AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕಾಲ್ತುಳಿತ: ರಾಜ್ಯಪಾಲರಿಗೆ ಸಿಟಿಜನ್ ರೈಟ್ಸ್ ಫೌಂಡೇಷನ್ ಪತ್ರ, ಸರ್ಕಾರವನ್ನು ಅಮಾನತಿನಲ್ಲಿಡುವಂತೆ ಮನವಿ

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದಲ್ಲಿ 11 ಜನರ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ನಾಗರಿಕ ಹಕ್ಕುಗಳ ಸಂಸ್ಥೆ ರಾಜ್ಯಪಾಲರಿಗೆ ಪತ್ರ ಬರೆದಿದೆ. ಘಟನೆಯ ಸೂಕ್ತ ತನಿಖೆ ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿಡುವಂತೆ ಮನವಿ ಮಾಡಲಾಗಿದೆ. ಸರ್ಕಾರದ ನಿರ್ಲಕ್ಷ್ಯ ಮತ್ತು ದುರುಪಯೋಗದ ಆರೋಪಗಳನ್ನು ಸಂಸ್ಥೆ ಎತ್ತಿ ಹಿಡಿದಿದೆ.

ಬೆಂಗಳೂರು ಕಾಲ್ತುಳಿತ: ರಾಜ್ಯಪಾಲರಿಗೆ ಸಿಟಿಜನ್ ರೈಟ್ಸ್ ಫೌಂಡೇಷನ್ ಪತ್ರ, ಸರ್ಕಾರವನ್ನು ಅಮಾನತಿನಲ್ಲಿಡುವಂತೆ ಮನವಿ
ಸಿಟಿಜನ್ ರೈಟ್ಸ್ ಫೌಂಡೇಷನ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಗಂಗಾಧರ​ ಬ. ಸಾಬೋಜಿ
|

Updated on: Jun 07, 2025 | 10:05 AM

Share

ಬೆಂಗಳೂರು, ಜೂನ್​ 07: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ (stampede) 11 ಜನ ಜೀವ ಬಿಟ್ಟಿದ್ದರು. ಇದೇ ಕಾರಣಕ್ಕೆ ರಾತ್ರೋರಾತ್ರಿ ಪೊಲೀಸ್ ಅಧಿಕಾರಿಗಳನ್ನ ಅಮಾನತು ಕೂಡ ಮಾಡಲಾಗಿತ್ತು.‌ ಬಳಿಕ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಜೂನ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ಯ ಈ ದುರಂತಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ಗೆ ಸಿಟಿಜನ್ ರೈಟ್ಸ್ ಫೌಂಡೇಷನ್ (Citizen Rights Foundation)​ ಪತ್ರ ಬರೆದಿದ್ದು, ನ್ಯಾಯಾಂಗ ತನಿಖೆ ಪೂರ್ಣವಾಗುವವರೆಗೂ ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿಡುವಂತೆ ಮನವಿ ಮಾಡಿದೆ.

ಸಿಟಿಜನ್ ರೈಟ್ಸ್ ಫೌಂಡೇಷನ್​ ಬರೆದ ಪತ್ರದಲ್ಲೇನಿದೆ?

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಸಾಮಾಜಿಕ ಹಿತಾಸಕ್ತಿ ಚಟುವಟಿಕೆಗಳಲ್ಲಿ ತೊಡಗಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’, ಬಿಟ್ ಕಾಯಿನ್, ಕೋವಿಡ್, ಬಿಬಿಎಂಪಿ ಅಕ್ರಮಗಳು, ನಿವೇಶನ ಹಂಚಿಕೆ ಅಕ್ರಮ, ಕೆಐಎಡಿಬಿ ಅವ್ಯವಹಾರಗಳು, ವೈದ್ಯಕೀಯ ಶಿಕ್ಷಣ ಇಲಾಖೆಗಳ ಹಗರಣ ಸೇರಿದಂತೆ ಅನೇಕ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನಸೆಳೆದಿದ್ದು, ಅನೇಕ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಗಳ ಮೂಲಕ ಕಾನೂನು ಹೋರಾಟ ನಡೆಸಿದೆ.

ಇದನ್ನೂ ಓದಿ: ವಿಧಾನಸೌಧ ಮುಂದೆ RCB ವಿಜಯೋತ್ಸವಕ್ಕೆ 19 ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ

ಇದನ್ನೂ ಓದಿ
Image
Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ವಿರುದ್ಧ ಬಿಜೆಪಿ ದೂರು
Image
ಚಿನ್ನಸ್ವಾಮಿ ದುರಂತ; ವಿರಾಟ್ ಕೊಹ್ಲಿ ವಿರುದ್ದ ದೂರು ದಾಖಲು
Image
RCB ಮಾರ್ಕೆಟಿಂಗ್​ ಮುಖಸ್ಥ​​​​​​​ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
Image
Bengaluru Stampede: ಸುಮೋಟೋ ಕೇಸ್​ ​ದಾಖಲಿಸಿಕೊಂಡ ಮಾನವ ಹಕ್ಕುಗಳ ಆಯೋಗ

