AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಹಾನಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸಭೆ: ಡಿಸಿ, ಸಿಇಒಗಳಿಗೆ ಕೊಟ್ಟ ಖಡಕ್ ಸೂಚನೆಗಳ ವಿವರ ಇಲ್ಲಿದೆ

ಕಳೆದ 15 ದಿನಗಳಿಂದ ಕರ್ನಾಟಕದಲ್ಲಿ ಭಾರಿ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಹೀಗಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ಸಭೆ ಮಾಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತಕ್ಷಣ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಮನೆ ಹಾನಿ, ಬೆಳೆ ಹಾನಿಗೂ ಪರಿಹಾರಕ್ಕೆ ಸೂಚಿಸಿದ್ದಾರೆ.

ಮಳೆ ಹಾನಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸಭೆ: ಡಿಸಿ, ಸಿಇಒಗಳಿಗೆ ಕೊಟ್ಟ ಖಡಕ್ ಸೂಚನೆಗಳ ವಿವರ ಇಲ್ಲಿದೆ
ಮಳೆ ಹಾನಿ ಬಗ್ಗೆ ಸಿಎಂ ಸಿದ್ದರಾಮಯ್ಯ ಸಭೆ: ಡಿಸಿ, ಸಿಇಒಗಳಿಗೆ ಕೊಟ್ಟ ಖಡಕ್ ಸೂಚನೆಗಳ ವಿವರ ಇಲ್ಲಿದೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 26, 2024 | 3:17 PM

Share

ಬೆಂಗಳೂರು, ಅಕ್ಟೋಬರ್​ 26: ಕಳೆದ 15 ದಿನದಿಂದ ಕರ್ನಾಟಕದೆಲ್ಲೆಡೆ ಆರ್ಭಟಿಸುತ್ತಿರುವ ಮಳೆಯಿಂದಾಗಿ ಅವಾಂತರಗಳಿಗೆ ಕೊನೆಯಿಲ್ಲದಂತಾಗಿದೆ. ಸ್ವಲ್ಪ ಮಳೆ ಕಡಿಮೆಯಾಗಿದ್ರೂ ನಿತ್ಯ ಒಂದೊಂದೇ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ವಿಪತ್ತು ನಿರ್ವಹಣೆ ಕುರಿತು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ಮಾಡಿ ಕೆಲ ನಿರ್ಧಾರಗಳನ್ನು ಕೈಗೊಂಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ಕೂಡ ಮಳೆ ಹಾನಿ ಸಂಬಂಧ ಡಿಸಿ, ಜಿ.ಪಂ. ಸಿಇಒಗಳ ಜತೆ ಸಿಎಂ ಸಭೆ ಮಾಡಿದ್ದು, ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.

ತಕ್ಷಣ ಪರಿಹಾರಕ್ಕೆ ಡಿಸಿಗಳಿಗೆ ಸೂಚನೆ

ನೆರೆ ಪೀಡಿತ ಪ್ರದೇಶಗಳಿಗೆ ಸ್ವತಃ ಡಿಸಿಗಳು ಭೇಟಿ ನೀಡಬೇಕು. ಪರಿಶೀಲನೆ ಮಾಡಿ ತಕ್ಷಣ ಪರಿಹಾರ ನೀಡಬೇಕು. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಅಕ್ಟೋಬರ್‌ನಿಂದ ಡಿಸೆಂಬರ್​ವರೆಗೆ ಮಳೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜನವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗುವುದನ್ನು ತಡೆಯಲು ಪ್ರಮುಖ ನಿರ್ಧಾರ ಕೈಗೊಂಡ ಡಿಕೆ ಶಿವಕುಮಾರ್

ಪ್ರಮುಖ ಡ್ಯಾಂಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಇದ್ದು, ಪ್ರಮುಖ ಡ್ಯಾಂಗಳಲ್ಲಿ ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 505.81 ಟಿಎಂಸಿ ನೀರು ಇತ್ತು. ಈ ಬಾರಿ ಜಲವಿದ್ಯುತ್‌ ಉತ್ಪಾದನೆಗೆ ಉತ್ತಮ ಪ್ರಮಾಣದ ನೀರು ಲಭ್ಯವಾಗಿದೆ ಎಂದಿದ್ದಾರೆ.

