
ಬೆಂಗಳೂರು, ಏಪ್ರಿಲ್ 27: ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಅವರ ಹೆಸರೇಳಿಕೊಂಡು ಕೋಟ್ಯಂತರ ರೂ. ಮೌಲ್ಯದ ಚಿನ್ನ ವಂಚನೆ (Gold Fraud) ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ED)ದ ಅಧಿಕಾರಿಗಳು ಆರೋಪಿ ಐಶ್ವರ್ಯ ಗೌಡ (Aishwarya Gowda) ಅವರನ್ನು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಿದ್ದರು. 14 ದಿನ ಕಸ್ಟರಿಗೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಇಡಿ ಅಧಿಕಾರಿಗಳ ತನಿಖೆ ವೇಳೆ ಸ್ಫೋಟಕ ವಿಚಾರಗಳು ಬಹಿರಂಗಗೊಂಡಿವೆ.
ಆರ್.ಆರ್.ನಗರದ ಕಾಂಗ್ರೆಸ್ ಮುಖಂಡ ತಿಬ್ಬೇಗೌಡ ಜತೆಗೂ ಐಶ್ವರ್ಯಾ ಗೌಡ ಹಣದ ವ್ಯವಹಾರ ನಡೆಸಿದ್ದರು ಎಂಬುವುದು ತಿಳಿದುಬಂದಿದೆ. ತಿಬ್ಬೇಗೌಡ ಜೊತೆ ಸುಮಾರು 60 ಕೋಟಿ ರೂ. ಹಣದ ವಹಿವಾಟನ್ನು ಐಶ್ವರ್ಯ ಗೌಡ ನಡೆಸಿದ್ದರು. ತಿಬ್ಬೇಗೌಡ ಜೊತೆ ವ್ಯವಹಾರ ನಡೆಸಿದ 60 ಕೋಟಿ ಹಣ ಯಾರಿಗೆ ಸೇರಿದ್ದು? ಹಣದ ಮೂಲ ಯಾವುದು ಎಂದು ಇಡಿ ತನಿಖೆ ಮುಂದುವರಿಸಿದೆ.
ಐಶ್ವರ್ಯಾ ಗೌಡ ಕೇವಲ ಮೂರು ವರ್ಷದಲ್ಲಿ 75 ಕೋಟಿ ರೂ. ಹಣದ ವ್ಯವಹಾರ ಮಾಡಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ 46 ಲಕ್ಷ ರೂ. ಆದಾಯ ಬಂದಿದೆ ಎಂದು ಟ್ಯಾಕ್ಸ್ ಕಟ್ಟಲು ಮುಂದಾಗಿದ್ದರು. ಆದರೆ, ಆದಾಯ ತೆರಿಗೆ ಅಧಿಕಾರಿಗಳು ರಿಜೆಕ್ಟ್ ಮಾಡಿ ಕಳುಹಿಸಿದ್ದರು.
ಇಡಿ ಅಧಿಕಾರಿಗಳು ಬೆಂಗಳೂರಿನ ಆರ್.ಆರ್.ನಗರದ ಕಾಂಗ್ರೆಸ್ ಮುಖಂಡ ತಿಬ್ಬೇಗೌಡ ನಿವಾಸದ ಮೇಲೂ ದಾಳಿ ನಡೆಸಿದ್ದರು. ತಿಬ್ಬೇಗೌಡ ಅವರ ಬ್ಯಾಂಕ್ ಅಕೌಂಟ್ಸ್ ಡೀಟೆಲ್ಸ್, ದಾಖಲೆಗಳನ್ನು ಇಡಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಇಡಿ ಅಧಿಕಾರಿಗಳು ಸದ್ಯದರಲ್ಲಿ ತಿಬ್ಬೇಗೌಡ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇಡಿ ಅಧಿಕಾರಿಗಳು ಗುರುವಾರ (ಏ.24) ರಂದು ಐಶ್ವರ್ಯ ಗೌಡ ಅವರ ಎರಡು ಮನೆ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ 2.25 ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಇಡಿ ಪ್ರಕಟಣೆ ಮೂಲಕ ತಿಳಿಸಿದೆ.
ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ಐಶ್ವರ್ಯ ಗೌಡ ಕೋಟ್ಯಂತರ ರೂಪಾಯಿ ಹಣದ ವಹಿವಾಟು ಮಾಡಿದ್ದರು. ಈ ಸಂಬಂಧ ಬೆಂಗಳೂರಿನ ಆರ್.ಆರ್.ನಗರ ಚಂದ್ರಾಲೇಔಟ್ ಸೇರಿ ಮಂಡ್ಯ ಠಾಣೆಗಳಲ್ಲಿ ಹಲವು ವಂಚನೆ ಕೇಸ್ ದಾಖಲಾಗಿದ್ದವು. ಐಶ್ವರ್ಯ ಗೌಡ ಅಕ್ರಮ ಹಣ ವಹಿವಾಟು ಸಂಬಂಧ ಐಟಿ ಮತ್ತು ಇಡಿಗೆ ಬ್ಯಾಟರಾಯನಪುರ ಎಸಿಪಿ ಭರತ್ ರೆಡ್ಡಿ ಪತ್ರ ಬರೆದಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ-ಐಶ್ವರ್ಯಾಗೌಡ ನಂಟಿನ ರಹಸ್ಯ ಬಯಲು ಮಾಡಿದ ಇಡಿ
ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಐಶ್ವರ್ಯಗೌಡ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ತನಿಖೆಯ ಮುಂದುವರೆದ ಭಾಗವಾಗಿ ಇಡಿ ಅಧಿಕಾರಿಗಳು ಆರೋಪಿ ಐಶ್ವರ್ಯ ಗೌಡ ಮನೆ, ಕಚೇರಿ, ಶಾಸಕ ವಿನಯ್ ಕುಲಕರ್ಣಿ ಮನೆ ಸೇರಿದಂತೆ ಒಟ್ಟು 14 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
Published On - 2:51 pm, Sun, 27 April 25