ಕಾನೂನು ಸುವ್ಯವಸ್ಥೆಯ ವಿಚಾರ ಬಂದಾಗಲೂ ಸರ್ಕಾರ ಹಾಗೂ ರಾಜಭವನಕ್ಕೆ ಸೂಕ್ತ ಮಾಹಿತಿ ನೀಡುತ್ತಾ ಆಡಳಿತ ಸುಧಾರಣೆಗೆ ಬೆಂಗಾವಲಾಗಿ ನಿಲ್ಲುವ ಪ್ರಯತ್ನವನ್ನೂ ಮಾಡಿದೆ. ಇದೀಗ ‘ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ದುರಂತ’ದ ಬಗ್ಗೆ ಹಾಗೂ ಘಟನಾನಂತರದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ರಾಜಭವನದ ಗಮನಸೆಳೆಯುತ್ತಿದ್ದು, ಘಟನೆ ಬಗ್ಗೆ ಸೂಕ್ತ ತನಿಖೆ ನಡೆಯಬೇಕು, ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಿರುವ ಅಧಿಕಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು. ಜೊತೆಗೆ ತನಿಖೆ ಮುಗಿಯುವವರೆಗೂ 11 ಜನರ ಮಾರಣಹೋಮಕ್ಕೆ ನೇರ ಕಾರಣವಾಗಿರುವ ರಾಜ್ಯ ಸರ್ಕಾರವನ್ನು ಅಮಾನತಿನಲ್ಲಿಡಬೇಕೆಂದು ಮನವಿ ಸಲ್ಲಿಸಲಾಗಿದೆ.

ಐಪಿಎಲ್​ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್​ಸಿಬಿ ತಂಡವನ್ನು ಅಭಿನಂದಿಸುವ ಹಾಗೂ ವಿಜಯೋತ್ಸವ ಸಮಾರಂಭ ಜೂನ್​​ 4ರಂದು ವಿಧಾನಸೌಧ ಹಾಗೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸೇರಿದಂತೆ ಸಚಿವರು, ಜನಪ್ರತಿನಿಧಿಗಳು ಹಾಗೂ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು.

ಖಾಸಗಿ ಕಂಪನಿಯೊಂದರ ಒಡೆತನದಲ್ಲಿರುವ ಆರ್​ಸಿಬಿ ತಂಡವನ್ನು ಸರ್ಕಾರದ ಅನುಮತಿ ಇಲ್ಲದೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​​ ಅವರ ನೇತೃತ್ವದಲ್ಲಿ ಸಮಾರಂಭ ಏರ್ಪಡಿಸಿ ಸನ್ಮಾನಿಸಲಾಗಿದೆ. ಬೃಹತ್ ಸಾರ್ವಜನಿಕ ಸಮಾರಂಭ ಇದಾಗಿದ್ದು, ಸಂಭವನೀಯ ಅನಾಹುತಗಳನ್ನು ಮನಗಂಡು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯೇ ಈ ಸಮಾರಂಭ ನಡೆಸಲು ಸಾಧ್ಯವಿಲ್ಲ ಎಂದಿತ್ತು. ಆದರೂ ಸಿಎಂ-ಡಿಸಿಎಂ ಅವರು ಹಠಕ್ಕೆ ಬಿದ್ದು ಅಧಿಕಾರ ದುರುಪಯೋಗಪಡಿಸಿಕೊಂಡು ಆರ್​ಸಿಬಿ ಎಂಬ ಖಾಸಗಿ ಕ್ರಿಕೆಟ್ ತಂಡವನ್ನು ವಿಧಾನಸೌಧ ಆವರಣಕ್ಕೆ ಕರೆಸಿಕೊಂಡು ಸನ್ಮಾನಿಸಿ, ಮಾಧ್ಯಮಗಳ ಮೂಲಕ ಭಾರೀ ಪ್ರಚಾರ ಮಾಡಿಸಿರುತ್ತಾರೆ. ಆ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ನೂಕು ನುಗ್ಗಲು ಉಂಟಾಗಿ ಬ್ಯಾರಿಕೇಡುಗಳು ಚಲ್ಲಾಪಿಲ್ಲಿಯಾದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಹೀಗಿದ್ದರೂ ಕೂಡ ಅಂದು ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಸಮಾರಂಭ ನಡೆಸಲು ಸಿಎಂ-ಡಿಸಿಎಂ ಅವರು ಅವಕಾಶ ಮಾಡಿಕೊಟ್ಟಿರುವುದು ಮಹಾ ಅಪರಾಧವಾಗಿದೆ.

ಇದನ್ನೂ ಓದಿ: Bengaluru Stampede: ಆರ್​ಸಿಬಿ ವಿರುದ್ಧ 3ನೇ ಎಫ್​ಐಆರ್​, ಹೆಚ್ಚಿದ ಸಂಕಷ್ಟ

RCB ವಿಜಯಹೋತ್ಸವ ಸಮಾರಂಭದ ವೇಳೆ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತ ಬಗ್ಗೆ ಸತ್ಯಾಂಶಗಳನ್ನು ಮುಚ್ಚಿಕಾಕುವ ಪ್ರಯತ್ನ ರಾಜ್ಯ ಸರ್ಕಾರದಿಂದ ನಡೆದಿದೆ. ಸದರಿ ಪ್ರಕರಣ ಎಷ್ಟು ಗಂಭೀರವಾಗಿದೆ ಎಂದರೆ, ಸಿಎಂ ಮತ್ತು ಡಿಸಿಎಂಯವರಿಗೆ ಪರಿಸ್ಥಿತಿಯ ಅರಿವಿದ್ಧು ಉದ್ದೇಶಪೂರ್ವಕವಾಗಿ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಹಾಗಾಗಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಹಲವು ಸಂಗತಿಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇವೆ ಎಂದು ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.