ಕಾವೇರಿ ಕಣಿವೆ ಮತ್ತು ಕೃಷ್ಣಾ ಕಣಿವೆಯಲ್ಲೂ ಉತ್ತಮ ನೀರು ಸಂಗ್ರಹವಿದೆ. ನೀರಾವರಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ರಾಜ್ಯದಲ್ಲಿ ಈವರೆಗೆ 25 ಜನರು ಮಳೆಯಿಂದ ಮೃತಪಟ್ಟಿದ್ದಾರೆ ಎಂದ ಸಿಎಂ

ಸಭೆ ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆ ಹಾನಿ ಬಗ್ಗೆ ಡಿಸಿ, ಸಿಇಒಗಳು, ಎಸ್​ಪಿಗಳ ಸಭೆ ಮಾಡಿದ್ದೇನೆ. ಬೆಂಗಳೂರು ಸೇರಿ ಹಲವೆಡೆ ಹಿಂಗಾರು ಮಳೆಯಿಂದ ಹಾನಿಯಾಗಿದೆ. ಅಕ್ಟೋಬರ್ 1ರಿಂದ 25ರವರೆಗೆ 181 ಮೀ‌.ಮೀ ಅಂದರೆ ಅತೀ ಹೆಚ್ಚು ಮಳೆಯಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಈವರೆಗೆ 25 ಜನರು ಮಳೆಯಿಂದ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ಮಳೆಯಿಂದಾಗಿ 84 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ರಾಜ್ಯದ ಹಲವೆಡೆ 2,074 ಮನೆಗಳು ಭಾಗಶಃ ಹಾನಿಗೀಡಾಗಿವೆ. ಪೂರ್ತಿ ಮನೆ ಹಾನಿಗೆ 1.20 ಲಕ್ಷ ರೂ. ಪರಿಹಾರ ನೀಡಬೇಕು. ಸಣ್ಣಪುಟ್ಟ ಹಾನಿಯಾದರೆ 50 ಸಾವಿರ ರೂ. ಪರಿಹಾರ ಕೊಡುತ್ತೇವೆ. ಈ ಪರಿಹಾರ ನವೆಂಬರ್, ಅಕ್ಟೋಬರ್ ತಿಂಗಳಲ್ಲೂ ಅನ್ವಯ ಆಗಲಿದೆ. ಜತೆಗೆ ಮನೆ ನಿರ್ಮಾಣ ಮಾಡಲು ಈಗಾಗಲೇ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

80 ಸಾವಿರ ಹೆಕ್ಟೇರ್ ಬೆಳೆ‌ಹಾನಿ

ಬೆಳೆ ಹಾನಿ ಸುಮಾರು 105900 ಹಾನಿಯಾಗಿದೆ. ಜಂಟಿ ಸರ್ವೇ ಮಾಡಿ ವಾರದೊಳಗೆ ವರದಿ ನೀಡಲು ಹೇಳಿದ್ದೇವೆ. ಕೃಷಿ ಜಮೀನು 9000 ಸಾವಿರ ಹೆಕ್ಟೇರ್, 30 ಸಾವಿರ ಹೆಕ್ಟೇರ್ ತೋಟಗಾರಿಕಾ ಪ್ರದೇಶ ಹಾನಿಯಾಗಿದೆ. 48 ಗಂಟೆಯಲ್ಲಿ ಪರಿಹಾರ ನೀಡಲು‌ ಹೇಳಿದ್ದೇನೆ. ಡಿಸಿ, ಸಿಇಒ‌ಗಳ ಬಳಿ‌ 666 ಕೋಟಿ ರೂ. ಹಣ ಇದೆ. 80 ಸಾವಿರ ಹೆಕ್ಟೇರ್ ಬೆಳೆ‌ಹಾನಿಯಾಗಿದೆ. ಕೆರೆ ಒತ್ತುವರಿ ತೆರವು ಗೊಳಿಸಲು ಹೇಳಿದ್ದೇನೆ. ಕ್ಯಾಷ್ಮಂಟೇರಿಯಾದಲ್ಲಿ ಒತ್ತುವರಿ ಆಗಿದೆ ತೆರವು ಮಾಡಬೇಕು. ಹೂಳು ತೆಗೆಯುವುದಕ್ಕೂ ಹೇಳಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಕೇಂದ್ರೀಯ ವಿಹಾರಗೆ ಡಿಕೆ ಶಿವಕುಮಾರ್ ಭೇಟಿ: ಮನೆ ಬಾಗಿಲು ಒಡೆದಾದ್ರೂ ಜನರನ್ನು ಹೊರ ತರುವಂತೆ ಸೂಚನೆ

ಬಿತ್ತನೆ ಬೀಜ ನಷ್ಟ ಆಗಿದ್ದರೆ ಬೀಜ ಸರಬರಾಜು ಮಾಡಲು ಸೂಚನೆ‌ ನೀಡಿದ್ದೇವೆ. ಜಿಲ್ಲಾ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಎಲ್ಲಿ‌ ಪ್ರವಾಹ ಮನೆ ಹಾನಿ, ಜೀವ ಹಾನಿ, ಜಾನುವಾರ ಹಾನಿ ಆಗಿದೆ, ಅಲ್ಲಿ ಭೇಟಿ ನೀಡಿ ಸಾಂತ್ವನ ಹೇಳಿ‌ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.