
ಬೆಂಗಳೂರು, ಜೂನ್ 7: ಆರ್ಸಿಬಿ ತಂಡ ಐಪಿಎಲ್ (IPL) ಟ್ರೋಪಿ ಗೆದ್ದ ವಿಜಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿಗೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ (Chinnaswamy Stadium Stampede) 11ಮಂದಿ ಸಾವಿಗೀಡಾಗಿರುವ ದುರಂತ ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸ್ ಆಯುಕ್ತರು ಸೇರಿದಂತೆ ಹಲವರನ್ನು ಸರ್ಕಾರ ಅಮಾನತು ಮಾಡಿತ್ತು. ಇದೀಗ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಶಂಕರ್ ನೈತಿಕ ಹೊಣೆ ಹೊತ್ತು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕೆಎಸ್ಸಿಎ ಖಜಾಂಚಿ ಜೈರಾಮ್ ಸಹ ರಾಜೀನಾಮೆ ನೀಡಿದ್ದಾರೆ. ಕೆಎಸ್ಸಿಎ ಅಧ್ಯಕ್ಷರಿಗೆ ಇಬ್ಬರೂ ಶುಕ್ರವಾರ ರಾತ್ರಿ ರಾಜೀನಾಮೆ ನೀಡಿರುವುದು ತಿಳಿದು ಬಂದಿದೆ.
ಪದಾಧಿಕಾರಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಶಂಕರ್, ಜೈರಾಮ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಪದಾಧಿಕಾರಿಗಳ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ. ಹೈಕೋರ್ಟ್ ರಿಲೀಫ್ ಕೊಟ್ಟ ನಂತರ ಬ್ರಿಜೇಶ್ ಪಾಟೀಲ್ ಸಭೆ ನಡೆಸಿ ರಾಜೀನಾಮೆಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ತೆರವುಗೊಂಡ ಸ್ಥಾನಕ್ಕೆ ತಾತ್ಕಲಿಕವಾಗಿ ಜಂಟಿ ಕಾರ್ಯದರ್ಶಿ ಶಾವೀರ್ ತಾರಪೂರ್ ಅವರನ್ನು ನೇಮಕ ಮಾಡಲಾಗಿದೆ.
ಘಟನೆ ಸಂಬಂಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡಳಿತ ಮಂಡಳಿಯ ನಾಲ್ವರು ಅಧಿಕಾರಿಗಳನ್ನು ಶುಕ್ರವಾರ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಂಸ್ಥೆಯು ಹೈಕೋರ್ಟಿಗೆ ರಿಟ್ ಅರ್ಜಿಯನ್ನು ಸಲ್ಲಿಸಿತ್ತು. ಸರ್ಕಾರದ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿತ್ತು.
ಏತನ್ಮಧ್ಯೆ, ಕಾಲ್ತುಳಿತ ಘಟನೆ ಸಂಬಂಧ ಚರ್ಚಿಸಲು ಬೆಂಗಳೂರು ನೂತನ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶನಿವಾರ ಬೆಳಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರನ್ನು ಭೇಟಿಯಾದರು. ಬೆಂಗಳೂರಿನ ಸದಾಶಿವನಗರದ ಪರಮೇಶ್ವರ್ ನಿವಾಸದಲ್ಲಿ ಅವರನ್ನು ಭೇಟಿಯಾದ ಸಿಂಗ್, ಈಗಾಗಲೇ ಬಂಧನವಾಗಿರುವ ಆರೋಪಿಗಳ ವಿಚಾರಣೆ, ಮುಂದಿನ ತನಿಖೆ ಸೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಇದನ್ನೂ ಓದಿ: ಕಾಲ್ತುಳಿತ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ, ಗುಪ್ತಚರ ಇಲಾಖೆಗೆ ಹೊಸ ಮುಖ
Published On - 10:39 am, Sat, 7 June 25