ ಮಾಡಿದ್ದ ಅದಿರನ್ನು ಸರ್ಕಾರದ ಅನುಮತಿ ಪಡೆಯದೇ ಸ್ಥಳಾಂತರ ಮಾಡುತ್ತಿದ್ದರು. ಹೀಗೆ ತೆರಿಗೆ ವಂಚನೆ ಮಾಡಿ ಬೇಲೆಕೇರಿಗೆ ಅಕ್ರಮವಾಗಿ ಅದಿರು ಸಾಗಾಟ ಮಾಡಲಾಗುತ್ತಿತ್ತು.

ಫ್ಲ್ಯಾಟ್​​ನಲ್ಲಿ ಅಕ್ರಮ ಅದಿರು ಸಂಗ್ರಹಿಸಿಟ್ಟಿದ್ದ ಸತೀಶ್ ಸೈಲ್

ಕಡಿಮೆ ಬೆಲೆಗೆ ಖರೀದಿ ಮಾಡಿದ್ದ ಅದಿರನ್ನು ಸತೀಶ್ ಸೈಲ್ ತಮ್ಮ ಪ್ಲ್ಯಾಟ್​ನಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಬೇಲೆಕೇರಿ ಬಂದರಿನಲ್ಲಿರುವ ಸತೀಶ್​ ಸೈಲ್​ ಫ್ಲ್ಯಾಟ್​ನಲ್ಲಿ, ದಾಸ್ತಾನು ಮಾಡಿದ ಅದಿರನ್ನು 17 ತಿಂಗಳಲ್ಲಿ ಸಂಪೂರ್ಣವಾಗಿ ರಫ್ತು ಮಾಡಲಾಗಿತ್ತು. ಇನ್ನು ಪೊಲೀಸರು ಅದಿರು ಸೀಜ್ ಮಾಡಿದ್ದರೂ ತಲೆಕೆಡಿಸಿಕೊಳ್ಳದೇ ಸತೀಶ್ ರಪ್ತು ಕಾರ್ಯ ಮುಂದುವರೆಸಿದ್ದರು ಎನ್ನಲಾಗಿದೆ. ಯಾವಾಗ 88 ಲಕ್ಷದ 6 ಸಾವಿರ ಮೆಟ್ರಿಕ್ ಟನ್ ಅದಿರಿನ ಅಕ್ರಮ ಬಯಲಾಯಿತೋ, ಆಗ 5 ಲಕ್ಷ ಮೆಟ್ರಿಕ್ ಟನ್ ಅದಿರು ಸೀಜ್ ಮಾಡಲಾಗಿತ್ತು.

ಮುಟ್ಟುಗೋಲು ಹಾಕಿದ್ದ ಅದಿರನ್ನೂ ರಫ್ತು ಮಾಡಿದ್ದ ಸತೀಶ್ ಸೈಲ್

ಅಧಿಕಾರಿಗಳ ಕ್ರಮಕ್ಕೂ ಸುಮ್ಮನಾಗದ ಸತೀಶ್ ಸೈಲ್, ಮುಟ್ಟುಗೋಲು ಹಾಕಿದ್ದ ಅದಿರನ್ನೂ ಗೊತ್ತಿಲ್ಲದಂತೆ ರಫ್ತು ಮಾಡಿಸಿದ್ದರು. ಸೀಜ್ ಆಗಿದ್ದ ಅದಿರು ನಾಪತ್ತೆ ಆಗಿದ್ದು ಗೊತ್ತಾದ ತಕ್ಷಣ ಸತೀಶ್ ಸೈಲ್ ಮೇಲೆ ಕೇಸ್​ ದಾಖಲಿಸಲಾಗಿತ್ತು. ಇದೀಗ 6 ಪ್ರಕರಣಗಳಲ್ಲಿ ಸತೀಶ್ ಸೈಲ್ ದೋಷಿ ಎಂಬುವುದು ಸಾಬೀತಾಗಿದೆ.

ಜೈಲು ವಾಸ ಅನುಭವಿಸಿದ್ದ ಸತೀಶ್ ಸೈಲ್

2012ರ ಸೆಪ್ಟೆಂಬರ್ 16ರಂದು ಸಿಬಿಐ ಸತೀಶ್ ಸೈಲ್ ಮನೆ ಮೇಲೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು. ಇದಾದ ಬಳಿಕ 2013ರ ಸೆಪ್ಟೆಂಬರ್ 20ರಂದು ಸೈಲ್ ಅರೆಸ್ಟ್ ಕೂಡ ಆಗಿದ್ದರು. ವರ್ಷಕ್ಕೂ ಅಧಿಕ ಕಾಲ ಜೈಲುವಾಸ ಅನುಭವಿಸಬೇಕಾಯಿತು. ನಂತರ 2014ರ ಡಿಸೆಂಬರ್ 16ಕ್ಕೆ ಜಾಮೀನು ಪಡೆದುಹೊರ ಬಂದಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ ಇನ್​ ಜೈಲ್: ಶಾಸಕ ಸ್ಥಾನ ಅನರ್ಹ ಭೀತಿ!

ಈ ಎಲ್ಲ ಬೆಳವಣಿಗೆಗಳ ನಂತರ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸತೀಶ್ ಸೈಲ್, ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ ಸೋತಿದ್ದರು. ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಪಡೆದು ಕಾರವಾರ ವಿಧಾನಸಭಾ ಕ್ಷೇತ್ರದಿಂದ ಗೆಲವು ಕಂಡಿದ್ದರು.

ಮಾಹಿತಿ: ರಮೇಶ್ ಹಾಗೂ ಸೂರಜ್ ‘ಟಿವಿ9’

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:24 pm, Sat, 26 October 24